ಸಾರಾಂಶ
ಮಲ್ಲಯ್ಯ ಪೋಲಂಪಲ್ಲಿಕನ್ನಡಪ್ರಭ ವಾರ್ತೆ ಶಹಾಪುರಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ತಾಲೂಕಿನ ದೋರನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುವ ಹಳ್ಳದ ಅಕ್ಕ-ಪಕ್ಕದಲ್ಲಿ ಹಾಗೂ ಇತರ ಕಡೆಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿವೆ.
ಶ್ರೀಗಂಧದ ಸಸಿಗಳನ್ನು ಲಾಭಕ್ಕಾಗಿ ಬೆಳೆಸಲು ಮುಂದಾದರೂ ಬೆಳೆಯುವುದಿಲ್ಲ. ಬಿಸಿಲಿನ ನಾಡಿನಲ್ಲಿ ನೈಸರ್ಗಿಕವಾಗಿ ಸಿರಿ ಸಂಪನ್ಮೂಲವಾದ ಶ್ರೀಗಂಧದ ಗಿಡಗಳು ಬೆಳೆಯುತ್ತಿವೆ. ಆದರೆ, ರಕ್ಷಣೆ ಇಲ್ಲದೆ ಮರಗಳ್ಳರ ಪಾಲಾಗುತ್ತಿರುವುದು ಶೋಚನೀಯ. ಪ್ರಕೃತಿದತ್ತವಾಗಿ ಬೆಳೆದಿರುವ ಶ್ರೀಗಂಧದ ಮರಗಳನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಉದಾಸೀನ ಮನೋಭಾವ ತೋರುತ್ತಿದ್ದಾರೆ. ಪ್ರಕೃತಿದತ್ತವಾದ ಬೆಳೆದ ಶ್ರೀಗಂಧದ ಮರಗಳು 3 ಆಡಿಯಿಂದ 15, 20 ಅಡಿಯವರೆಗೆ ಬೆಳೆದಿವೆ. ಚಿನ್ನದ ಬೆಲೆಗಿಂತ ದುಪ್ಪಟ್ಟು ಬೆಲೆಯ ಈ ಮರಗಳನ್ನು ರಕ್ಷಿಸುವ ಹೊಣೆ ಯಾರದು ಅನ್ನೋ ಪ್ರಶ್ನೆ ಪರಿಸರಪ್ರಿಯರ ವಲಯದಲ್ಲಿ ಕೇಳಿ ಬರುತ್ತಿದೆ.ದಾಖಲಾದ ಶ್ರೀಗಂಧ ಕಳ್ಳತನ ಪ್ರಕರಣ:2019–20 ಹಾಗೂ 2020 –21ರಲ್ಲಿ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ. 2021–22 ರಲ್ಲಿ ಸುರಪುರ ವಲಯದಲ್ಲಿ 1 ಕೇಸ್ ದಾಖಲಾಗಿದೆ. ಜಪ್ತಿಯಾದ ಶ್ರೀಗಂಧದ ಕಟ್ಟಿಗೆ 6 ಕೆಜಿ. 2022–23 ರಲ್ಲಿ ಸುರಪುರ ವಲಯದಲ್ಲಿ ಕೇಸ್ ದಾಖಲಾಗಿದೆ. ಜಪ್ತಿಯಾದ ಶ್ರೀಗಂಧದ ಕಟ್ಟಿಗೆ 7.18 ಕೆಜಿ. 2023–24 ರಲ್ಲಿ ಯಾದಗಿರಿ ವಲಯದಲ್ಲಿ 2 ಕೇಸ್ ದಾಖಲಾಗಿವೆ. ಒಂದು ಕೇಸಲ್ಲಿ 85 ಕೆಜಿ, ಇನ್ನೊಂದು ಕೇಸಲ್ಲಿ 17 ಕೆಜಿ ಶ್ರೀಗಂಧ ಕಟ್ಟಿಗೆ ಜಪ್ತಿಯಾಗಿದೆ. 2023–24 ರಲ್ಲಿ ಸುರಪುರ ವಲಯದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿ ಶ್ರೀಗಂಧದ ಪೆಟ್ಟಿಗೆ ಜಪ್ತಿಯಾಗಿರುವುದಿಲ್ಲ.ಅರಣ್ಯ ಇಲಾಖೆ ವಿಫಲ:ರಸ್ತೆ ಅಕ್ಕ-ಪಕ್ಕ ಹಾಗೂ ಹಳ್ಳದ ದಂಡೆಯಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಗುರುತಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಿಚಿತ್ರವೆಂದರೆ ಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದರೂ ಅವುಗಳ ರಕ್ಷಣೆಗೆ ಯಾಕೆ ಮುಂದಾಗಿಲ್ಲ. ಮರಗಳ್ಳರ ಜೊತೆ ಈ ಅಧಿಕಾರಿಗಳು ಕೈಜೋಡಿಸಿದ್ದಾರೆಯೇ ಎನ್ನುವ ಅನುಮಾನಗಳು ಬರುತ್ತಿದೆ ಎನ್ನುತ್ತಾರೆ ಕಾರ್ಮಿಕ ಸಂಘದ ಮುಖಂಡ ನಿಂಗಣ್ಣ ನಾಟೇಕಾರ್.
ಜಿಪಿಎಸ್ ಅಳವಡಿಕೆಗೆ ಒತ್ತಾಯ:ಚಿನ್ನದಷ್ಟೇ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಪಿಎಸ್ ಅಳವಡಿಸಿ, ಸಿರಿ ಸಂಪತ್ತು ಶ್ರೀಗಂಧವನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಸಾಮಜಿಕ ಹೋರಾಟಗಾರ ಬಸವರಾಜ್ ಭಜಂತ್ರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಸಸ್ಯ ಸಂರಕ್ಷಣೆಗೆ ಮುಂದಾಗಿ:ಪ್ರಕೃತಿಯಲ್ಲಿ ಶ್ರೀಗಂಧ ಸೇರಿದಂತೆ ಇತರೆ ಅತ್ಯಮೂಲ್ಯವಾದ ಸಸ್ಯ ಸಂಪತ್ತಿದೆ. ಅದರ ರಕ್ಷಣೆ ಹೊಣೆ ಹೊತ್ತ ಅರಣ್ಯ ಅಧಿಕಾರಿಗಳು ಸಸ್ಯ ಸಂರಕ್ಷಣೆಗೆ ಮುಂದಾಗದೆ, ನಾಮ್ ಕೆ ವಾಸ್ತೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಆರೋಪವಿದೆ. ಮರಗಳ್ಳರು ಗಿಡಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದರೂ, ಕಂಡು ಕಾಣದಂತೆ ಇರುವುದು ಯಾವ ನ್ಯಾಯ? ತೆಗೆದುಕೊಳ್ಳೋ ಸಂಬಳಕ್ಕಾದರೂ ನಿಯತ್ತಾಗಿ ಕೆಲಸ ಮಾಡಿ ಸಸ್ಯ ಸಂಪತ್ತನ್ನು ಸಂರಕ್ಷಿಸಬೇಕು ಎಂದು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ರಸ್ತೆ, ಹಳ್ಳ ಇತರೆ ಕಡೆ ಬೆಳೆದಿರುವ ಶ್ರೀಗಂಧದ ಮರಗಳ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ನಮ್ಮ ಗಾರ್ಡುಗಳನ್ನು ಕಳಿಸಿ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ವಹಿಸುತ್ತೇನೆ.-ಕಾಜೋಲ್ ಪಾಟೀಲ್, ಡಿಎಫ್ ಒ, ಪ್ರಾದೇಶಿಕ ಅರಣ್ಯ ಇಲಾಖೆ ಯಾದಗಿರಿ
ಅತ್ಯಮೂಲ್ಯವಾದ ಸಸ್ಯ ಸಂಪತ್ತು ಉಳಿಸಬೇಕಾಗಿದೆ. ಬೆಳೆಸಿದರೆ ಬೆಳೆಯದ ಶ್ರೀಗಂಧದ ಮರಗಳು ನೈಸರ್ಗಿಕವಾಗಿ ನಮ್ಮ ಭಾಗದಲ್ಲಿ ಬೆಳೆಯುತ್ತಿವೆ. ಈ ಮರಗಳನ್ನು ರಕ್ಷಿಸುವುದು ಅತಿ ಮುಖ್ಯ. ಇವುಗಳಿಗೆ ಜಿಪಿಎಸ್ ಅಳವಡಿಸಿ, ಅರಣ್ಯ ಸಿಬ್ಬಂದಿಗಳನ್ನು ಗಸ್ತು ತಿರುಗುವ ವ್ಯವಸ್ಥೆ ಅತಿ ಶೀಘ್ರದಲ್ಲಿ ಅರಣ್ಯ ಇಲಾಖೆ ಮಾಡಬೇಕು.- ಭಾಸ್ಕರರಾವ್ ಮುಡುಬೂಳ, ಹಿರಿಯ ನ್ಯಾಯವಾದಿ