ಮುಂಡರಗಿ: ಮರಳು ಟೆಂಡರ್‌ದಾರರು ಸಲ್ಲಿಸಿದ ಅರ್ಜಿಗಳನ್ನು ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ ಕಾನೂನುಬಾಹಿರವಾಗಿ ತಿರಸ್ಕರಿಸಿ ತಮಗೆ ಬೇಕಾದ, ಅರ್ಹರಲ್ಲದ ಟೆಂಡರ್‌ದಾರರಿಗೆ ಅನುಕೂಲ ಮಾಡಿ ಅವರಿಗೆ ಟೆಂಡರ್ ನೀಡುವ ಮೂಲಕ ಕಾನೂನು ಸಚಿವರ ತವರು ಜಿಲ್ಲೆಯಲ್ಲಿಯೇ ಮರಳು ಟೆಂಡರ್ ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂದು ತಾಲೂಕಿನ ಮರಳು ಟೆಂಡರ್‌ದಾರರು ಆರೋಪಿಸಿದ್ದಾರೆ.ಈ ಕುರಿತು ಟೆಂಡರ್‌ದಾರ ಪ್ರಲ್ಹಾದ ಹೊಸಮನಿ ಸೇರಿದಂತೆ ವಿವಿಧ ಟೆಂಡರ್‌ದಾರರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮರಳು ಮೇಲ್ವಿಚಾರಣಾ ಸಮಿತಿ( ಡಿಎಸ್‌ಎಂ) ಕ್ರಮ ವಿರೋಧಿಸಿದರು.ಅರ್ಹತಾ ಮಾನದಂಡಗಳನ್ನು ಪೂರೈಸಿ, ಪ್ರತಿಕ್ರಿಯಾತ್ಮಕ ಟೆಂಡರ್ ಸಲ್ಲಿಸಿದರೂ ಈಗಾಗಲೇ ನೂರಾರು ಕೋಟಿ ವಹಿವಾಟು ಮಾಡುವ ಟೆಂಡರ್‌ದಾರರ ಟೆಂಡರ್‌ಗಳನ್ನು ತಿರಸ್ಕರಿಸಿ ಪಾನ್, ಬೀಡಾ ಅಂಗಡಿಯವರಿಗೆ, ಕಿರಾಣಿ ಅಂಗಡಿಯವರಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಒಪನ್ ಮಾಡುವ ದಿನ ಟೆಂಡರ್‌ದಾರರ ಸಮ್ಮುಖದಲ್ಲಿ ತೆರೆಯದೆ, ದಿಢೀರನೆ ಆನ್‌ಲೈನ್ ಮೆಸೇಜ್ ಮೂಲಕ ತಿರಸ್ಕಾರದ ಬಗ್ಗೆ ಟೆಂಡರ್‌ದಾರರಿಗೆ ತಿಳಿಸಲಾಗಿದೆ. ಕರ್ನಾಟಕ ಪಾರದರ್ಶಕ ಸಾರ್ವಜನಿಕ ಖರೀದಿ ಕಾಯ್ದೆ 1999(ಕೆಟಿಪಿಪಿ ನ ಸೆಕ್ಷನ್ 13 ಹಾಗೂ 14 ಕಲಂ ಉಲ್ಲಂಘನೆಯಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಮಗೆ ಬೇಕಾದರವರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಸೆಕ್ಷನ್ 16(ಅಪೀಲ್) ತಿರಸ್ಕೃತ ಟೆಂಡರ್‌ಗಳನ್ನು ತಕ್ಷಣವೇ ಪರಿಶೀಲಿಸಬೇಕು.ಅಧಿಕಾರಿಗಳು ಟೆಂಡರ್‌ದಾರರ ಟೆಂಡರ್‌ಗಳು ಯಾವ ಕಾರಣಕ್ಕಾಗಿ ತಿರಸ್ಕಾರವಾಗಿವೆ ಎನ್ನುವ ಕಾರಣಗಳನ್ನು ತಿಳಿಸಬೇಕು. ಆದರೆ ಅದನ್ನು ಏನೂ ತಿಳಿಸದೇ ಏಕಾಏಕಿ ಟೆಂಡರ್ ತಿರಸ್ಕಾರವಾದ ಬಗ್ಗೆ ಇಮೇಲ್ ಮೂಲಕ ಮೆಸೇಜ್ ಕಳಿಸಿರುವುದು ಸರಿಯಾದುದಲ್ಲ. ಆದ್ದರಿಂದ ಇಲಾಖೆ ಇದನ್ನು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಅರ್ಜಿ ಸಲ್ಲಿಸಿದ 2026ರ ಫೆಬ್ರವರಿ 25ರಂದು ಟೆಂಡರ್ ಕರೆಯಲಾಗಿದೆ. ಟೆಂಡರ್ ಕರೆದು 85 ದಿನಗಳವರೆಗೆ ಅರ್ಜಿಗಳ ಪರಿಶೀಲನೆಗೆ ಸಮಯ ತೆಗೆದುಕೊಂಡು, ನ್ಯಾಯಾಲಯಗಳ ರಜೆ ಇರುವ ಈ ಸಂದರ್ಭದಲ್ಲಿ ಮುಂದಿನ 5 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಯ ಎಲ್ಲ ನಿಯಮಗಳನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ.

ಇದರ ಹಿಂದೆ ಯಾವುದೋ ಕಾಣದ ಕೈಗಳು ಹುನ್ನಾರ ನಡೆಸಿದ್ದು, ಕೂಡಲೇ ತಿರಸ್ಕಾರಗೊಂಡ ಟೆಂಡರ್‌ದಾರರಿಗೆ ಖಚಿತ ಕಾರಣ ತಿಳಿಸಬೇಕು. ಕಾರಣ ತಿಳಿಸದಿದ್ದರೆ ಕಾನೂನು ರೀತಿ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಬ‍ಳಿಗೆ ನಿಯೋಗ ತೆಗೆದುಕೊಂಡು ಹೋಗಿ ಮನವರಿಕೆ ಮಾಡಿಕೊಡಲಾಗುವುದು ಎಂದರು.ಕಾನೂನು ಸಚಿವರ ಜಿಲ್ಲೆಯಲ್ಲಿಯೇ ಅಧಿಕಾರಿಗಳು ಹೀಗೆ ಮರೆಮಾಚಿ ಮತ್ತು ಕಾನೂನನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ಟೆಂಡರ್ ನಡೆಯುತ್ತಿರುವ ಬಗ್ಗೆ ಅಸಮಾಧಾನ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಟೆಂಡರ್‌ದಾರರಾದ ಕರಬಸಪ್ಪ ಹಂಚಿನಾಳ, ಗೌಸುಸಾಬ ದೋಟಿಹಾಳ, ಎಸ್.ವಿ. ಪಾಟೀಲ, ದುದ್ದುಪೀರ ಹಣಗಿ, ಶಶಿಕುಮಾರ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಜಿಲ್ಲಾಡಳಿತದ ಕ್ರಮ ಖಂಡಿಸಿ ಟೆಂಡರ್‌ದಾರರಿಗೆ ತಿರಸ್ಕಾರದ ಕುರಿತು ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು.