ಸಾರಾಂಶ
ರಾಣಿಬೆನ್ನೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳ ಹಾಗೂ ಶಾಲಾ-ಕಾಲೇಜ್, ಹಾಸ್ಟೆಲ್‌ಗಳಿಗೆ ನಗರ ಸಾರಿಗೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್‌ಎಫ್‌ಐ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ. ಸಮಸ್ಯೆಗಳ ಪರಿಹಾರ ಕುರಿತಂತೆ ಮನವಿ ಸ್ವೀಕರಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಇತ್ತೀಚಿಗೆ ನಗರದ ಪ್ರವಾಸಿ ಮಂದಿರದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು, ವಾಕರ ಸಾರಿಗೆ ಸಂಸ್ಥೆ ಡಿಪೋ ಮ್ಯಾನೇಜರ್ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಶಾಸಕರ ಆದೇಶದ ಮೇರೆಗೆ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಪ್ರತ್ಯೇಕವಾಗಿ ಮುಂಜಾನೆ, ಸಂಜೆ ಬಸ್ ವ್ಯವಸ್ಥೆ ಕಲ್ಪಿಸಲು, ಮಾಕನೂರ ಕ್ರಾಸ್ ಬಳಿ ಇಂಜಿನಿಯರಿಂಗ್, ರೋಟರಿ ಹೈಸ್ಕೂಲ್, ಪಿಯು ಕಾಲೇಜ್, ಆರ್.ಟಿ.ಇ.ಎಸ್. ಪದವಿ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಡಿಪೋದಿಂದ ಖಾಲಿ ಹೊರಡುವ ಎಲ್ಲಾ ಬಸ್‌ಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಹಲಗೇರಿ ರಸ್ತೆಯ ಎಸ್.ಆರ್.ಕೆ ನಗರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಕ್ಕೆ ಎಲ್ಲಾ ಬಸ್‌ಗಳನ್ನು ಕಡ್ಡಾಯವಾಗಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಹುಣಸಿಕಟ್ಟಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳನ್ನು ಕಲ್ಪಿಸಲು ಸಮ್ಮತಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್‌ಗಳನ್ನು ಬಿಡಲು ಒಪ್ಪಿಕೊಳ್ಳಲಾಗಿದ್ದು ನಗರ ಬಸ್ ನಿಲ್ದಾಣದಿಂದ ಬ್ಯಾಡಗಿ ಬಸ್‌ಗಳನ್ನು ಮಿನಿ ವಿಧಾನಸೌಧ, ಮಾರುತಿ ನಗರ, ಯರೆಕುಪ್ಪಿ ರಸ್ತೆ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಬಳಿ ನಿಲ್ಲಿಸಲಾಗುವುದು. ಇದಲ್ಲದೆ ಕಮಲಾ ನಗರ ಹಾಗೂ ಈಶ್ವರಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ನಿಲಯಕ್ಕೆ ಹೆಚ್ಚುವರಿ ಬಸ್ ಬಿಡಲಾಗುವುದು. ಕಮಲಾ ನಗರಕ್ಕೆ ಹತ್ತಿರವಾಗುವಂತೆ ದಾವಣಗೆರೆ ಮಾರ್ಗವಾಗಿ ಚಲಿಸುವ ಬಸ್‌ಗಳಿಗೆ ಕಡ್ಡಾಯವಾಗಿ ಬಸ್ ನಿಲ್ಲಿಸಲು, ಪದವಿ ಹಾಗೂ ಕಾನೂನು ವಿದ್ಯಾರ್ಥಿಗಳ ಬಸ್ ಪಾಸ್ ಕಾಲಾವಧಿಯು ಏರುಪೇರು ಆಗಿದ್ದು ಸೆಪ್ಟೆಂಬರ್ ತಿಂಗಳವರೆಗೂ ವಿಸ್ತರಿಸಲು ಮುಂದಿನ ಆದೇಶಕ್ಕಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಇತ್ಯರ್ಥ ಪಡಿಸುತ್ತೇವೆಂದು ಸಾರಿಗೆ ಅಧಿಕಾರಿಗಳು ಹೇಳಿದರು.ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ತಾಲೂಕು ಉಪಾಧ್ಯಕ್ಷ ನೇಹಾಲ್‌ಖಾನ್ ಗಂಗಾವತಿ, ಮುಖಂಡರಾದ ಗೌತಮ್ ಸಾವಕ್ಕನವರ, ಮಹೇಶ್ ಮರೋಳ, ಬಸವರಾಜ ಕೊಣಸಾಲಿ, ಅನಿಲ ಮುನವಳ್ಳಿ, ಗುರುರಾಜ ಹಲಸೂರ, ರಮೇಶ ಅಗಡಿ, ದುರುಗಪ್ಪ ನಪೂರಿ ಮತ್ತಿತರರಿದ್ದರು.