ಬಿರುಬಿಸಿಲಿಗೆ ಮೂಡಂಬೈಲು ಶಾಲೆಯಲ್ಲಿ ತಯಾರಾಯ್ತು ಗರಿ ಗರಿ ಸಂಡಿಗೆ!

| Published : Apr 04 2024, 01:09 AM IST / Updated: Apr 04 2024, 09:31 AM IST

ಬಿರುಬಿಸಿಲಿಗೆ ಮೂಡಂಬೈಲು ಶಾಲೆಯಲ್ಲಿ ತಯಾರಾಯ್ತು ಗರಿ ಗರಿ ಸಂಡಿಗೆ!
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಕರ್ತವ್ಯದ ಹೊಣೆಯ ನಡುವೆಯೂ ಮಕ್ಕಳಿಗೆ ಯಾವ ಪಠ್ಯೇತರ ಚಟುವಟಿಕೆ ನಡೆಸಬಹುದು ಎಂದು ಯೋಚಿಸಿದ ಶಾಲಾ ಸಹಶಿಕ್ಷಕಿ ಶ್ರುತಿ ಅವರಿಗೆ ಹೊಳೆದದ್ದೇ ಈ ಸಂಡಿಗೆ ತಯಾರಿ.

ಮೌನೇಶ ವಿಶ್ವಕರ್ಮ

 ಬಂಟ್ವಾಳ :  ಅಯ್ಯೊಯ್ಯೋ ಏನು ಬಿಸಿಲು, ಎಂಥಾ ಸೆಕೆ ಎನ್ನುತ್ತಾ ಎಲ್ಲರೂ ಬೆವರೊರೆಸಿಕೊಳ್ಳುತ್ತಿದ್ದರೆ ಇಲ್ಲೊಂದು ಸರ್ಕಾರಿ ಶಾಲೆಯ ಮಕ್ಕಳು ಅದೇ ಬಿರುಬಿಸಿಲಿನಲ್ಲಿ ಸಂಡಿಗೆ ಒಣಗಿಸುತ್ತಿದ್ದರು.

ಹೌದು ಇದು ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ಚಟುವಟಿಕೆಯೊಂದರ ನೋಟ. ಗೊಂದಲಮಯವಾಗಿಯೇ ಪರೀಕ್ಷೆಗಳೆಲ್ಲಾ ಮುಗಿದು ಹೋಯಿತು. ಚುನಾವಣಾ ಕರ್ತವ್ಯದ ಹೊಣೆಯ ನಡುವೆಯೂ ಮಕ್ಕಳಿಗೆ ಯಾವ ಪಠ್ಯೇತರ ಚಟುವಟಿಕೆ ನಡೆಸಬಹುದು ಎಂದು ಯೋಚಿಸಿದ ಶಾಲಾ ಸಹಶಿಕ್ಷಕಿ ಶ್ರುತಿ ಅವರಿಗೆ ಹೊಳೆದದ್ದೇ ಈ ಸಂಡಿಗೆ ತಯಾರಿ.

ಅದರಂತೆ ಸೋಮವಾರ ಸಾಬಕ್ಕಿ ಸಂಡಿಗೆ ಮಾಡುವುದನ್ನು ಶಿಕ್ಷಕಿ ಶ್ರುತಿ ಅವರ ಮೇಲುಸ್ತುವಾರಿಯಲ್ಲಿ ಕಲಿತ ಮಕ್ಕಳು ಮುಂಡಿಗಿಡದ ಎಲೆಯಲ್ಲಿ ಚಿತ್ತಾರದಂತೆ ಸಂಡಿಗೆ ಹಾಕಿ ಒಣಗಿಸಿದರು.

ಬೆಳ್ಳುಳ್ಳಿ ಸಂಡಿಗೆ...: ಮೊದಲ ದಿನ ಸಾಬಕ್ಕಿ ಸಂಡಿಗೆ ಮಾಡುವುದನ್ನು ಕಲಿತ ಮಕ್ಕಳು ನಾವೂ ಮನೆಯಲ್ಲಿ ಮಾಡ್ತೇವೆ ಎಂದು ಹೇಳಿದರು. ಈ ವೇಳೆ ಓರ್ವ ವಿದ್ಯಾರ್ಥಿನಿ ನಮ್ಮ ಮನೆಯಲ್ಲಿ ಸಾಗು (ಸಾಬಕ್ಕಿ) ಇಲ್ಲ. ನಾನು ಹೇಗೆ ಮಾಡಲಿ ಅಂತ ಕೇಳಿದಾಗ, ಈ ಬಗ್ಗೆ ಯೋಚನೆ ಮಾಡಿದ ಶ್ರುತಿ ಟೀಚರ್ ಅಕ್ಕಿಯಿಂದ ಮಾಡಬಹುದಾದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಡಿಗೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ.

ಮೊದಲ ದಿನ ಮುಂಡಿ ಎಲೆಯ ಮೇಲೆ ಸಂಡಿಗೆ ಮಾಡಿದಾಗ ತಾರಸಿಯ ಬಿಸಿಗೆ ಸಂಡಿಗೆಗಿಂತ ಮೊದಲೇ ಮುಂಡಿ ಎಲೆ ಒಣಗಿತ್ತು. ಹಾಗಾಗಿ ಫುಡ್ ಗ್ರೇಡ್ ಪ್ಲಾಸ್ಟಿಕ್ ಶೀಟ್ ಮೇಲೆ ಮಕ್ಕಳು ಸಂಡಿಗೆ ಹಾಕಿದ್ದಾರೆ.

ಮಕ್ಕಳು ಬಣ್ಣ ಬಣ್ಣದ ಪ್ಯಾಕೆಟ್‌ಗಳ ಜಂಕ್‌ಫುಡ್‌ಗಳ‌ ಮೇಲೆ ಹೆಚ್ಚು ಒಲವು ತೋರಿಸುತ್ತಿರುವ ಈ ಸನ್ನಿವೇಶದಲ್ಲಿ ಆರೋಗ್ಯಕರ ತಿಂಡಿಗಳನ್ನು ಮನೆಯಲ್ಲೇ ತಯಾರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ತಿಳಿಸಿದ ಸಂಡಿಗೆ ಪಾಠವನ್ನು ಶಾಲೆಯ 40 ವಿದ್ಯಾರ್ಥಿಗಳು ಖುಷಿಖುಷಿಯಾಗಿಯೇ ಕಲಿತರು. ಇತರ ಶಿಕ್ಷಕರೂ ಇದಕ್ಕೆ ಸಾಥ್‌ ನೀಡಿದರು. ಸಂಡಿಗೆ ತಯಾರಿಸುವ ರೆಸಿಪಿ ಹೇಳುವ ಸಂದರ್ಭ ಮಕ್ಕಳು ತುಂಬಾ ಆಸಕ್ತಿಯಿಂದ ಕೇಳುತ್ತಿದ್ದರು ಎನ್ನುತ್ತಾರೆ ಶಿಕ್ಷಕಿ ಶ್ರುತಿ.

ಏ.8ರಂದು ನಡೆಯುವ ‘ಸಮುದಾಯದತ್ತ ಶಾಲೆ’ಯ ದಿನ ಮಧ್ಯಾಹ್ನದ ಊಟಕ್ಕೆ ಗರಿಗರಿ ಸಂಡಿಗೆ ಬಡಿಸುವ ಯೋಚನೆ ಇದೆ, ಉಳಿದದ್ದು ಮುಂದಿನ ಮಳೆಗಾಲದ ಬಿಸಿಯೂಟಕ್ಕೆ ಆಗುತ್ತದೆ ಎಂದು ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಹೇಳಿದರು.

ಸಾಬಕ್ಕಿ ಮತ್ತು ಅಕ್ಕಿ ಸಂಡಿಗೆ ಮಾಡಿ ಬಹಳ ಖುಷಿಯಾಯ್ತು. ನಾನೂ ಮನೆಯಲ್ಲಿ ಇಂತಹ ಸಂಡಿಗೆಯನ್ನು ರಜೆಯಲ್ಲಿ ಮಾಡಬೇಕೆಂದಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ ವಿದ್ಯಾರ್ಥಿಗಳಾದ ರಿತ್ವಿಕ್, ಕೃತಿಕಾ.