ಇಂದು, ನಾಳೆ ಚಿತ್ರಾಪುರದಲ್ಲಿ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ

| Published : Oct 26 2024, 01:00 AM IST / Updated: Oct 26 2024, 01:01 AM IST

ಸಾರಾಂಶ

ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಧರ್ಮ ಸಂದೇಶ ನೀಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ. ಜಿಲ್ಲಾ ಘಟಕದ ನೇತೃತ್ವದಲ್ಲಿ ಚಿತ್ರಾಪುರ ಮಠದ ಸಹಯೋಗದಲ್ಲಿ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಎಂಬ ಸದಾಶಯದೊಂದಿಗೆ ಗಾಯತ್ರೀ ಸಂಗಮ, ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞವು ಅ.26, 27ರಂದು ಕುಳಾಯಿಯ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಚಿತ್ರಾಪುರ ಮಠದಲ್ಲಿ ಜರುಗಲಿದೆ.

ಅ.26ರಂದು ಶನಿವಾರ ಬೆಳಗ್ಗೆ 8.30ರಿಂದ ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾಹೋಮ, ರುದ್ರಹೋಮ, ಕೃಷ್ಣಮಂತ್ರ ಹೋಮ, ಪವಮಾನ ಹೋಮ, ನಾಗ ದೇವರಿಗೆ ಅಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ ಮಹಾಸಭಾ ಯುವ ಘಟಕದ ನೇತೃತ್ವದಲ್ಲಿ ಆದಿತ್ಯ- ಯುವ ಸಂಗಮ ಹಳೆ ಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯಸಿಂಹ ಉಪಸ್ಥಿತರಿರುವರು. ಮಧ್ಯಾಹ್ನ 1 ಗಂಟೆಯಿಂದ ‘ಗಾಯತ್ರಿ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ 3.30ರಿಂದ 4 ಗಂಟೆ ತನಕ ಮಹಾಸಭಾ ಮಹಿಳಾ ಘಟಕದ ನೇತೃತ್ವದಲ್ಲಿ ವೇದ ಮಾತಾ ಗಾಯತ್ರೀ ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ಉಪನ್ಯಾಸ ನಡೆಯಲಿದೆ. ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್‌ ಉಪನ್ಯಾಸ ನೀಡುವರು. ಸಂಜೆ 5.30ರಿಂದ ಕಲಶ ಪ್ರತಿಷ್ಠೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಕೊಟ್ಟಾರದ ಭರತಾಂಜಲಿಯ ನೃತ್ಯ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ನೃತ್ಯಾಮೃತ ಹಾಗೂ ಕು. ಶರಣ್ಯಾ ಮತ್ತು ಕು. ಸುಮೇಧಾ ಕೆಮ್ಮಣ್ಣು ಸಹೋದರಿಯರಿಂದ ಗಾನಾಮೃತ ನಡೆಯಲಿದೆ.

ಅ.27ರಂದು ಬೆಳಗ್ಗೆ 6.30ಕ್ಕೆ ವೇದಬ್ರಹ್ಮ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಎಂಟು ಬ್ರಾಹ್ಮಣ ಸಮಾಜದ ಋತ್ವಿಜರ ಕೂಡುವಿಕೆಯಿಂದ ಏಕ ಬೃಹತ್ ಯಜ್ಞ ಕುಂಡದಲ್ಲಿ ಗಾಯತ್ರೀ ಯಜ್ಞ, ಬೆಳಗ್ಗೆ 11 ರಿಂದ 1 ಗಂಟೆ ವವರೆಗೆ ಧರ್ಮಸಭೆ ನಡೆಯಯಲಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಧರ್ಮ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.