ಸೋಮರಡ್ಡಿ ಅಳವಂಡಿ ಕೊಪ್ಪಳ
ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲೂ ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ ವ್ಯಾಪ್ತಿಯ ಹಲವಾಗಲಿ ಸೇರಿದಂತೆ ವಿವಿಧ ಗ್ರಾಮಗಳ ಬಳಿ ತುಂಗಭದ್ರಾ ನದಿ ಬಗೆದು ಮರಳು ದಂಧೆ ಅವ್ಯಾಹತವಾಗಿ ನಡೆಸಲಾಗುತ್ತಿದೆ.ರಾತ್ರೋರಾತ್ರಿ ನಡೆಯುವ ಈ ಮರಳು ದಂಧೆ ಹಗಲು ವೇಳೆ ಏನೂ ಇಲ್ಲ ಎನ್ನುವಂತೆ ಇರುತ್ತದೆ. ರಾತ್ರಿ ಏಕಾಏಕಿ ಎರಡು ಹಿಟಾಚಿ ತುಂಗಭದ್ರಾ ಒಡಲು ಬಗೆಯುವ ದೃಶ್ಯ ಎಂಥವರ ಕರುಳು ಚುರ್ ಎನ್ನುವಂತೆ ಆಗುತ್ತದೆ. ಹಗಲು ವೇಳೆಯಲ್ಲಿ ಪೋದೆ ಸೇರುವ ಹಿಟಾಚಿ ರಾತ್ರಿಯಾಗುತ್ತಿದ್ದಂತೆ ತುಂಗಭದ್ರೆಯ ಒಡಲು ಬಗೆಯಲಾರಂಭಿಸುತ್ತವೆ.
ಹೀಗೆ ಬಗೆದು ಸಂಗ್ರಹಿಸಿದ ಮರಳನ್ನು ರಾಕ್ಷಸನಂತೆ ಟಿಪ್ಪರ್‌ಗಳಲ್ಲಿ ರಾತ್ರೋರಾತ್ರಿ ಲೋಡ್ ಮಾಡಿಕೊಂಡು ಸಾಗಿಸುತ್ತಾರೆ. ಅಚ್ಚರಿ ಎಂದರೆ ಹೀಗೆ ಸಾಗಿಸಲು ಪ್ರತ್ಯೇಕ ರಸ್ತೆ ನಿರ್ಮಿಸಿಕೊಂಡಿರುವುದು ಎಲ್ಲರಿಗೂ ಕಾಣ ಸಿಗುತ್ತದೆ. ಇದೆಲ್ಲವೂ ಪೊಲೀಸ್ ಇಲಾಖೆಗೆ ಗೊತ್ತಿಲ್ಲದ ವಿಷಯ ಅಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ರಾತ್ರಿ ಸಾಗುವ ಟಿಪ್ಪರ್ ಮಾಹಿತಿಯೂ ಇಲ್ಲ ಎಂದೇನೂ ಇಲ್ಲ.ದುರಂತ ಎಂದರೆ ರಾತ್ರಿ ಅಪ್ಪಿತಪ್ಪಿ ಮರಳು ಸಾಗಿಸುವ ದಾರಿಯಲ್ಲಿ ಯಾರಾದರೂ ತಮ್ಮ ಹೊಲಕ್ಕೆ ಹೋದರೆ ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡಲಾಗುತ್ತದೆ. ಪೊಲೀಸರಿಗೆ ಮಾಹಿತಿ ನೀಡಲು ಆಗಮಿಸಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡು, ಎದುರು ಮಾತನಾಡಿದರೆ ಗೂಸಾ ಇಕ್ಕಲಾಗುತ್ತದೆ. ಆದರೆ, ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಗೂಂಡಾಗಳ ಪಡೆ ನಿಂತಿರುತ್ತಾರೆ. ಹೀಗಾಗಿ, ಅತ್ತ ಯಾರೂ ಸುಳಿಯುವುದೂ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಬರಿದಾಗುತ್ತಿರುವ ತುಂಗಭದ್ರಾ: ಬಿಸಿಲ ಝಳಕ್ಕೆ ತುಂಗಭದ್ರಾ ನದಿ ಈಗಾಗಲೇ ಬರಿದಾಗುತ್ತಿದೆ. ಹೀಗೆ ಬರಿದಾಗುವುದು ಮರಳು ದಂಧೆ ಮಾಡುವವರಿಗೆ ಆನಂದ ತರುತ್ತದೆ. ತುಂಗಭದ್ರಾ ಬರಿದಾದಷ್ಟು ಅವರಿಗೆ ಅನುಕೂಲ. ಬರಿದು ಆಗದಿದ್ದರೂ ಫಿಲ್ಟರ್ ಮರಳು ದಂಧೆ ಮಾಡುತ್ತಾರೆ. ಫಿಲ್ಟರ್ ಮರಳು ದಂಧೆ ಮಾಡುವುದು ಕಾನೂನುಬಾಹಿರ. ಆದರೂ ಇಲ್ಲಿ ಮಾಡುತ್ತಾರೆ.
ಕ್ರಮಕ್ಕೆ ಆಗ್ರಹ: ತುಂಗಭದ್ರಾ ನದಿಯಲ್ಲಿ ಮರಳು ದಂಧೆ ನಡೆಯುವುದಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ವಾಟ್ಸ್‌ಆ್ಯಪ್‌ನಲ್ಲಿ ಫೋಟೋ, ವೀಡಿಯೋ ಅಪ್‌ಲೋಡ್ ಸಹ ಮಾಡಿದ್ದಾರೆ.
ಕನ್ನಡಪ್ರಭಕ್ಕೂ ಫೋಟೋ ಮತ್ತು ವೀಡಿಯೋ ಲಭ್ಯವಾಗಿದೆ. ಮರಳು ಅಕ್ರಮ ದಂಧೆಗೆ ಸೂತ್ರಧಾರರೊಬ್ಬರು ಇದ್ದಾರೆ. ಅವರ ಮೂಲಕವೇ ಎಲ್ಲವೂ ನಡೆಯುತ್ತಿದ್ದು, ಆಡಳಿತ ವ್ಯವಸ್ಥೆ ಅಣಕಿಸುತ್ತಿದೆ. ತುಂಗಭದ್ರಾ ನದಿಯಲ್ಲಿ ಮರಳು ಬಗೆದು ಬೇರೆಡೆ ಸಂಗ್ರಹಿಸಿದ್ದಾರೆ. ಇದೆಲ್ಲವನ್ನು ತನಿಖೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಧಿಕಾರಿಗಳೇ ಇತ್ತ ನೋಡಿ: ಹಲವಾಗಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಬಳಿ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಮರಳು ದಂಧೆಯ ಕುರಿತು ಅಧಿಕಾರಿಗಳು ನೋಡಬೇಕಾಗಿದೆ. ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದೆ ಇರುವುದು ಅನೇಕ ಅನುಮಾನಗಳಿಗೆ ಪುಷ್ಟಿ ನೀಡಿದೆ.
