ಸಂಡೂರು ಆಧಾರ್‌ ನೋಂದಣಿ ಕೇಂದ್ರಕ್ಕೆ ನಸುಕಿನಿನಲ್ಲೇ ಪಾಳಿ

| Published : Oct 07 2025, 01:03 AM IST

ಸಂಡೂರು ಆಧಾರ್‌ ನೋಂದಣಿ ಕೇಂದ್ರಕ್ಕೆ ನಸುಕಿನಿನಲ್ಲೇ ಪಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 40 ಸಾವಿರದಷ್ಟು ಜನಸಂಖೆ ಹೊಂದಿರುವ ಪಟ್ಟಣದಲ್ಲಿ ಪ್ರಸ್ತುತ ಆಧಾರ್ ನೋಂದಣಿಗೆ ಇರುವುದು ಒಂದೇ ಒಂದು ಕೇಂದ್ರ.

ವಿ.ಎಂ. ನಾಗಭೂಷಣ

ಸಂಡೂರು: ಪಟ್ಟಣದಲ್ಲಿ ಜನತೆ ಆಧಾರ್ ಕಾರ್ಡ್‌ನಲ್ಲಿ ಹೆಸರು ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್‌ಗಾಗಿ ನಸುಕಿನಲ್ಲಿ 2-3 ಗಂಟೆಗೆ ಆಧಾರ್ ನೋಂದಣಿ ಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ಪಾಳಿ ಹಚ್ಚುತ್ತಿದ್ದಾರೆ.

ಸುಮಾರು 40 ಸಾವಿರದಷ್ಟು ಜನಸಂಖೆ ಹೊಂದಿರುವ ಪಟ್ಟಣದಲ್ಲಿ ಪ್ರಸ್ತುತ ಆಧಾರ್ ನೋಂದಣಿಗೆ ಇರುವುದು ಒಂದೇ ಒಂದು ಕೇಂದ್ರ. ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿ- ಕೆಲ ತಿಂಗಳ ಹಿಂದೆ ಪಟ್ಟಣದ ಅಂಚೆ ಕಚೇರಿ, ತಾಲೂಕು ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಆವರಣ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಆವರಣ ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಆಧಾರ್ ಕಾರ್ಡ್‌ನ ಕೆಲಸ ಮಾಡಲಾಗುತ್ತಿತ್ತು. ಇದೀಗ ಮೂರು ಕಡೆಗಳಲ್ಲಿದ್ದ ಆಧಾರ್ ಕೇಂದ್ರಗಳು ಮುಚ್ಚಿರುವುದರಿಂದ ಪ್ರಸ್ತುತ ಅಂಚೆ ಕಚೇರಿ ಕೇಂದ್ರದಲ್ಲಿ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿ ಮಾಡಿಕೊಡಲಾಗುತ್ತಿದೆ.

ಅಂಚೆ ಕಚೇರಿಯಲ್ಲಿ ಒಂದು ದಿನಕ್ಕೆ ಕೇವಲ 15 ಜನರಿಗೆ ಮಾತ್ರ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ ಇರುವುದರಿಂದ ಈ 15 ಜನರಲ್ಲಿ ತಾವೊಬ್ಬರಾಗಲು ಜನತೆ ನಸುಕಿನಲ್ಲಿ 2-3 ಗಂಟೆಗೆ ಬಂದು ಪಾಳಿ ಹಚ್ಚುತ್ತಿದ್ದಾರೆ. ನಸುಕಿನಲ್ಲಿ ಬಂದು ತಮ್ಮ ಸ್ಥಳವನ್ನು ಕಾಯ್ದಿರಿಸಿದ್ದರೂ ಟೋಕನ್ ಕೊಡುವುದು ಬೆಳಿಗ್ಗೆ 9 ರಿಂದ 9.30ರವರೆಗೆ. ಒಬ್ಬರಿಗೆ ಒಂದು ಟೋಕನ್ ಮಾತ್ರ. ಮನೆಯಲ್ಲಿ ನಾಲ್ವರ ಆಧಾರ್ ಅಪ್‌ಡೇಟ್ ಮಾಡಿಸುವುದಿದ್ದರೆ ನಾಲ್ಕು ಜನರು ಬಂದು ಸರತಿ ಸಾಲಿನಲ್ಲಿ ಟೋಕನ್‌ಗಾಗಿ ಕಾಯಬೇಕು. ಆಧಾರ್ ನೋಂದಣಿ ಅಥವಾ ತಿದ್ದುಪಡಿ ಪ್ರಕ್ರಿಯೆ ಕಾರ್ಯವನ್ನು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಸಲಾಗುತ್ತದೆ. ಅಲ್ಲಿವರೆಗೆ ಟೋಕನ್ ಪಡೆದವರು ನೋಂದಣಿ, ತಿದ್ದುಪಡಿಗಾಗಿ ಕಾದು ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪಟ್ಟಣದವರು ಮಾತ್ರವಲ್ಲದೇ ಸಂಡೂರು ಸುತ್ತಮುತ್ತಲಿನ ಗ್ರಾಮಗಳವರೂ ಆಧಾರ್ ಕಾರ್ಡ್ ಅಪ್‌ಡೇಟ್‌ಗಾಗಿ ಸಂಡೂರಿನಲ್ಲಿನ ಏಕೈಕ ಕೇಂದ್ರಕ್ಕೆ ಬರುತ್ತಿದ್ದಾರೆ.

ಪಟ್ಟಣದ ನಿವಾಸಿ ಶರಣಪ್ಪ ಕನ್ನಡಪ್ರಭದೊಂದಿಗೆ ಮಾತನಾಡಿ, ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಟೋಕನ್ ಪಡೆಯಲು, ನೋಂದಣಿ ಕೇಂದ್ರಕ್ಕೆ ನಸುಕಿನಲ್ಲಿ 3 ಗಂಟೆಗೆ ಬಂದರೂ, ನನ್ನದು 8ನೇ ಸರದಿ. ನನಗಿಂತಲೂ 7 ಜನ ಮುಂಚಿತವಾಗಿಯೇ ಬಂದು ಸ್ಥಳವನ್ನು ಕಾಯ್ದಿರಿಸಿ, ಟೋಕನ್‌ಗಾಗಿ ಕಾಯುತ್ತಿದ್ದಾರೆ ಎಂದರು.

ಈ ಅಂಶ ಪಟ್ಟಣದ ಜನತೆ ಆಧಾರ್ ತಿದ್ದುಪಡಿಗಾಗಿ ಪಡುತ್ತಿರುವ ಬವಣೆಗೆ ಕನ್ನಡಿ ಹಿಡಿಯುತ್ತದೆ. ಭುಜಂಗನಗರದ ವಿಜಯಕುಮಾರ್, ಮಲ್ಲಾರಳ್ಳಿಯ ಪಾಲಯ್ಯ, ಕೃಷ್ಣಾನಗರದ ಇಮಾಂಬಾಷ ಮುಂತಾದವರು ಸಂಡೂರಿನ ಆಧಾರ್ ಕೇಂದ್ರದ ಮುಂದೆ ಟೋಕನ್ ಪಡೆಯಲು ನಸುಕಿನಿಂದಲೇ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡು ಬಂದಿತು.

ಆಧಾರ್ ಕಾರ್ಡ್ ಪ್ರಾಮುಖ್ಯತೆ ಹೆಚ್ಚಿದೆ. ತಾಲೂಕು ಕೇಂದ್ರ, ಹೋಬಳಿಯಲ್ಲಿ ಕೇಂದ್ರಗಳನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದರಿಂದ ಜನತೆ ಪರದಾಡುವುದು ತಪ್ಪುತ್ತದೆ ಎಂದು ಟೋಕನ್ ಪಡೆಯಲು ಆಧಾರ್ ಕೇಂದ್ರದ ಮುಂದೆ ಕಾದು ಕುಳಿತಿದ್ದ ಸಂಡೂರಿನ ಹೊನ್ನೂರಪ್ಪ, ವಿದ್ಯಾರ್ಥಿಗಳಾದ ಸಂದೀಪ್, ದರ್ಶಿತ್ ಒತ್ತಾಯಿಸಿದ್ದಾರೆ.

ಸಂಡೂರು ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ಕೆ ಹೊಸಬರನ್ನು ನೇಮಿಸಲಾಗಿದೆ. ಇನ್ನು ಒಂದು ವಾರ ಅಥವಾ 15 ದಿನದಲ್ಲಿ ನೋಂದಣಿ, ತಿದ್ದುಪಡಿ ಕಾರ್ಯ ಆರಂಭವಾಗಲಿದೆ. ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ಕಚೇರಿಯಲ್ಲಿ ಆಧಾರ್ ಕೇಂದ್ರ ಆರಂಭವಾದರೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ತಹಶೀಲ್ದಾರ್ ಜಿ.ಅನಿಲ್‌ಕುಮಾರ್.