ಸಂಡೂರು: ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ಆದಿ ಜಾಂಬವ ಮಹಾಸಭಾದ ತಾಲೂಕು ಘಟಕ, ಒಳ ಮೀಸಲಾತಿ ಪರ ಇರುವ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಸಂಡೂರು ಬಂದ್ ಯಶಸ್ವಿಯಾಗಿದೆ.

ಸಾರಿಗೆ ಸಂಸ್ಥೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಂಗಡಿ ಮುಂಗಟ್ಟು, ಹೋಟೆಲ್‌, ಬ್ಯಾಂಕ್‌, ಹೂ-ಹಣ್ಣು, ತರಕಾರಿ ಅಂಗಡಿಗಳು, ಶಾಲಾ-ಕಾಲೇಜುಗಳು, ಪೆಟ್ರೋಲ್ ಬಂಕ್ ಬಂದ್ ಆಗಿದ್ದವು. ಗಣಿ, ವಿವಿಧ ಉದ್ದಿಮೆಗಳ ಕಾರ್ಮಿಕರನ್ನು ಕರೆದೊಯ್ಯಲು ಬರುತ್ತಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ನೀಡದ್ದರಿಂದ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಿದರು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರು ಕಚೇರಿಗಳತ್ತ ಸುಳಿಯಲಿಲ್ಲ. ಬಸ್ ಸಂಚಾರವಿಲ್ಲದ್ದರಿಂದ ಹೊಸಪೇಟೆ, ಬಳ್ಳಾರಿಯ ಕಾಲೇಜಿಗೆ ತೆರಳಲು ಸಿದ್ಧರಾಗಿದ್ದ ವಿದ್ಯಾರ್ಥಿಗಳು ಮರಳಿ ಮನೆಗಳಿಗೆ ತೆರಳಿದರು. ಆಸ್ಪತ್ರೆ, ಔಷಧಿ ಅಂಗಡಿಗಳು ತೆರೆದಿದ್ದವು.

ಪಟ್ಟಣದ ವಿಜಯ ವೃತ್ತದಲ್ಲಿ ಸಭೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಆದಿ ಜಾಂಬವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಐಹೊಳೆ, ಒಳ ಮೀಸಲಾತಿಗಾಗಿ ೩೫ ವರ್ಷಗಳಿಂದ ದೀರ್ಘವಾದ ಹೋರಾಟ ನಡೆದಿದೆ. ಸರ್ವೋಚ್ಚ ನ್ಯಾಯಾಲಯವು ೨೦೨೪ರ ಆ.೧ರಂದು ನೀಡಿದ ತೀರ್ಪಿನಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಸಮರ್ಪಕವಾಗಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು. ಒಂದು ವೇಳೆ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿಯನ್ನು ಅನುಸರಿಸಿದಲ್ಲಿ ತಾಲೂಕಿನ ಮಾದಿಗ ಸಮುದಾಯದಿಂದ ಉಗ್ರ ಹೋರಾಟ ಮಾಡುವುದರ ಜೊತೆಗೆ ಮುಂದೆ ನಡೆಯುವ ಎಲ್ಲ ಹಂತದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದರ ಮೂಲಕ ಉತ್ತರಿಸಬೇಕಾಗುತ್ತದೆ ಎಂದರು.

ಒಳ ಮೀಸಲಾತಿ ಇಲ್ಲದೆ ೫೬,೪೩೨ ಉದ್ಯೋಗ ನೇಮಕಾತಿಗೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಒಳ ಮೀಸಲಾತಿ ಅಳವಡಿಸಿ ಶೇ.೧೫ ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಮಾಡಲಿ. ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ, ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನ ಕೈಬಿಡಬೇಕು. ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಲಿ. ಪರಿಶಿಷ್ಟ ಜಾತಿಗೆ ಶೇ.೧೭, ಪರಿಶಿಷ್ಟ ವರ್ಗಕ್ಕೆ ಶೇ.೭ರಷ್ಟು ಒಟ್ಟು ಶೇ.೫೬ ಮೀಸಲಾತಿಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು ಎಂದರು.


ಉದ್ಯೋಗ ನೇಮಕಾತಿ, ನೇರ ನೇಮಕಾತಿ, ಬ್ಯಾಕ್‌ಲಾಗ್, ಬಡ್ತಿ, ಮುಂಬಡ್ತಿ, ಒಳಗುತ್ತಿಗೆ, ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಆರ್ಥಿಕ ಸೌಲಭ್ಯ ಎಲ್ಲ ಹಂತಗಳಲ್ಲಿಯೂ ಸಂಪೂರ್ಣ ಒಳ ಮೀಸಲಾತಿ ಕಲ್ಪಿಸಬೇಕು ಎಂದರು.

ಮುಖಂಡರಾದ ಎಚ್.ತಾಯಪ್ಪ, ಮಲ್ಲೇಶ ಕಮತೂರು, ಎಚ್.ದುರುಗಮ್ಮ, ಎಚ್.ಕುಮಾರಸ್ವಾಮಿ, ಸತೀಶ್ ಹೆಗಡೆ, ಆರ್.ಕೆ. ಹೆಗಡೆ ಮಾತನಾಡಿ, ಮಾದಿಗ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಮಾಜದ ಮುಖಂಡರು ಒಳ ಮೀಸಲಾತಿಗಾಗಿ ೩೫ ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಶುಕ್ರವಾರ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಬೇಕು. ತಪ್ಪಿದಲ್ಲಿ ಮಾದಿಗ ಹಾಗೂ ಒಳ ಮೀಸಲಾತಿ ಪರವಿರುವ ಎಲ್ಲ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಹನುಮಂತ ರೆಡ್ಡಿ, ಕೆ.ದೇವದಾಸ್, ಎಂ.ಶಿವಲಿಂಗಪ್ಪ, ಎಚ್.ಬಿ. ತಿಪ್ಪೇಸ್ವಾಮಿ, ಎಚ್. ಮರಿಸ್ವಾಮಿ, ಎಲ್.ಎಚ್. ಶಿವಕುಮಾರ್, ಕುಮಾರ್ ವೈ.ಟಿ.ಜಿ, ಎಂ.ಎಲ್.ಕೆ. ನಾಯ್ಡು, ಸತ್ಯನಾರಾಯಣ, ಸತೀಶ್, ಮಲಿಯಪ್ಪ, ಕಸ್ತೂರಿ ಮಂಜುನಾಥ್, ನೂರಾರು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.