ಸಾರಾಂಶ
ಅಯೋಧ್ಯೆಯಲ್ಲಿನ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಂಡೂರು: ಅಯೋಧ್ಯೆಯಲ್ಲಿನ ರಾಮಮಂದಿರದಲ್ಲಿ ಸೋಮವಾರ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಶ್ರೀರಾಮನಿಗೆ ವಿಶೇಷ ಅಲಂಕಾರ, ಪೂಜೆ ಜರುಗಿದವು.
ಅಯೋಧ್ಯೆಯಲ್ಲಿನ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅರ್ಚಕ ಹಾಗೂ ಪುರೋಹಿತ್ ಪರಿಷತ್ ವತಿಯಿಂದ ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಅಭಿಷೇಕ, ಅಲಂಕಾರ, ಪುಣ್ಯಾವನ ಹಾಗೂ ದೇವತಾ ಸ್ಥಾಪನ, ಹೋಮ, ಭಜನೆ, ರಾಮಜಪ, ಹನುಮಾನ್ ಚಾಲಿಸ್, ವಿಷ್ಣು ಸಹಸ್ರನಾಮವಳಿ, ರಾಮರಕ್ಷ ಪಠಣ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನೆರವೇರಿಸಲಾಯಿತು.ಅಯೋಧ್ಯೆಯಲ್ಲಿನ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಿಶೇಷ ಪೂಜೆ: ತಾಲೂಕಿನ ಬೊಮ್ಮಾಘಟ್ಟ ಗ್ರಾಮದ ಹುಲಿಕುಂಟೆರಾಯ ದೇವಸ್ಥಾನದಲ್ಲಿ ಹುಲಿಕುಂಟೆರಾಯ, ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ನೆರವೇರಿಸಲಾಯಿತು. ನಂತರ ಬೆಳ್ಳಿ ರಥವನ್ನು ಎಳೆದು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಆಂಜನೇಯ ದೇವಸ್ಥಾನ: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಟಿ. ಪಂಪಾಪತಿ ಅವರು ಸೋಮವಾರ ಅಯೋಧ್ಯೆಯಲ್ಲಿನ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯದ ಹಿನ್ನೆಲೆ ತಾಲೂಕಿನ ಗೌರಿಪುರದ ಪುರಾತನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ, ಬನ್ನಿಹಟ್ಟಿ, ನಾಗಲಾಪುರ, ಗಂಗಲಾಪುರ, ತಾರಾನಗರ ಹಾಗೂ ಮುರಾರಿಪುರ ಗ್ರಾಮಗಳ ೪೦೦೦ ಮನೆಗಳಿಗೆ ಲಾಡು ಪ್ರಸಾದವನ್ನು ವಿತರಿಸಿದರು.