ಸೋಮವಾರಪೇಟೆ ಜೇಸಿಐ ಮಹಿಳಾ ದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ

| Published : Mar 16 2024, 01:52 AM IST

ಸಾರಾಂಶ

ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಲೇಡಿ ವಿಂಗ್ ವತಿಯಿಂದ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೇಸಿಐ ವಲಯ ಸಂಯೋಜಕಿ ರೂಪಾ ಗೋಪಾಲಕೃಷ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಹಾಗೂ ಜೇಸಿಐ ಅಧ್ಯಕ್ಷ ವಸಂತ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಂದಿಗೂ ಅನೇಕ ಮನೆಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಇದ್ದು, ಹಲವರು ಶಿಕ್ಷಣದಿಂದಲೂ ವಂಚಿರಾಗುತ್ತಿದ್ದಾರೆ, ಅದಾಗಬಾರದು. ಪೋಷಕರು ಗಂಡಿಗೆ ನೀಡುವಂತೆ ಹೆಣ್ಣಿಗೂ ಶಿಕ್ಷಣ ನೀಡಿದಲ್ಲಿ ಮಾತ್ರ ಅದರಿಂದ ಧೈರ್ಯ ಮತ್ತು ಸಮರ್ಥ ಜೀವನ ನಡೆಸಲು ಸಾಧ್ಯವಾಗುವುದು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕಿ ನಿರ್ದೇಶಕಿ ಮಿಲನಾ ಭರತ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಲೇಡಿ ವಿಂಗ್ ವತಿಯಿಂದ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯರಲ್ಲಿ ಇಂದಿಗೂ ಹೆಚ್ಚಿನವರು ಕತ್ತಲೆ ಕೋಣೆಯಲ್ಲಿಯೇ ಉಳಿದಿದ್ದು, ಕನಿಷ್ಠ ಮಹಿಳಾ ದಿನಾಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮದ ಅರಿವನ್ನು ಹೊಂದಿಲ್ಲದಿರುವುದನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದು ಅವರು ವಿಷಾದಿಸಿದರು.

ಸಾಧನೆಗಳು ಯಾವುದೂ ಸುಲಭವಾಗಿ ಕೈ ಗೆ ಸಿಗುವುದಿಲ್ಲ. ಪರಿಶ್ರಮದಿಂದ ಕೆಲಸ ಮಾಡಿದಲ್ಲಿ ಮಾತ್ರ ಸಾಧ್ಯ. ಅದು ವೇದಿಕೆಗಳಲ್ಲಿ ಕೇವಲ ಪ್ರಶಸ್ತಿ, ಸನ್ಮಾನಕ್ಕೆ ಮೀಸಲಾಗಬಾರದು. ನಮ್ಮ ಜೀವನದ ಕನಸ್ಸನ್ನು ಈಡೇರಿಸುವಂತಾಗಬೇಕು. ನಮ್ಮ ಸಾಧನೆಯೊಂದಿಗೆ ಸಮಾಜದ ಕೆಳಹಂತದಲ್ಲಿರುವವರನ್ನು ನಮ್ಮೊಂದಿಗೆ ಮೇಲೆತ್ತುವ ಕೆಲಸ ನಮ್ಮಿಂದಲೇ ಆಗಬೇಕಿದೆ ಎಂದು ಅವರು ಕರೆ ನೀಡಿದರು.

ಮನೆಯಲ್ಲಿಯೇ ರೀತಿ ರಿವಾಜಿಗೆ ಸಿಲುಕುವ ಮಹಿಳೆ ಮೊದಲು ನಮ್ಮ ಮನಸ್ಸು ಮತ್ತು ಮನೆಯಲ್ಲಿ ಮಹಿಳೆಯರ ಮೇಲಿರುವ ತಾರತಮ್ಯ ಹೋಗಲಾಡಿಸದ ಹೊರತು ಯಾವುದೇ ಸಾಧನೆ ಸಾಧ್ಯವಿಲ್ಲ ಎಂದರು.

ಸಮಾಜ ಸೇವಕಿ ಕುಶಾಲನಗರದ ದೀಕ್ಷಾ, ವ್ಯವಸಾಯದಲ್ಲಿ ಸಿದ್ಧಲಿಂಗಪುರದ ಮೀನಾಕ್ಷಿ, ಆರೋಗ್ಯದಲ್ಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಬಿ.ಎಂ. ಅನಿತಾ, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಟಿ. ಚಂದ್ರಕಲಾ, ಕ್ರೀಡಾ ಕ್ಷೇತ್ರದಲ್ಲಿ ಕರ್ಕಳ್ಳಿ ಗ್ರಾಮದ ಪುಣ್ಯ ಅವರಿಗೆ ಪಂಚರತ್ನ ಪ್ರಶಸ್ತಿ ನೀಡಲಾಯಿತು.

ಜೇಸಿಐ ವಲಯ ಸಂಯೋಜಕಿ ರೂಪಾ ಗೋಪಾಲಕೃಷ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಹಾಗೂ ಜೇಸಿಐ ಅಧ್ಯಕ್ಷ ವಸಂತ್ ಅವರನ್ನು ಸನ್ಮಾನಿಸಲಾಯಿತು.

ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಸುದೀಪ್ ಅಧ್ಯಕ್ಷತೆ ವಹಿಸಿದ್ದರು. ವಲಯ 11ರ ಅಧ್ಯಕ್ಷೆ ಆಶಾ ಜೈನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮಹಿಳಾ ವಿಭಾಗದ ಎಚ್.ಎಸ್. ಯಶಸ್ವಿನಿ, ಪ್ರಮುಖರಾದ ರೂಪಾ ಗೋಪಾಲಕೃಷ್ಣ, ರುಬೀನಾ, ಜಗದಾಂಬ ಗುರುಪ್ರಸಾದ್ ಇದ್ದರು.