ಭಾಷಣ, ಆದೇಶಗಳಿಂದ ಸಮಾಜ ಸುಧಾರಣೆ ಅಸಾಧ್ಯ: ಪಿಜಿಆರ್ ಸಿಂಧ್ಯಾ

| Published : Mar 16 2024, 01:52 AM IST

ಸಾರಾಂಶ

ಚಿತ್ರದುರ್ಗ ಜಿಲ್ಲಾ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನೂತನ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಶುಕ್ರವಾರ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇವಲ ಭಾಷಣ, ಸರ್ಕಾರದ ಆದೇಶಗಳಿಂದ ಸಮಾಜ ಸುಧಾರಣೆಯಾಗುವುದಿಲ್ಲ. ಸುಧಾರಣೆ ಎನ್ನುವುದು ಅಂತರ್ಮುಖಿಯಾಗಿ ಹರಿದು ಅಭಿವ್ಯಕ್ತಿಗೊಳ್ಳಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಶುಕ್ರವಾರ ಚಿತ್ರದುರ್ಗದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟ್ ಮತ್ತು ಗೈಡ್ಸ್ ನಿಂದ ಸಮಯಪ್ರಜ್ಞೆ, ಶಿಸ್ತು, ಸಮಾನತೆ, ಸರ್ವಧರ್ಮವನ್ನು ಗೌರವಿಸುವ ಗುಣ ಬೆಳೆಯುತ್ತದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ದೊಡ್ಡ ಇತಿಹಾಸವಿದೆ. 1907ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಆರಂಭವಾಯಿತು. ಕೊಂಡಜ್ಜಿಬಸಪ್ಪ, ಪಿ.ಶಿವ ಶಂಕರ್, ಶಂಕರ್ ನಾರಾಯಣ್, ದೀನದಯಾಳ್‍ ನಾಯ್ಡು ಸೇರಿದಂತೆ ಏಳು ಮುಖಂಡರುಗಳು ಮುಖ್ಯ ಆಯುಕ್ತರಾಗಿ ಸಂಸ್ಥೆಗೆ ದುಡಿದಿದ್ದಾರೆ. ಚಿತ್ರದುರ್ಗದವರೇ ಆದ ಎಸ್. ನಿಜಲಿಂಗಪ್ಪ, ಹೋ.ಚಿ.ಬೋರಯ್ಯ, ಇಮಾಂಸಾಬ್ ಇವರುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು ಎಂದರು.

ರಾಜ್ಯದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಇನ್ನೂ ಬೆಳೆಯಬೇಕು. ಇದು ಮಕ್ಕಳಲ್ಲಿ ಶಿಸ್ತು ಕಲಿಸುತ್ತದೆ. ಭಾರತದ ಸೈನಿಕರಲ್ಲಿ ಶಿಸ್ತು ನೋಡಬಹುದು. ಸ್ಕೌಟ್ ಸಮಾಜದ ಕೈಗನ್ನಡಿ ಯಿದ್ದಂತೆ. ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕಾದರೆ ಶಿಸ್ತು ಬಹಳ ಮುಖ್ಯ. ಸ್ಕೌಟ್ಸ್‌ - ಗೈಡ್ಸ್ ಹೆಸರೇ ಸೇವೆ ಮತ್ತು ಶಿಸ್ತು, ಪ್ರತಿನಿತ್ಯ ಮಕ್ಕಳು, ವ್ಯಾಯಾಮ, ಪ್ರಾರ್ಥನೆ ಮಾಡಿ. ಸರ್ವಧರ್ಮ ಪ್ರಾರ್ಥನೆಯಲ್ಲಿರುವ ಒಳ್ಳೆ ಗುಣಗಳನ್ನು ತೆಗೆದುಕೊಂಡು ಸತ್ಯವನ್ನು ಪರಿಪಾಲಿಸಬೇಕು ಎಂದರು. ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕಾಲೋನಿಗಳಲ್ಲಿ ಸ್ಕೌಟ್ ಅಂಡ್ ಗೈಡ್ಸ್ ತರಬೇತಿ ನೀಡಬೇಕು ಎಂದು ಶಿಕ್ಷಕರುಗಳಿಗೆ ಕರೆ ನೀಡಿದರು.

ಚಿತ್ರದುರ್ಗ ಬಡತನದ ಜಿಲ್ಲೆ. ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳು, ಶಿಕ್ಷಕರುಗಳಿರುತ್ತಾರೆ. ಹಾಗಂತ ಖಾಸಗಿ ಶಾಲೆ ಗಳಲ್ಲಿ ಇರುವುದಿಲ್ಲ ಎಂದರ್ಥವಲ್ಲ. ಸಮವಸ್ತ್ರ ತೊಟ್ಟುಕೊಳ್ಳುವುದು ಒಂದು ಅವಕಾಶ. ಇದರ ಬೆಲೆ ತಿಳಿದುಕೊಂಡು ಸಂಸ್ಥೆಗೆ ಸಮಯ ಕೊಡಿ. ಜೂನ್, ಜುಲೈ, ಆಗಸ್ಟ್‌ನಲ್ಲಿ ಹೊಸ ಮಕ್ಕಳನ್ನು ಸೇರಿಸಿಕೊಂಡು ಯೂನಿಟ್ ನಡೆಸಿ ತರಬೇತಿ ಕೊಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದರು.

ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ 1963 ರಲ್ಲಿ ಚಿತ್ರದುರ್ಗದಲ್ಲಿ ಸಂಸ್ಥೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗೆ ಪ್ರಯೋಜನವಾಗಲಿ ಎನ್ನುವ ಕಾರಣಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೇರೆ ಎಲ್ಲಾ ಕಡೆ ಜಾಗ ಹುಡುಕಾಡಿದೆವು. ಸಿಗದ ಕಾರಣ ಹೃದಯ ಭಾಗದಲ್ಲಿರುವ ಇಲ್ಲಿ ಕಟ್ಟಡ ಕಟ್ಟಲು ಅನೇಕರು ಶ್ರಮಿಸಿದ್ದಾರೆ. ಸ್ಕೌಟ್ ಅಂಡ್ ಗೈಡ್ಸ್ ಬೆಳವಣಿಗೆಯಾಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.

ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ ,ಗೈಡ್ಸ್ ಆಯುಕ್ತೆ ಸವಿತಾ ಶಿವಕುಮಾರ್,ಡಾನ್‍ಬೋಸ್ಕೋ ಶಿಕ್ಷಣ ಸಂಸ್ಥೆಯ ಸಜ್ಜಿ ಫಾದರ್ ,ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಪರಮೇಶ್, ನಾರಾಯಣಸ್ವಾಮಿ, ಶೀಲ ಮಂಜುನಾಥ್, ಸ್ಕೌಟ್ ಆಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಡಾ.ರಹಮತ್‍ವುಲ್ಲಾ, ತರಬೇತುದಾರ ಚಂದ್ರಪ್ರಕಾಶ್ ವೇದಿಕೆಯಲ್ಲಿದ್ದರು.ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ ದೇವರಾಜ್‍ಪ್ರಸಾದ್, ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಜಾದು ಮೋಹನ್‍ಕುಮಾರ್, ಸ್ಕೌಟ್ ಜಿಲ್ಲಾ ಸಹಾಯಕ ಆಯುಕ್ತ ವಿ.ಎಲ್.ಪ್ರಶಾಂತ್, ಖಜಾಂಚಿ ಎ.ಅನ್ವರ್ ಭಾಷ, ಶಿಕ್ಷಕರುಗಳಾದ ಚಮನ್‍ಬೀ, ನೂರ್ ಫಾತಿಮ, ವಿಶ್ವನಾಥ್, ಕಮಲಮ್ಮ, ಲಕ್ಷ್ಮಿದೇವಿ, ಯಶೋದಮ್ಮ, ಸುನಂದಮ್ಮ, ಓಬಳೇಶ್, ರವಿ ಈ ಸಂದರ್ಭದಲ್ಲಿ ಹಾಜರಿದ್ದರು.