ಸಂಡೂರು ಜನತೆಗಿಲ್ಲ ಪ್ಯಾಸೆಂಜರ್‌ ರೈಲು ಭಾಗ್ಯ

| Published : Jul 19 2024, 12:48 AM IST

ಸಾರಾಂಶ

ಸ್ವಾಮಿಹಳ್ಳಿಯಿಂದ ಯಶವಂತನಗರ ಮಾರ್ಗವಾಗಿ ಹೊಸಪೇಟೆ ವರೆಗೆ ರೈಲ್ವೆ ಹಳಿ ಇದ್ದು, ಇಲ್ಲಿ ಪ್ರತಿನಿತ್ಯ ಅದಿರು ಸಾಗಣೆ ರೈಲುಗಳು ಸಂಚರಿಸುತ್ತಿವೆ.

ವಿ.ಎಂ. ನಾಗಭೂಷಣ

ಸಂಡೂರು: ಸಂಡೂರು ತಾಲೂಕಿನಿಂದ ವಿವಿಧೆಡೆ ಸಂಚರಿಸುವ ರೈಲುಗಳು ಸಾರ್ವಜನಿಕರ ಪಾಲಿಗೆ ಕೇವಲ ನೋಡೋದಕ್ಕೆ, ಹತ್ತೋದಕಲ್ಲ ಎಂಬಂತಾಗಿದೆ. ಕಾರಣ, ಇಲ್ಲಿ ಸಂಚರಿಸುವ ರೈಲು ಗಾಡಿಗಳೆಲ್ಲವೂ ಅದಿರು ಸಾಗಣೆಯ ಗೂಡ್ಸ್ ರೈಲುಗಳು.

ತಾಲೂಕಿನ ಸ್ವಾಮಿಹಳ್ಳಿಯಿಂದ ಯಶವಂತನಗರ ಮಾರ್ಗವಾಗಿ ಹೊಸಪೇಟೆ ವರೆಗೆ ರೈಲ್ವೆ ಹಳಿ ಇದ್ದು, ಇಲ್ಲಿ ಪ್ರತಿನಿತ್ಯ ಅದಿರು ಸಾಗಣೆ ರೈಲುಗಳು ಸಂಚರಿಸುತ್ತಿವೆ. ತಾಲೂಕು ಕೇಂದ್ರ ಸಂಡೂರು ಪುರಸಭೆ ವ್ಯಾಪ್ತಿಯಲ್ಲಿನ ನಂದಿಹಳ್ಳಿಯಿಂದ ತೋರಣಗಲ್ಲು ವರೆಗೆ ಅದಿರು ಸಾಗಣೆ ರೈಲುಗಳು ಸಂಚರಿಸುತ್ತಿವೆ. ತಾಲೂಕಿನ ರಣಜಿತ್‌ಪುರದಿಂದ ತೋರಣಗಲ್ಲು ವರೆಗೆ ರೈಲು ಮಾರ್ಗವಿದೆ. ಅದಿರು ಸಾಗಣೆಗೆ ಸಂಡೂರಿನ ಬಳಿಯಲ್ಲಿ ಹೊಸದಾಗಿ ರೈಲ್ವೆ ಸೈಡಿಂಗ್ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ. ಈ ರೈಲು ಮಾರ್ಗಗಳಲ್ಲಿ ರೈಲುಗಳ ಮೂಲಕ ಅದಿರು ಸಾಗಿಸಲಾಗುತ್ತಿದೆಯೇ ಹೊರತು ಪ್ರಯಾಣಿಕರ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.

ಇಲ್ಲಿನ ಅದಿರು ಸಾಗಣೆಯಿಂದ ವಾರ್ಷಿಕ ಸಾವಿರಾರು ಕೋಟಿ ರು. ಆದಾಯ ಗಳಿಸುವ ರೈಲ್ವೆ ಇಲಾಖೆ ಸಂಡೂರಿನ ಜನತೆಗೆ ರೈಲು ಪ್ರಯಾಣ ಅಂದರೆ ಪ್ಯಾಸೆಂಜರ್ ರೈಲಿನ ಅನುಕೂಲ ಕಲ್ಪಿಸದಿರುವುದು ವಿಪರ್ಯಾಸವಾಗಿದೆ. ಬಳ್ಳಾರಿ ಮತ್ತು ಹೊಸಪೇಟೆ ಮಾರ್ಗಮಧ್ಯೆ ಬರುವ ತೋರಣಗಲ್ಲಲ್ಲಿ ಮಾತ್ರ ಪ್ರಯಾಣಿಕರ ರೈಲು ಸಂಚಾರ ಸೌಲಭ್ಯವಿದ್ದು, ಸಂಡೂರು ಭಾಗದವರಿಗೆ ಇದರಿಂದ ಹೆಚ್ಚಿನ ಅನುಕೂಲವಿಲ್ಲ.

1990ರಲ್ಲಿ ಸ್ಥಗಿತ: ತಾಲೂಕಿನ ಸ್ವಾಮಿಹಳ್ಳಿಯಿಂದ ಯಶವಂತನಗರ ಮಾರ್ಗವಾಗಿ ಹೊಸಪೇಟೆ ವರೆಗೆ ಪ್ಯಾಸೆಂಜರ್ ರೈಲು ಸಂಚಾರ ವ್ಯವಸ್ಥೆ ಇತ್ತು. ೯೦ರ ದಶಕದಲ್ಲಿ ಬ್ರಾಡ್‌ಗೇಜ್ ನಿರ್ಮಾಣಕ್ಕಾಗಿ ಸ್ಥಗಿತಗೊಳಿಸಲಾಯಿತು. ಆ ಬಳಿಕ ಪ್ಯಾಸೆಂಜರ್ ರೈಲು ಸಂಚಾರ ಇದುವರೆಗೂ ಆರಂಭವಾಗಿಲ್ಲ. ಈ ಭಾಗದ ಗ್ರಾಮಗಳ ಹಿರಿಯರು ತಾವು ಆಗ ಈ ಭಾಗದಲ್ಲಿ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸುತ್ತಿದ್ದ ಅನುಭವಗಳನ್ನು ಈಗಲೂ ಮೆಲುಕು ಹಾಕುತ್ತಾರೆ.

ಸ್ವಾಮಿಹಳ್ಳಿಯಿಂದ ಮೊಳಕಾಲ್ಮೂರು ಅಥವಾ ಓಬಳಾಪುರ ಅಥವಾ ರಾಯದುರ್ಗಕ್ಕೆ ರೈಲು ಮಾರ್ಗ ವಿಸ್ತರಿಸಿದರೆ, ಹೊಸಪೇಟೆ ಹಾಗೂ ಸಂಡೂರು ಭಾಗದ ಜನತೆ ಬೆಂಗಳೂರು ಮತ್ತಿತರ ಕಡೆಗೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಹೋಗಿ ಬರಬಹುದು. ಈ ಕುರಿತು ಬೇಡಿಕೆಯೂ ಇತ್ತೀಚೆಗಿನ ದಿನಗಳಲ್ಲಿ ಈ ಭಾಗದ ಜನತೆಯಿಂದ ಹೆಚ್ಚಾಗಿ ಕೇಳಿ ಬರುತ್ತಿದೆ.

ಜಿಗೇನಹಳ್ಳಿಯ ರೈತ ಮುಖಂಡರಾದ ರಾಜಶೇಖರ ಪಾಟೀಲ್ ಮಾತನಾಡಿ, ನಾನು ಈ ಹಿಂದೆ ಸ್ವಾಮಿಹಳ್ಳಿ-ಹೊಸಪೇಟೆ ಮಾರ್ಗದಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಸಂಚರಿಸಿದ್ದೇನೆ. ಸ್ವಾಮಿಹಳ್ಳಿಯಿಂದ ಸಮೀಪದ ಓಬಳಾಪುರ ಅಥವಾ ರಾಯದುರ್ಗದ ವರೆಗೆ ರೈಲು ಮಾರ್ಗವನ್ನು ವಿಸ್ತರಿಸಿದರೆ, ಈ ಭಾಗದ ಜನತೆಗೆ ಬೆಂಗಳೂರು, ಹೊಸಪೇಟೆ ಮುಂತಾದೆಡೆಗೆ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಅನುಕೂಲವಾಗಲಿದೆ. ಈ ಕುರಿತು ನಾನು ಈ ಹಿಂದೆ ಕೇಂದ್ರ ರೈಲ್ವೆ ಮಂತ್ರಿಗಳಿಗೂ, ಪ್ರಧಾನ ಮಂತ್ರಿಗಳಿಗೂ, ರೈಲ್ವೆ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆದಿದ್ದೇನೆ. ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ ಅವರು ಮಾತನಾಡಿ, ಗೂಡ್ಸ್ ಗಾಡಿಗಳ ಸಂಚಾರದಿಂದ ಕೇವಲ ಉದ್ದಿಮೆದಾರರಿಗೆ ಅನುಕೂಲ. ಸಾರ್ವಜನಿಕರಿಗೆ ಏನೂ ಉಪಯೋಗವಿಲ್ಲ. ಸಂಡೂರಿಗೆ ಪ್ಯಾಸೆಂಜರ್ ರೈಲು ವ್ಯವಸ್ಥೆ ಕಲ್ಪಿಸುವುದರಿಂದ ಮತ್ತು ಈಗಾಗಲೆ ಸ್ವಾಮಿಹಳ್ಳಿ ವರೆಗೆ ಇರುವ ರೈಲು ಮಾರ್ಗವನ್ನು ರಾಯದುರ್ಗ ಅಥವಾ ಮೊಣಕಾಲ್ಮೂರು ವರೆಗೆ ವಿಸ್ತರಿಸುವುದರಿಂದ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದವರೆ ಆದ ವಿ. ಸೋಮಣ್ಣ ಅವರು ಇದೀಗ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಸ್ಥಳೀಯರಾದ ಈ. ತುಕಾರಾಂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ಆಡಳಿತಾವಧಿಯಲ್ಲಿ ಸಂಡೂರು ಭಾಗದಲ್ಲಿನ ರೈಲು ಮಾರ್ಗಗಳಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿ ಹಾಗೂ ಸ್ವಾಮಿಹಳ್ಳಿ ವರೆಗಿನ ರೈಲು ಮಾರ್ಗ ವಿಸ್ತರಣೆಯಾಗಿ ಅಲ್ಲಿಯೂ ಸಾರ್ವಜನಿಕರಿಗೆ ರೈಲು ಪ್ರಯಾಣ ಭಾಗ್ಯ ದೊರಕುವಂತಾಗಲಿ ಎಂಬ ಸದಾಶಯ ಈ ಭಾಗದ ಜನತೆಯದ್ದಾಗಿದೆ.

ಮುಂಬರುವ ಕೇಂದ್ರ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಿಯೋಗದೊಂದಿಗೆ ತೆರಳಿ, ಈ ಭಾಗದ ರೈಲು ಸಂಚಾರಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತಾಗಿ ರೈಲ್ವೆ ಸಚಿವರ ಗಮನಕ್ಕೆ ತರಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ.