ಕರುನಾಡಿನ ಸೆರೆಮನೆಗಳಲ್ಲಿ ‘ಸುಧಾರಣಾ ಪರ್ವ’ ಶುರುವಾಗಿದ್ದು, ಇನ್ಮುಂದೆ ಸನ್ನಡತೆ ತೋರುವ ಕೈದಿಗಳಿಗೆ ಕನಿಷ್ಠ 2 ತಿಂಗಳು ಶಿಕ್ಷೆ ಪ್ರಮಾಣ ಕಡಿತ,ಉತ್ತಮ ಕರ್ತವ್ಯ ನಿರ್ವಹಿಸಿರುವ ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬಹುಮಾನ ಜತೆ ‘ಹೊರ ರಾಜ್ಯ ಪ್ರವಾಸ’ ಭಾಗ್ಯ ಸಿಗಲಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಅಕ್ರಮ ಚಟುವಟಿಕೆಗಳಿಂದಲೇ ಕುಖ್ಯಾತ ಪಡೆದಿದ್ದ ಕರುನಾಡಿನ ಸೆರೆಮನೆಗಳಲ್ಲಿ ‘ಸುಧಾರಣಾ ಪರ್ವ’ ಶುರುವಾಗಿದ್ದು, ಇನ್ಮುಂದೆ ಸನ್ನಡತೆ ತೋರುವ ಕೈದಿಗಳಿಗೆ ಕನಿಷ್ಠ 2 ತಿಂಗಳು ಶಿಕ್ಷೆ ಪ್ರಮಾಣ ಕಡಿತ (ರೆಮಿಶೀನ್) ಹಾಗೂ ಉತ್ತಮ ಕರ್ತವ್ಯ ನಿರ್ವಹಿಸಿರುವ ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬಹುಮಾನ ಜತೆ ‘ಹೊರ ರಾಜ್ಯ ಪ್ರವಾಸ’ ಭಾಗ್ಯ ಸಿಗಲಿದೆ.
ಕಾರಾಗೃಹದಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ಈ ಸ್ವಚ್ಛತಾ ಅಭಿಯಾನದಲ್ಲಿ ಕೈದಿಗಳು ಹಾಗೂ ಸಿಬ್ಬಂದಿ ವರ್ಗ ಭಾಗಿಯಾಗುವುದನ್ನು ಪೋತ್ಸಾಹಿಸಲು ಹೊಸ ಯೋಜನೆಗಳನ್ನು ರೂಪಿಸಿದ್ದಾರೆ. ಅದರನ್ವಯ ತಮ್ಮ ವಿವೇಚನಾಧಿಕಾರವನ್ನು ಬಳಸಿ ಸಜಾ ಕೈದಿಗಳಿಗೆ ಶಿಕ್ಷೆ ಪ್ರಮಾಣ ಕಡಿತಗೊಳಿಸುವ ಮಹತ್ವದ ತೀರ್ಮಾನವನ್ನು ಡಿಜಿಪಿ ತೆಗೆದುಕೊಂಡಿದ್ದಾರೆ.
ಮೊದಲ ಹಂತದಲ್ಲಿ ಶಿವಮೊಗ್ಗ ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ಆರು ಮಂದಿ ಸಜಾ ಕೈದಿಗಳಿಗೆ ತಲಾ ಎರಡು ತಿಂಗಳು ಶಿಕ್ಷೆ ಮಾಫಿ ಆಗಲಿದ್ದು, ಮುಂದಿನ ಹಂತದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 20 ಕೈದಿಗಳಿಗೆ ಈ ಭಾಗ್ಯ ಸಿಗಲಿದೆ. ಈ ವಿಶೇಷ ಸೌಲಭ್ಯ ಪಡೆಯಲು ಕೆಲ ನಿಯಮಗಳನ್ನು ಸಹ ಅಲೋಕ್ ಕುಮಾರ್ ರೂಪಿಸಿದ್ದಾರೆ.
1 ವರ್ಷದಲ್ಲಿ 2 ತಿಂಗಳು ಕಡಿತ:
ರಾಜ್ಯದ ಕಾರಾಗೃಹದ ನಿಯಮಾವಳಿಯಲ್ಲಿ ಸಜಾ ಕೈದಿಗಳಿಗೆ ವರ್ಷದಲ್ಲಿ 1 ರಿಂದ 2 ತಿಂಗಳು ಶಿಕ್ಷೆ ಮಾಫಿ (ರೆಮಿಶೀನ್) ಮಾಡುವ ಅಧಿಕಾರವು ಕಾರಾಗೃಹದ ಇಲಾಖೆಯ ಡಿಜಿಪಿ ಅವರಿಗೆ ಇದೆ. ಆದರೆ ಇದುವರೆಗೆ ಈ ಅಧಿಕಾರವನ್ನು ಚಲಾಯಿಸಿ ಕೈದಿಗಳಿಗೆ ಶಿಕ್ಷೆ ಕಡಿತ ಮಾಡುವ ಕ್ರಮವಾಗಿಲ್ಲ. ಇನ್ಮುಂದೆ ಜೈಲಿನಲ್ಲಿ ಉತ್ತಮ ನಡವಳಿಕೆ ತೋರುವ ಸಜಾ ಕೈದಿಗಳಿಗೆ ಶಿಕ್ಷೆಯಿಂದ ಮುಕ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ನಿಯಮ:
ಶಿಕ್ಷೆ ಮಾಫಿಗೆ ಆಯ್ಕೆಯಾಗಲು ಕೆಲ ನಿಮಯ ರೂಪಿಸಲಾಗಿದೆ. ಕಾರಾಗೃಹದಲ್ಲಿ ಯಾವುದೇ ನಿಯಮಬಾಹಿರ ಕೃತ್ಯಗಳಲ್ಲಿ ತೊಡಗಬಾರದು, ಸಹ ಕೈದಿಗಳು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಒಳ್ಳೆಯ ನಡವಳಿಕೆ, ಕಾರಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಹೀಗೆ ಕೆಲ ಮಾನದಂಡ ಅನುಸರಿಸಲಾಗುತ್ತದೆ ಎಂದರು.
ಇದಲ್ಲದೆ ಆಕಾಶವಾಣಿ ಹಾಗೂ ಎಫ್‌ಎಂಗಳಲ್ಲಿ ಹಾಡುಗಾರಿಕೆಗೆ ವೇದಿಕೆ ಹಾಗೂ ಜೈಲಿನಲ್ಲಿ ಕೈದಿಗಳು ತಯಾರಿಸುವ ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಗಣರಾಜ್ಯೋತ್ಸವದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳಿಗೆ ಹೊರ ರಾಜ್ಯದ ಪ್ರವಾಸ
ಕಾರಾಗೃಹಗಳಲ್ಲಿ ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿ-ಸಿಬ್ಬಂದಿಗೆ ಹೊರರಾಜ್ಯಗಳಿಗೆ ಅಧ್ಯಯನ ಪ್ರವಾಸ ಕಳುಹಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಮೊದಲ ತಂಡವು ಗುಜರಾತ್ ರಾಜ್ಯದ ಕಾರಾಗೃಹಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದೆ. ಬಳಿಕ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿ ಸೇರಿದಂತೆ ಇತರೆ ರಾಜ್ಯಗಳಿಗೆ ಸಹ ಅಧ್ಯಯನ ಪ್ರವಾಸ ನಿಗದಿಪಡಿಸಲಾಗುತ್ತದೆ. ಈ ವೇಳೆ ಆ ರಾಜ್ಯಗಳ ಪ್ರಮುಖ ಸ್ಥಳಗಳ ವೀಕ್ಷಣೆಗೆ ಸಹ ಅವಕಾಶವಿರುತ್ತದೆ. ಈ ರೀತಿಯ ಅಧ್ಯಯನ ಪ್ರವಾಸವು ಇದೇ ಮೊದಲ ಬಾರಿಗೆ ಕಾರಾಗೃಹ ಅಧಿಕಾರಿಗಳಿಗೆ ಸಿಗಲಿದೆ ಎಂದು ನುಡಿದರು. ನಗದು ಬಹುಮಾನ ಹೆಚ್ಚಳ:
ಒಳ್ಳೆಯ ಕೆಲಸ ಮಾಡಿದ ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಪೋತ್ಸಾಹಿಸಲು ನಗದು ಬಹುಮಾನ ಹಾಗೂ ಅಪಾಯ ಭತ್ಯೆ ಮೊತ್ತದ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ₹2000 ಮಾತ್ರ ಬಹುಮಾನ ಕೊಡಬಹುದಾಗಿದೆ. ಇದನ್ನು ₹9000ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಕೋರಲಾಗಿದೆ. ಅದೇ ರೀತಿ ಪೊಲೀಸರ ಮಾದರಿಯಲ್ಲಿ ಕಾರಾಗೃಹ ಸಿಬ್ಬಂದಿಗೆ ಸಹ ₹1000 ದಿಂದ ₹3000ಕ್ಕೆ ಅಪಾಯ ಭತ್ಯೆ ಹೆಚ್ಚಿಸುವಂತೆ ಪ್ರಸ್ತಾಪಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದರು.
ಸಿಬ್ಬಂದಿಗೆ ಪಿ-ಕ್ಯಾಪ್ ಭಾಗ್ಯ:
ಇನ್ನು ಪೊಲೀಸರ ಮಾದರಿಯಲ್ಲೇ ಕಾರಾಗೃಹ ಸಿಬ್ಬಂದಿಗೆ ಪಿ-ಕ್ಯಾಪ್ ವಿತರಣೆ ಹಾಗೂ ಸೇವಾ ಹಿರಿತನ ಆಧಾರದ ಮೇರೆಗೆ ಮುಂಬಡ್ತಿ ನೀಡಿಕೆಯಲ್ಲಿ ಸಹ ಬದಲಾವಣೆಗೆ ಯೋಜಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು. ಅಲ್ಲದೆ ವೀಕ್ಷರ ಹುದ್ದೆಗೆ ನೇಮಕಗೊಳ್ಳುವ ಸಿಬ್ಬಂದಿಗೆ ಮುಂಬಡ್ತಿ ಹಂತದಲ್ಲಿ ಎಎಸ್‌ಪಿ ಸ್ಥಾನಕ್ಕೆ ಪರಿಗಣಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ವಿಚಾರಣೆ ಇಲ್ಲದೆ ಸಸ್ಪೆಂಡ್ ಇಲ್ಲ:
ರಾಜ್ಯದ 54 ಕಾರಾಗೃಹಗಳ ಪೈಕಿ 43 ಕಾರಾಗೃಹಗಳ ಅಧಿಕಾರಿ-ಸಿಬ್ಬಂದಿ ವರ್ಗದ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇದೆ. ಸಣ್ಣಪುಟ್ಟ ಕಾರಣಗಳಿಗೆ ಸಿಬ್ಬಂದಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಇದು ಅವರ ಮನೋಸ್ಥೈರ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ ಪ್ರಾಥಮಿಕ ಹಂತದ ವಿಚಾರಣೆ ಇಲ್ಲದೆ ಅಮಾನತುಗೊಳಿಸುವುದಿಲ್ಲ ಎಂದು ಡಿಜಿಪಿ ಹೇಳಿದರು. ಕೋಟ್:
ಸಿಸಿಟಿವಿ, ಮೊಬೈಲ್ ಜಾಮರ್ ಅಳವಡಿಕೆಗಳಿಂದ ಮಾತ್ರ ಕಾರಾಗೃಹಗಳ ವ್ಯವಸ್ಥೆ ಬದಲಾಗಲ್ಲ. ಸೆರೆಮನೆಗಳಲ್ಲಿ ಸುಧಾರಣೆ ಕಾಣಬೇಕಾದರೆ ಮಾನವ ಸಂಪನ್ಮೂಲವು ಉತ್ತಮವಾಗಿ ಕೆಲಸ ಮಾಡಬೇಕು. ತಪ್ಪು ಕಂಡಾಗ ದಂಡಿಸುವಷ್ಟೇ ಒಳ್ಳೆಯ ಕೆಲಸಗಳಿಗೆ ಉತ್ತೇಜನೆ ಸಿಗಬೇಕು. ಹೀಗಾಗಿ ಕೆಲ ಪೋತ್ಸಾಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
- ಅಲೋಕ್ ಕುಮಾರ್, ಡಿಜಿಪಿ, ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ.

