ನರಸಿಂಹರಾಜಪುರಸನಾತನ ಧರ್ಮಕ್ಕೆ ವಿಶೇಷ ಸ್ಥಾನಮಾನವಿದೆ. ಪ್ರತಿ ಸಮಸ್ಯೆಗಳಿಗೂ ಸನಾತನ ಧರ್ಮದಲ್ಲಿ ಉತ್ತರವಿದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧು ಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
-ಬಡಗಬೈಲು ಗ್ರಾಮದ ಕನಗೆರೆಯ ರಂಗನಾಥೇಶ್ವರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸನಾತನ ಧರ್ಮಕ್ಕೆ ವಿಶೇಷ ಸ್ಥಾನಮಾನವಿದೆ. ಪ್ರತಿ ಸಮಸ್ಯೆಗಳಿಗೂ ಸನಾತನ ಧರ್ಮದಲ್ಲಿ ಉತ್ತರವಿದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧು ಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಗುರುವಾರ ಬಡಗಬೈಲು ಗ್ರಾಮದ ಕನಗೆರೆ ಶ್ರೀ ರಂಗನಾಥೇಶ್ವರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಕುಂಭಾಭಿಷೇಕದಲ್ಲಿ ಆಶೀರ್ವಚನ ನೀಡಿದರು. ಸನಾತನ ಧರ್ಮದ ವೇದ, ಭಗವದ್ಗೀತೆ, ಪುರಾಣ, ಶಾಸ್ತ್ರದ ಗ್ರಂಥ ಗಳಲ್ಲಿ ಪ್ರತಿ ಸಮಸ್ಯೆಗೂ ಉತ್ತರವಿದೆ. ನಮ್ಮ ಸನಾತನ ಧರ್ಮವು ವಿಸ್ತಾರವಾಗಿದೆ. ಶಂಕರಾಚಾರ್ಯರು ಸನಾತನ ಧರ್ಮದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಸನಾತನ ಧರ್ಮ, ಪರಂಪರೆ ಶ್ರೇಷ್ಠ. ಪ್ರತಿಯೊಬ್ಬರೂ ತಾವು ಸುಖವಾಗಿರಬೇಕು ಎಂದು ಬಯಸುತ್ತಾರೆ.ಸುಖವಾಗಿರಲು ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದರೆ, ಸುಖವಾಗಿರಲು ಬೇಕಾದ ಮಾರ್ಗ ಕಂಡುಕೊಂಡಿರುವುದಿಲ್ಲ. ಯಾವುದೇ ಪ್ರಯತ್ನ ಮಾಡದೆ ಅಥವಾ ಪ್ರಯತ್ನ ತಪ್ಪಾಗಿದ್ದರೆ ಫಲ ಸಿಗುವುದಿಲ್ಲ. ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು ಪ್ರಯತ್ನ ಪಟ್ಟರೆ ಸುಖ ಸಿಗಲಿದೆ ಎಂದರು.
ಪ್ರತಿಯೊಬ್ಬರು ಪ್ರತಿ ದಿನ ತಮ್ಮ ಊರಿನ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯಬೇಕು. ಪ್ರತಿ ದಿನ ಆಗದಿದ್ದರೆ ಕನಿಷ್ಠ ವಾರದಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಿ ದೇವರ ದರ್ಶನ ಪಡೆಯಬೇಕು. ಹಿಂದೂ ಧರ್ಮ ವನ್ನು ಪ್ರತಿಯೊಬ್ಬರೂ ಸರಿಯಾಗಿ ತಿಳಿದುಕೊಳ್ಳಬೇಕು. ಬೇರೆ ಧರ್ಮವನ್ನು ಗೌರವಿಸೋಣ. ಅದೇ ರೀತಿ ನಮ್ಮ ಧರ್ಮ ವನ್ನು ಆಚರಣೆಗೆ ತರಬೇಕು. ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಬೇಕು. ಸಮಾಜಕ್ಕೆ ಒಳ್ಳೆಯದು ಮಾಡಿದವರಿಗೆ ಮುಂದೆ ಸುಖ ಸಿಗಲಿದೆ. 1200 ವರ್ಷಗಳ ಹಿಂದೆ ಶಂಕರಾರ್ಚಾಯರು ಮಾಡಿದ ಉಪದೇಶ ಪ್ರಪಂಚಕ್ಕೆ ಉಪಯೋಗ ವಾಗಿದೆ. ಶಂಕರಾಚಾರ್ಯರು ಕೇವರ ಗುರುಗಳಲ್ಲ ಜಗದ್ಗುರು ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸನಾತನ ಧರ್ಮದ ಉಳಿಸಲು ಶೃಂಗೇರಿ ಉಭಯ ಜಗದ್ಗುರು ತುಂಬಾ ಶ್ರಮ ಪಟ್ಟಿದ್ದಾರೆ. ಶೃಂಗೇರಿ ಮಠದಿಂದ ರಾಜ್ಯದ 17 ಸಾವಿರ ದೇವಸ್ಥಾನಗಳು ಜೀರ್ಣೋದ್ದಾರಗೊಂಡಿದೆ. ನಾನು ಶಾಸಕನಾಗಿ ಶೃಂಗೇರಿ ಕ್ಷೇತ್ರ ಅಭಿವೃದ್ಧಿಗೆ ಶೃಂಗೇರಿ ಶ್ರೀಗಳ ಆಶೀರ್ವಾದವೇ ಕಾರಣ. ಕನಗೆರೆಯಲ್ಲಿ ದೇವಸ್ಥಾನದ ಸಮಿತಿಯವರು ಸುಂದರ ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನಕ್ಕೆ ಹೋಗಲು ಬೇಕಾದ ರಸ್ತೆ ತುರ್ತಾಗಿ ನಾನು ಮಾಡಿಸಿಕೊಟ್ಟಿದ್ದೇನೆ. ಶೃಂಗೇರಿ ಮಠದ ಹೆಸರು ವಿಶ್ವವ್ಯಾಪಿಯಾಗಿದೆ. ಶೃಂಗೇರಿ ಮಠದಿಂದ ಶಾಸಕನಾದ ನನಗೂ ಗೌರವ ಬಂದಿದೆ. ಈ ದೇವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶೃಂಗೇರಿ ಶ್ರೀಗಳು ಆಗಮಿಸಿದ್ದರಿಂದ ದೇವಸ್ಥಾನದ ಶಕ್ತಿ ಹೆಚ್ಚಾಗಿದೆ ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ನನ್ನ ಸ್ವಂತ ಊರಿಗೆ ರಂಗನಾಥೇಶ್ವರ ಸ್ವಾಮಿ ಪ್ರತಿಷ್ಠಾ ಕಾರ್ಯ ಕ್ರಮಕ್ಕೆ ಶೃಂಗೇರಿ ಶ್ರೀಗಳು ಆಗಮಿಸಿರುವುದು ನನಗೆ ಹೆಮ್ಮೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಇಲ್ಲಿನ ಭಕ್ತರು ಸಹಾಯ ಮಾಡಿದ್ದಾರೆ. ನಾನು ಸಚಿವನಾಗಿದ್ದಾಗ ಈ ದೇವಸ್ಥಾನಕ್ಕೆ ₹15 ಲಕ್ಷ ಮಂಜೂರು ಮಾಡಿದ್ದೆ. ಅದರಲ್ಲಿ ಅರ್ಧ ಹಣ ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣ ಶಾಸಕರು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.ಶೃಂಗೇರಿ ಶ್ರೀಗಳು ನಮ್ಮ ಊರಿಗೆ ಆಗಮಿಸಿದ್ದರಿಂದ ನಮ್ಮ ಊರಿನ ಸಮಸ್ಯೆಗಳು ಬಗೆಹರಿಯಲಿದೆ. ಶೃಂಗೇರಿ ಮಠದಲ್ಲಿ ಅನ್ನ, ಅಕ್ಷರ ದಾಸೋಹ ನಡೆಯುತ್ತಿದೆ. ಮಠದ ಆಸ್ಪತ್ರೆ ಚೆನ್ನಾಗಿ ನಡೆಯುತ್ತಿದೆ. ಶೃಂಗೇರಿ ಶ್ರೀಗಳಲ್ಲಿ ಶಂಕರಾಚಾರ್ಯರ ಪ್ರತಿರೂಪ ಕಾಣುತ್ತಿದ್ದೇವೆ ಎಂದರು.
ದೇವಸ್ಥಾನದ ಸಮಿತಿಯವರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು. ದೇವಸ್ಥಾನಕ್ಕೆ ವಿಶೇಷ ದಾನ ನೀಡಿದವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಇದಕ್ಕೂ ಮೊದಲು ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದಾಗಿ ಪೂರ್ಣ ಕುಂಭ, ವಾದ್ಯದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ರಾಮನಾಥೇಶ್ವರ ಸ್ವಾಮಿ ರುದ್ರಾಭಿಷೇಕ ನೆರವೇರಿಸಿದರು. ನಂತರ ದೇವಸ್ಥಾನದ ಶಿಖರಕ್ಕೆ ಕುಂಬಾಭಿಷೇಕ ನೆರವೇರಿಸಿದರು. ಆಶೀರ್ವಾದದ ನಂತರ ಎಲ್ಲಾ ಭಕ್ತರಿಗೂ ಶ್ರೀಗಳು ಫಲ ಮಂತ್ರಾಕ್ಷತೆ ವಿತರಿಸಿದರು.
ಶಿವಮೊಗ್ಗದ ಪ್ರತಿಮಾ ದೇವಸ್ಥಾನದ ಇತಿಹಾಸ ವಿವರಿಸಿದರು. ಗಿರೀಶ್ ಭಟ್ ಶ್ರೀ ಪ್ರಿಯ, ದೇವಸ್ಥಾನದ ಸಮಿತಿ ಅಧ್ಯಕ್ಷ ಎಂ.ಕೆ.ವೆಂಕಟೇಶ್, ಹರೀಶ್ ಭಟ್ ಇದ್ದರು. ಶ್ರೀನಾಥ್ ಭಟ್ ಮತ್ತು ಸಂಘಡಿಗರು ವೇದ ಘೋಷ ಮಾಡಿದರು.