ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆವೀರಶೈವ ಲಿಂಗಾಯತ ಬೇರೆ ಬೇರೆ ಧರ್ಮಗಳು ಎಂಬ ಕೂಗು ಬಂದಾಗ ದೃಢವಾಗಿ ನಿಂತು ನಾವೆಲ್ಲರೂ ಒಂದೇ ಎಂದು ಗಟ್ಟಿ ದ್ವನಿಯಾದವರು ಲಿಂ. ಡಾ. ಸಂಗನಬಸವ ಸ್ವಾಮೀಜಿಯವರು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶ್ರೀಗಳು ತಿಳಿಸಿದರು.
ಲಿಂ. ಡಾ. ಸಂಗನಬಸವ ಶ್ರೀಗಳ ಪಟ್ಟಾಧಿಕಾರದ ೫೦ನೇ ವರ್ಷಾಚರಣೆ ಅಂಗವಾಗಿ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ಆಯೋಜಿಸಿರುವ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,ಡಾ. ಸಂಗನಬಸವ ಶ್ರೀಗಳಿಗೆ ಸಮಗ್ರ ಸಮಾಜದ ದೂರದೃಷ್ಟಿ ಕಲ್ಪನೆ ಇತ್ತು. ಸಮಾಜ ಒಡೆಯುಲು ಬಯಸಿದ್ದ ಕೆಟ್ಟ ಜನರಿಗೂ ಸೂಕ್ತ ಉತ್ತರ ನೀಡಿದ್ದಲ್ಲದೇ, ಆ ಕಾಲದಲ್ಲಿ ನಡೆದ ವೀರಶೈವ ಮಹಾಸಭಾ ಚುನಾವಣೆಯಲ್ಲಿಯೂ ವೀರಶೈವ ಲಿಂಗಾಯತರು ಒಂದೇ ಎನ್ನುವವರು ಮಾತ್ರ ಮತ ಚಲಾಯಿಸಿ ಎಂಬ ಗಂಭೀರ ಸಂದೇಶ ಸಾರಿದ್ದರು. ಅಲ್ಲದೇ ಆ ಸಂದರ್ಭದಲ್ಲಿ ಬೆಂಗಳೂರು, ವಿಜಯಪುರ ಇನ್ನೂ ಮುಂತಾದೆಡೆ ಜಾಗೃತಿ ಸಭೆ ನಡೆಸಿದ್ದರು ಎಂದರು.
ವಿಜಯನಗರ ಜಿಲ್ಲಾ ರಚನಾ ಸಂದರ್ಭದಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದು, ಅಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲಾ ರಚನೆಯಾಗಲೇಬೇಕೆಂದು ಒತ್ತಾಯಿಸಿದ್ದ ದಾಸೋಹ ಮೂರ್ತಿಗಳಾಗಿ ಅನ್ನದಾನೀಶ್ವರರಾಗಿದ್ದರು ಎಂದರು.ಶ್ರೀಮಠದೊಂದಿಗಿರುವ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದ ಶ್ರೀಗಳು, ಉಜ್ಜಯಿನಿ ಮಠವು ಸದಾ ಕೊಟ್ಟೂರು ಸ್ವಾಮಿ ಮಠ ಬೆಂಬಲಕ್ಕೆ ಇರುತ್ತದೆ ಎಂಬ ಆಶ್ವಾಸನೆ ನೀಡಿದರು.
ಸಂತೆಕೆಲ್ಲೂರು ಘನಮಠೇಶ್ವರಮಠದ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರುಗೋಡ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಅಳಂದ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇತರರು ಇದ್ದರು.ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಯಶೋದಾ ಹೊಸೂರು ಅವರು ವಿಜಯನಗರ ಜಿಲ್ಲೆಯ ಸಂಪನ್ಮೂಲ ಹಾಗೂ ಅಭಿವೃದ್ಧಿ ಕುರಿತು ವಿಷಯ ಮಂಡಿಸಿದರು. ಮೃತ್ಯುಂಜಯ ನಗರದ ತೋಯ್ಯಾಬ್ ಮಸೀದಿಯವರು ಪ್ರಸಾದ ಸೇವೆ ನೀಡಿದರು.