ಕಡೂರುಮಲೆನಾಡಿನ ಸೆರಗಿನಲ್ಲಿದ್ದು ಸದಾ ಬರಗಾಲ ಎದುರಿಸುವ ಬಯಲು ಪ್ರದೇಶ ಕಡೂರು ತಾಲೂಕಿನ ಕೆಮ್ಮಣ್ಣಿನಲ್ಲಿ ಶ್ರೀಗಂಧ ಬೆಳೆಯುವ ಮೂಲಕ ತಾಲೂಕಿನ ರೈತರಿಗೆ ಸುದರ್ಶನ್‌ ಮಾದರಿಯಾಗಿದ್ದಾರೆ.

ಹನಿ ನೀರಾವರಿ ಬಳಸಿ ದೊಡ್ಡ ಪ್ರಮಾಣದಲ್ಲಿ ಶ್ರೀ ಗಂಧ ಬೆಳೆದಿರುವುದೇ ವಿಶೇಷ । ನಿರ್ವಹಣೆಯೂ ಪ್ರಮುಖ

ಕಡೂರು ಕೃಷ್ಣಮೂರ್ತಿ.

ಕನ್ನಡಪ್ರಭ ವಾರ್ತೆ, ಕಡೂರು

ಮಲೆನಾಡಿನ ಸೆರಗಿನಲ್ಲಿದ್ದು ಸದಾ ಬರಗಾಲ ಎದುರಿಸುವ ಬಯಲು ಪ್ರದೇಶ ಕಡೂರು ತಾಲೂಕಿನ ಕೆಮ್ಮಣ್ಣಿನಲ್ಲಿ ಶ್ರೀಗಂಧ ಬೆಳೆಯುವ ಮೂಲಕ ತಾಲೂಕಿನ ರೈತರಿಗೆ ಸುದರ್ಶನ್‌ ಮಾದರಿಯಾಗಿದ್ದಾರೆ.

ಶಿವಮೊಗ್ಗ- ಬೆಂಗಳೂರು 206 ರಾಷ್ಟ್ರೀಯ ಹೆದ್ದಾರಿಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿ ರಸ್ತೆ ಪಕ್ಕದಲ್ಲಿ ಇರುವ 40 ಎಕರೆ ತೋಟದ ಸುಮಾರು 20 ಎಕರೆಯಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಚಿಕ್ಕಮಗಳೂರು ಮೂಲದ ಗೌರಮ್ಮಅವರಿಗೆ ಸೇರಿದ ಈ ತೋಟದಲ್ಲಿ ಅವರ ಹಿರಿಯ ಪುತ್ರ ಸುದರ್ಶನ್‌ 4 ವರ್ಷದ ಹಿಂದೆ ಅರಣ್ಯ ಇಲಾಖೆ ಸಹಯೋಗದಲ್ಲಿ ಹಾಕಿದ್ದ ಶ್ರೀ ಗಂಧದ ಗಿಡಗಳು ಇಂದು ಸುಮಾರು 8 ರಿಂದ 10 ಅಡಿವರೆಗೆ ಬೆಳೆದು ನಿಂತಿವೆ.

ಒಂದು ಹಂತದವರೆಗೆ ಗೊಬ್ಬರ ಮತ್ತು ಔಷಧಿ ಜೊತೆ ಬಹು ಎಚ್ಚರಿಕೆಯಿಂದ ಮಕ್ಕಳಂತೆ ಗಿಡಗಳ ಆರೈಕೆ ಮಾಡ ಬೇಕಿದೆ. ಶ್ರೀಗಂಧದ ಗಿಡಗಳು ಎತ್ತರವಾಗಿ ಬೆಳೆಯಲು ಅನುವಾಗುವಂತೆ ಇದರ ಅಕ್ಕಪಕ್ಕ ಸಿಲ್ವರ್ ಮತ್ತು ಖಾಕಿ ಜೋಳದ ಗಿಡಗಳನ್ನು ಹಾಕಿದ್ದಾರೆ.

ಶ್ರೀ ಗಂಧ ಸುಮಾರು 15-20 ವರ್ಷಕ್ಕೆ ಬರುವ ಬೆಳೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೈಗೆ ಬರುವ ಹೊತ್ತಲ್ಲಿ ಕಳ್ಳರ ಭಯ ಕೂಡ ಇದೆ. ಹಾಗಾಗಿ ತೋಟದ ಮಾಲೀಕರು ಚಿತ್ರದುರ್ಗದ ಕಡೆ ಈಶ್ವರಪ್ಪ ಎಂಬುವರನ್ನು ಕುಟುಂಬ ಸಮೇತ ಈ ತೋಟದ ಮನೆಯಲ್ಲಿ ಇರಿಸಿದ್ದಾರೆ. 20 ಎಕರೆ ಒಂದೇ ಬೌಂಡರಿಯಲ್ಲಿ ಶ್ರೀಗಂಧ ಬೆಳೆಸುತ್ತಿದ್ದು, ಸುತ್ತಲೂ ತಂತಿ ಬೇಲಿ ಹಾಕಿ ಯಾರೂ ಒಳ ನುಗ್ಗದಂತೆ ರಕ್ಷಣೆ ಮಾಡಲಾಗಿದೆ.

ಇದೇ ಬಯಲು ಪ್ರದೇಶದ ತರೀಕೆರೆ ತಾಲೂಕಿನಲ್ಲೂ ಕೆಲವರು ಶ್ರೀ ಗಂಧ ಬೆಳೆದಿದ್ದಾರೆ. ಇದೀಗ ಕಡೂರು ತಾಲೂಕಿ ನಲ್ಲೂ ಹನಿ ನೀರಾವರಿ ಮೂಲಕ ದೊಡ್ಡ ಪ್ರಮಾಣದಲ್ಲಿ ಶ್ರೀ ಗಂಧ ಬೆಳೆದಿರುವುದು ವಿಶೇಷ.

ಸಾಂಪ್ರದಾಯಿಕ ಬೆಳೆ ಹಾಕಿದರೆ ರೈತರಿಗೆ ಬೆಳೆದ ಖರ್ಚು ಕೂಡ ಸಿಗದ ಈ ದಿನಗಳಲ್ಲಿ ಶ್ರೀಗಂಧ ಹಾಕಿ10 ವರ್ಷ ಕಳೆದರೆ ಕೋಟ್ಯಾಂತರ ರೂ ಆದಾಯ ತಂದು ಕೊಡುತ್ತದೆ. ತಾಲೂಕಿನ 3-4 ಕಡೆ ಸಾಮಾನ್ಯ ರೈತರು 1 ಅಥವಾ 2 ಎಕರೆಯಲ್ಲಿ ಮಾತ್ರ ಶ್ರೀಗಂಧ ಬೆಳೆದಿದ್ದಾರೆ. ಕಡೂರು ತಾಲೂಕಿನ 20 ಎಕರೆಯಲ್ಲಿ ಹಾಕಿರುವ ಶ್ರೀ ಗಂಧದ ಬಹು ದೊಡ್ಡ ಬೆಳೆಯಾಗಿದೆ.

ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ನಿಯಮಾವಳಿ ಸಡಿಲಿಸಿದರೆ ಎಲ್ಲ ರೈತರು ಶ್ರೀ ಗಂಧ ಬೆಳೆಯಬಹುದು. ಒಟ್ಟಾರೆ ಬರ ಪ್ರದೇಶದ ತಾಲೂಕಿನ ರೈತರು ಸಾಂಪ್ರದಾಯಿಕ ಬೆಳೆಗಳಿಂತ ಶ್ರೀ ಗಂಧದ ಬೆಳೆಯಂತಹ ಪರ್ಯಾಯ ಬೆಳೆ ಮಾಡಿದರೆ ರೈತರು ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಲು ಸಹಕಾರಿ ಎನ್ನಬಹುದು.

-- ಕೋಟ್‌--

ನಾವು ಗಂಧ ಬೆಳೆದಿದ್ದರೂ ಸರಿಯಾದ ರಕ್ಷಣೆ ಇಲ್ಲ. ಅರಣ್ಯ ಮತ್ತು ಪೋಲೀಸ್ ಇಲಾಖೆಗೆ ಹೋಗಬೇಕು.ಇದಕ್ಕೆ ಆರಂಭದಲ್ಲಿ ಹೆಚ್ಚು ಕೆಲಸಗಾರರು ಬೇಕು. ಅರಣ್ಯ ಇಲಾಖೆಯಿಂದ ₹6 ಕ್ಕೆ 1 ಸಸಿಯಂತೆ ಪಡೆದು ಹಾಕಲಾಗಿದೆ. ಬೆಳೆ ಕೈಗೆ ಬಂದಾಗ ಅದನ್ನು ರಕ್ಷಿಸುವುದೇ ದೊಡ್ಡ ಸವಾಲಿನ ಕೆಲಸ. ಬೆಳೆ ಬರಲು 15 ವರ್ಷ ಬೇಕು ಸಸಿಗಳನ್ನು ರೋಸ್ ವುಡ್, ಹಲಸು, ಸೆಮಿ ಪ್ಯಾರಾ ಸೈಟ್ಸ್ ಜೊತೆಗೆ ಬೆಳೆಸಲಾಗುತ್ತಿದೆ.

ಸುದರ್ಶನ್‌ , ತೋಟದ ಮಾಲೀಕ 18ಕೆಕೆಡಿಯು1. ಕಡೂರು ತಾಲೂಕಿನ ಕುಪ್ಪಾಳು ಸಮೀಪದ ತೋಟದಲ್ಲಿ ಬೆಳೆದಿರುವ ಶ್ರೀ ಗಂಧದ ಬೆಳೆ. 18ಕೆಕೆಡಿಯು1ಎ. ಶ್ರೀ ಗಂಧದ ತೋಟವನ್ನು ನೋಡಿಕೊಳ್ಳುತ್ತಿರುವ ಕೆಲಸಗಾರ ಈಶ್ವರಪ್ಪ ಗಂಧದ ಸಸಿಗಳೊಂದಿಗೆ