೨೦೦೪ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದಾಗ ವಿಠಲಾಪುರ ಭಾಗದಲ್ಲಿ ಬೀದಿದೀಪಗಳು ಹತ್ತಿದರೂ ಅವುಗಳ ಬೆಳಕು ನೆಲಕ್ಕೆ ಬೀಳದಂತಹ ಪರಿಸ್ಥಿತಿ ಇತ್ತು.
ಸಂಡೂರು: ನಾನು ೨೦೦೪ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ನಂಜುಂಡಪ್ಪ ವರದಿ ಪ್ರಕಾರ ಸಂಡೂರು ತಾಲೂಕು ಅತಿ ಹಿಂದುಳಿದ ತಾಲೂಕೆಂದು ಗುರುತಿಸಲ್ಪಟ್ಟಿತ್ತು. ಇಂದು ಈ ಕ್ಷೇತ್ರ ಅಭಿವೃದ್ಧಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ತಾಲೂಕಿನ ವಿಠಲಾಪುರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ತಾಪಂನಿಂದ ಬುಧವಾರ ಹಮ್ಮಿಕೊಂಡಿದ್ದ "ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ " ಉದ್ಘಾಟಿಸಿ ಅವರು ಮಾತನಾಡಿದರು.೨೦೦೪ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದಾಗ ವಿಠಲಾಪುರ ಭಾಗದಲ್ಲಿ ಬೀದಿದೀಪಗಳು ಹತ್ತಿದರೂ ಅವುಗಳ ಬೆಳಕು ನೆಲಕ್ಕೆ ಬೀಳದಂತಹ ಪರಿಸ್ಥಿತಿ ಇತ್ತು. ಇಂದು ಈ ಭಾಗದಲ್ಲಿ ಸಬ್ ಸ್ಟೇಷನ್ ಆದ ಮೇಲೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ. ಎನ್‌ಎಂಡಿಸಿಯ ಸಹಕಾರದೊಂದಿಗೆ ೧೩ ಆ್ಯಂಬುಲೆನ್ಸ್‌ಗಳ ಮೂಲಕ ಕ್ಲಿನಿಕ್ ಆನ್ ವೀಲ್ ಯೋಜನೆ ಅಡಿ, ಗ್ರಾಮಾಂತರ ಪ್ರದೇಶಗಳಲ್ಲಿಯೂ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸಂಡೂರು ಪಟ್ಟಣವಲ್ಲದೆ, ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆಗೂ ತುಂಗಭದ್ರಾ ನದಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹೬೦ ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ ₹೩ ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ನಾವು ಪಕ್ಷಾತೀತವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನನ್ನ ಕೊನೆಯ ಉಸಿರಿರುವವರೆಗೆ ಜನರ ಸೇವೆ ಮಾಡುವೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸದ ಈ. ತುಕಾರಾಂ, ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು, ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ೨೦೦೮ ರಿಂದ ಇಲ್ಲಿಯವರೆಗೆ ₹೪೭೦೦ ಕೋಟಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ₹೪೨೫ ಕೋಟಿ ವೆಚ್ಚದಲ್ಲಿ ಸಂಡೂರು ಸೇರಿದಂತೆ ಗ್ರಾಮಾಂತರ ಪ್ರದೇಶದ ಜನತೆಗೆ ಮನೆಮನೆಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲಿ ಐದು ಸಾವಿರ ಕೋಟಿ ರು. ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಆರಂಭಿಸಲಾಗುವುದು. ಇನ್ನು ೬ ತಿಂಗಳಲ್ಲಿ ಈ ಜೀನ್ಸ್ ಪಾರ್ಕ್‌ಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಬಾಲ್ಯವಿವಾಹ ತಡೆಗೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದಿಂದ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭವಾಗಲಿದೆ. ತಾಲೂಕಿನಲ್ಲಿಯ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಂತೋಷ್ ಲಾಡ್ ಅವರು ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ಎಚ್.ಲಕ್ಷ್ಮಣ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಠಲಾಪುರ ಭಾಗದಲ್ಲಿ ವಿವಿಧ ಶಾಲೆ, ಕಾಲೇಜುಗಳ ಸ್ಥಾಪನೆಗೆ ಭೂಮಿ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಗರ್ಭಿಣಿಯರಿಗೆ ಉಡಿ ತುಂಬಿ ಶುಭ ಹಾರೈಸಲಾಯಿತು. ಸ್ವಸಹಾಯ ಸಂಘಗಳಿಗೆ ಸಹಾಯಧನವನ್ನು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಸ್ವಾಗತಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಬುಡಾ ಅಧ್ಯಕ್ಷ ಆಂಜನೇಯಲು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ತಾಲೂಕು ಅಧ್ಯಕ್ಷ ನೂರುದ್ದೀನ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ವಿವಿಧ ಗ್ರಾಪಂ ಅಧ್ಯಕ್ಷರಾದ ಎಂ.ವೈ. ರಮೇಶ್, ವರಲಕ್ಷ್ಮೀ, ಬಿ. ನಾಗೇಶ್, ಎನ್. ಹೊನ್ನೂರಸ್ವಾಮಿ, ವಾಡಾ ಮಾಜಿ ಅಧ್ಯಕ್ಷರಾದ ರೋಷನ್ ಜಮೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿತ್ರಿಕಿ ಸತೀಶ್, ಜಿ. ಏಕಾಂಬ್ರಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ, ತಾಪಂ ಇಒ ಮಡಗಿನ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳ ಜನತೆ ಉಪಸ್ಥಿತರಿದ್ದರು.