ಸಾರಾಂಶ
ಸಂಡೂರು: ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ ಹಾಗೂ ಆಯುಕ್ತರಾದ ತ್ರಿಲೋಕ್‌ಚಂದ್ರ ಅವರು ಗುರುವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝೆಡ್) ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲಾ ಕಟ್ಟಡಗಳ ಕಾಮಗಾರಿ ವೀಕ್ಷಿಸಿದರು.
ಚೋರುನೂರು, ಬಂಡ್ರಿ, ಲಕ್ಷ್ಮೀಪುರ, ಭುಜಂಗನಗರ, ಕೃಷ್ಣಾನಗರ, ಸಂಡೂರು, ಸುಶೀಲಾನಗರ ಹಾಗೂ ಜೈಸಿಂಗ್‌ಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡಗಳನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಮಾದರಿ ತಾಲೂಕಾಗಿಸುವ ಗುರಿ: ಕೃಷ್ಣಾನಗರದಲ್ಲಿನ ಸರ್ಕಾರಿ ಆದರ್ಶ ಶಾಲೆಯಲ್ಲಿ ಶಾಸಕಿ ಈ. ಅನ್ನಪೂರ್ಣಾ ತುಕಾರಾಂ ಅವರು ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರಿಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳ ಪತ್ರವನ್ನು ಸಲ್ಲಿಸಿ, ಶೈಕ್ಷಣಿಕವಾಗಿ ತಾಲೂಕನ್ನು ಮಾದರಿಯಾಗಿಸುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿಯ ಎಲ್ಲ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲೆಗಳಲ್ಲಿ ಅಗತ್ಯ ಕೊಠಡಿ, ಆಟದ ಮೈದಾನ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು, ತೋರಣಗಲ್ಲಿಗೆ ಮಂಜೂರಾಗಿರುವ ಪದವಿ ಪೂರ್ವ ಕಾಲೇಜನ್ನು ೨೦೨೫-೨೬ನೇ ಸಾಲಿನಿಂದಲೇ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ತಾಲೂಕಿನ ೧೭೫ ಶಾಲೆಗಳಲ್ಲಿ ೯೩ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳಲ್ಲಿ ಇಸ್ಕಾನ್‌ದಿಂದ ಬಿಸಿಯೂಟ ಪೂರೈಸಲಾಗುತ್ತಿದೆ. ಉಳಿದ ೯೩ ಶಾಲೆಗಳ ವಿದ್ಯಾರ್ಥಿಗಳಿಗೆ ಇಸ್ಕಾನ್ ಮಾದರಿಯಲ್ಲಿ ಒಂದು ಕೇಂದ್ರದಲ್ಲಿ ಪೌಷ್ಟಿಕ ಆಹಾರ ತಯಾರಿಸಿ ಪೂರೈಸಿದರೆ, ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆಯಲ್ಲದೆ, ಶಿಕ್ಷಕರಿಗೆ ಅದರ ಹೊಣೆಗಾರಿಕೆ ತಪ್ಪುತ್ತದೆ. ಈ ಸೌಲಭ್ಯಗಳನ್ನು ಎಲ್ಲ ಶಾಲಾ-ಕಾಲೇಜುಗಳಿಗೆ ಒದಗಿಸಿದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಅಧಿಕಾರಿಗಳು ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಸಂಸದ ಈ. ತುಕಾರಾಂ ಮಾತನಾಡಿ, ತಾಲೂಕಿನಲ್ಲಿಯ ೧೩೨ ಗ್ರಾಮಗಳಲ್ಲಿ ಗುಣಮಟ್ಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾರಿಗೆ ವ್ಯವಸ್ಥೆ ಒದಗಿಸಲಾಗಿದೆ. ಅಧಿಕಾರಿಗಳ ಸಹಕಾರವೂ ಉತ್ತಮವಾಗಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ನೀಗಿಸಿ, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಪ್ರತಿಕ್ರಿಯಿಸಿ, ತಾಲೂಕಿನ ಶಾಲೆಗಳನ್ನು ಮಾದರಿಯಾಗಿಸಲು ಮಾಸ್ಟರ್ ಪ್ಲಾನ್ ಮಾಡೋಣ. ಇದಕ್ಕೆ ಸಿಇಪಿಎಂಐಝೆಡ್ ಯೋಜನೆ ಅಡಿ ಉತ್ತಮ ಅವಕಾಶವಿದೆ. ಇಸ್ಕಾನ್‌ದಿಂದ ಊಟ ಸರಬರಾಜಾಗದ ಶಾಲೆಗಳಿಗೆ ಪೌಷ್ಟಿಕ ಆಹಾರ ಒದಗಿಸಲು ೨-೩ ಮಾದರಿಗಳಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳೋಣ. ಆದರೆ, ಇದಕ್ಕೆ ಒಂದು ಎನ್‌ಜಿಒ ಸಂಸ್ಥೆಯನ್ನು ಮೂರನೇ ಪಾರ್ಟಿಯನ್ನಾಗಿ ಮಾಡಿಕೊಳ್ಳಬೇಕಿದೆ. ನರೇಗಾ ಯೋಜನೆ ಅಡಿಯಲ್ಲಿ ಶಾಲಾ ಆಟದ ಮೈದಾನ ಅಭಿವೃದ್ಧಿ ಪಡಿಸಲು ಅವಕಾಶವಿದೆ ಎಂದು ಹೇಳಿದರು.ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲಿಯೂ ಪೂರ್ವ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮಗಳೆರಡಲ್ಲಿಯೂ ಬೋಧಿಸಲು ಮತ್ತು ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲು, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು. ತೀರಾ ಕಡಿಮೆ ಸಂಖೆ ಇರುವ ಶಾಲೆಗಳನ್ನು ಪಕ್ಕದಲ್ಲಿರುವ ಸರ್ಕಾರಿ ಶಾಲೆಗೆ ಟ್ಯಾಗ್ ಮಾಡಿದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಆಕಾಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಡಿಡಿಪಿಐ ಬಿ. ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಕೊಟ್ರೇಶ್ ಉಪಸ್ಥಿತರಿದ್ದರು.