ಸಾರಾಂಶ
ವಿ.ಎಂ. ನಾಗಭೂಷಣ ಸಂಡೂರು
ಗಣಿನಾಡು ಸಂಡೂರು ತಾಲೂಕು ಪ್ರಕೃತಿ ಸೌಂದರ್ಯಕ್ಕೆ ಹೆಸರಾದಂತೆ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ತೋಟಗಳಿಗೂ ಹೆಸರಾಗಿದೆ. ಇಲ್ಲಿನ ಮಾವಿನ ತೋಟಗಳಲ್ಲಿ ತೂಗಾಡುತ್ತಿರುವ ಮಾವು ಇದೀಗ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ.ತಾಲೂಕಿನಲ್ಲಿ ೩೦೦-೩೫೦ ಎಕರೆ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ಅವುಗಳಲ್ಲಿ ಹೆಚ್ಚಾಗಿ ಹಳೆಯ ತೋಟಗಳಿವೆ. ತಾಲೂಕಿನಲ್ಲಿ ಹೆಚ್ಚಾಗಿ ಮಾವಿನ ತೋಟಗಳಿರುವುದು ಯಶವಂತನಗರ ಹಾಗೂ ಸಂಡೂರಿನಲ್ಲಿ. ಉಳಿದಂತೆ ಬಂಡ್ರಿ, ತೋರಣಗಲ್ಲು, ರಾಜಾಪುರ ಮುಂತಾದೆಡೆ ಸ್ವಲ್ಪ ಪ್ರಮಾಣದಲ್ಲಿ ಮಾವಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗಿದೆ.
ವೈವಿಧ್ಯಮಯ ಮಾವು ಲಭ್ಯ: ತಾಲೂಕಿನಲ್ಲಿ ಪ್ರಮುಖವಾಗಿ ಮಲ್ಲಿಕಾ, ಕೇಸರಿ, ಮಲಗೋಬ, ಬೆನೆಸಾನ್, ದಸೆರಾ, ಲಾಂಗ್ರಾ, ತೋತಾಪುರಿ, ಬಾದಾಮಿ, ರಸಪೂರಿ, ಜಹಂಗಿರಿ, ದಿಲ್ ಪಸಂದ್, ಬೆಳ್ಳಿಗುಂಡು ಮುಂತಾದ ತಳಿಯ ಮಾವನ್ನು ಬೆಳೆಯಲಾಗುತ್ತಿದೆ.ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ:ಈಗಾಗಲೆ ಕೆಲವರು ಹೊರಗಡೆಯಿಂದ ಮಾವಿನ ಹಣ್ಣನ್ನು ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ಆದರೆ, ಸಂಡೂರು ತಾಲೂಕಿನಲ್ಲಿ ಬೆಳೆಯುವ ಮಾವು ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ ಹೋಗಬೇಕು ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.
ಬಿರುಗಾಳಿಯಿಂದ ತೊಂದರೆ:ಮಾವಿನ ತೋಟಗಳ ಗುತ್ತಿಗೆದಾರ ಕೆ. ಮಂಜುನಾಥ್ ಮಾತನಾಡಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಫಸಲು ಚೆನ್ನಾಗಿದೆ. ಆದರೆ, ಕೆಲ ದಿನಗಳಿಂದ ಬೀಸುತ್ತಿರುವ ಬಿರುಗಾಳಿಗೆ ಮಾವಿನ ಕಾಯಿಗಳು ಉದುರುತ್ತಿವೆ. ಗಾಳಿಯಿಂದ ತೊಂದರೆಯಾಗುತ್ತಿದೆ. ಪ್ರಕೃತಿ ಸಹಕರಿಸಬೇಕಿದೆ ಎಂದರು.ಈಗಾಗಲೆ ಸಂಡೂರಿನ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದರೂ ತಾಲೂಕಿನಲ್ಲಿ ಬೆಳೆದ ಮಾವು ಮಾರುಕಟ್ಟೆಗೆ ಬರಲು ಇನ್ನೂ ೧೦-೧೫ ದಿನ ಬೇಕಿದೆ. ಮಾವಿನ ತೋಟಗಳಲ್ಲಿನ ಮಾವು ಬಲಿತು ಹಣ್ಣಾಗುವ ಹಂತಕ್ಕೆ ಬಂದ ಮೇಲೆಯೇ ಅವುಗಳನ್ನು ಮರಗಳಿಂದ ಇಳಿಸಿ ಸ್ವಾಭಾವಿಕವಾಗಿ ಹಣ್ಣು ಮಾಡಿ ಮಾರಾಟ ಮಾಡುವುದರಿಂದ ಸ್ವಲ್ಪ ಸಮಯ ಹಿಡಿಯುತ್ತದೆ ಎನ್ನಲಾಗುತ್ತಿದೆ.
ತಾಲೂಕಿನಲ್ಲಿ ೩೦೦-೩೫೦ ಎಕರೆಯಷ್ಟು ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ಈ ವರ್ಷ ಮಾವಿನ ಫಸಲು ಉತ್ತಮವಾಗಿದೆ. ಸಂಡೂರು ಭಾಗದ ಹಣ್ಣುಗಳು ಮಾರುಕಟ್ಟೆಗೆ ಬರಲು ಇನ್ನೂ ೧೫ ದಿನ ಬೇಕಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ ಹೇಳಿದ್ದಾರೆ.