ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ ಬಳಿಕ ಕೊಪ್ಪಳ ಜಿಲ್ಲೆಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬೆಳವಣಿಗೆಯಾಗುತ್ತಿವೆ. ಈ ನಡುವೆ ಕಾಂಗ್ರೆಸ್ ತನ್ನ ಹುರಿಯಾಳು ಘೋಷಣೆ ಮಾಡದೆ ಇರುವುದು ಹಲವಾರು ಚರ್ಚೆಗೆ ಇಂಬು ನೀಡಿದೆ.ಸಂಸದ ಸಂಗಣ್ಣ ಕರಡಿ ಅವರು ಚುನಾವಣೆಯಲ್ಲಿ ತಾವೇ ಸೋತಾಗಲೂ ಧೈರ್ಯದಿಂದ ಇರುತ್ತಿದ್ದವರು ಈಗ ಬಿಜೆಪಿ ಟಿಕೆಟ್ ತಪ್ಪಿದಾಗ ಧೈರ್ಯ ಕಳೆದುಕೊಂಡವರಂತೆ ಕಾಣುತ್ತಿದ್ದಾರೆ. ಸಿಂಧನೂರಿನಲ್ಲಿ ರೈಲ್ವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೆರಳುವ ವೇಳೆಯಲ್ಲಿ ಹಿತೈಷಿಗಳು ಕಣ್ಣೀರು ಹಾಕುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಭಾವಪರವಶರಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಸಂಸದ ಸಂಗಣ್ಣ ಕರಡಿ ಅವರು ಟಿಕೆಟ್ ತಪ್ಪಿರುವುದಕ್ಕೆ ಅಸಮಾಧಾನವಾಗಿರುವುದು ಒಂದುಕಡೆಯಾದ ಇದಾದ ಮೇಲೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ತೀವ್ರ ಆಕ್ರೋಶಗೊಂಡಿದ್ದಾರೆ. ಪಕ್ಷಕ್ಕಾಗಿ ಇಷ್ಟು ವರ್ಷಗಳ ಕಾಲ ಸೇವೆ ಮಾಡಿದ ನನ್ನನ್ನು ಹೀಗೆ ನಡೆಸಿಕೊಂಡಿದ್ಯಾಕೆ ಎನ್ನುವುದು ನನಗೂ ತಿಳಿಯುತ್ತಿಲ್ಲ ಎಂದು ಆತ್ಮಿಯರೊಂದಿಗೆ ಅಲವತ್ತುಕೊಂಡಿದ್ದಾರೆ.ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಸ್ವಪಕ್ಷೀಯ ಕೆಲವರು ದುಃಖ ವ್ಯಕ್ತಪಡಿಸಿದ್ದಕ್ಕಿಂತ ಬೇರೆ ಪಕ್ಷದಲ್ಲಿದ್ದವರೇ ಹೆಚ್ಚು ಕರೆ ಮಾಡಿ, ಸಂತೈಸುವ ಕೆಲಸ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.
ನನಗೆ ಟಿಕೆಟ್ ಯಾಕೆ ತಪ್ಪಿಸಲಾಗಿದೆ ಎನ್ನುವುದನ್ನಾದರೂ ಹೇಳಿ ಎಂದು ಬಿಜೆಪಿಯ ಆತ್ಮೀಯರಲ್ಲಿ ಕೇಳುತ್ತಿದ್ದಾರೆ. ಕುಷ್ಟಗಿ ಶಾಸಕ ಹಾಗೂ ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಅವರು ಮನೆಗೆ ಬಂದಾಗಲೂ ಪ್ರಶ್ನೆ ಮಾಡಿದ್ದು ಇದನ್ನೇ.ಕಾಂಗ್ರೆಸ್ ಬಾಗಿಲಲ್ಲಿ: ಸಂಸದ ಸಂಗಣ್ಣ ಕರಡಿ ಅವರು ಈಗಾಗಲೇ ಕಾಂಗ್ರೆಸ್ ಬಾಗಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಅನೇಕರು ಅವರೊಂದಿಗೆ ಮಾತುಕತೆಯಾಡಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಖುದ್ದು ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಶಾಸಕ ಲಕ್ಷ್ಮಣ ಸವದಿ ಅವರು ಸಹ ಮಾತನಾಡಿದ್ದಾರೆ.ಏನೇನು ಚರ್ಚೆ?: ಸಂಸದ ಸಂಗಣ್ಣ ಕರಡಿ ಅವರಿಗೆ ಮುಂದೆ ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಸಂಸದ ಸಂಗಣ್ಣ ಕರಡಿ ಅವರು ನಯವಾಗಿಯೇ ತಿರಸ್ಕಾರ ಮಾಡಿದ್ದು, ನನಗೆ ಎಂಪಿ ಟಿಕೆಟ್ ಕೊಡುವುದಾದರೆ ಬರುತ್ತೇನೆ, ಇಲ್ಲದಿದ್ದರೆ ಬಿಜೆಪಿಯಲ್ಲಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದೆಲ್ಲವನ್ನು ಬಹಳ ಗೌಪ್ಯವಾಗಿಯೇ ಇಟ್ಟಿದ್ದಾರೆ.
ಕಳೆದೆರಡು ದಿನಗಳಿಂದ ನಿರ್ಲಕ್ಷ್ಯ ವಹಿಸಿದ್ದ ಬಿಜೆಪಿ ನಾಯಕರು ಸಹ ಸಂಸದ ಸಂಗಣ್ಣ ಕರಡಿ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಕೆಲವು ನಾಯಕರು ಕರೆ ಮಾಡಿದ್ದರೂ ಸಂಸದ ಸಂಗಣ್ಣ ಕರಡಿ ಅವರು ಕರೆ ಸ್ವೀಕಾರ ಮಾಡಿಲ್ಲ ಎಂದು ಖಚಿತ ಮಾಹಿತಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದೆ.ಹಲವಾರು ಚರ್ಚೆ?: ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಯತ್ನ ನಡೆಸಿರುವ ಕಾಂಗ್ರೆಸ್ ನಾಯಕರು ಎಂಎಲ್‌ಸಿ ಸ್ಥಾನವನ್ನು ಒಪ್ಪದಿದ್ದರೆ ಎಂಪಿ ಟಿಕೆಟ್‌ನ್ನು ಅವರಿಗೆ ನೀಡಿ, ರಾಜಶೇಖರ ಹಿಟ್ನಾಳ ಅವರನ್ನು ಎಂಎಲ್‌ಸಿ ಮಾಡಿದರಾಯಿತು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಇದೆಲ್ಲವೂ ಕಾಂಗ್ರೆಸ್‌ನ ಎರಡನೇ ಹಂತದ ನಾಯಕರ ಮಟ್ಟದಲ್ಲಿಯೇ ನಡೆಯುತ್ತಿರುವ ಬೆಳವಣಿಗೆಯಾಗಿದೆ.
ಸಂಗಣ್ಣ ಕರಡಿ ಅವರಿಗೆ ಖುದ್ದು ಇಕ್ಬಾಲ್ ಅನ್ಸಾರಿ ಅವರು ಕರೆ ಮಾಡಿ ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ.ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿರುವುದು ಕೊಪ್ಪಳ ಜಿಲ್ಲೆಯ ರಾಜಕೀಯ ಛಿದ್ರೀಕರಣವೂ ಆಗುತ್ತಿದೆ
ಟಿಕೆಟ್ ಬದಲು: ಕಾಂಗ್ರೆಸ್ ಏನಾದರೂ ಸಂಸದ ಸಂಗಣ್ಣ ಕರಡಿ ಅವರನ್ನು ಕರೆದುಕೊಂಡು ಟಿಕೆಟ್ ನೀಡಿದ್ದೇ ಆದರೆ ಬಿಜೆಪಿ ಕೊನೆ ಗಳಿಗೆಯಲ್ಲಿ ತನ್ನ ಹುರಿಯಾಳು ಬದಲಿಸುವ ಸಾಧ್ಯತೆ ಇದೆ. ಹೀಗಾಗಿ, ಕಾಂಗ್ರೆಸ್ ಟಿಕೆಟ್ ಘೋಷಣೆ ಹಲವಾರು ರೀತಿಯ ಅದಲು ಬದಲಿಗೆ ಕಾರಣವಾಗಿದೆ.ಬಿಜೆಪಿಗೆ ಸಿವಿಸಿ: ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್‌ಗೆ ಹೋದರೆ ಅವರ ಕಡುವೈರಿಯೇ ಆಗಿರುವ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಹಾಗೊಂದು ವೇಳೆ ಅವರು ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯಲ್ಲಿಯೇ ಉಳಿದರೆ ಸಿ.ವಿ. ಚಂದ್ರಶೇಖರ ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತೆ ಇಲ್ಲ.