ಸರ್ವರಿಗೂ ಸಂಗೊಳ್ಳಿ ರಾಯಣ್ಣ ಹೋರಾಟ ಸ್ಫೂರ್ತಿ: ಎಚ್.ಕೆ. ಪಾಟೀಲ್

| Published : Jan 28 2025, 12:46 AM IST

ಸಾರಾಂಶ

ರೋಣ ಪಟ್ಟಣದ ಹೊಸ ಸಂತೆ ಬಜಾರದಲ್ಲಿ ಗಜೇಂದ್ರಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಭಾನುವಾರ ಸಂಜೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೋಣ: ತಾಯ್ನಾಡಿನ ರಕ್ಷಣೆಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೇ ದಿಟ್ಟತನದಿಂದ ಹೋರಾಡಿದ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶ ನಿಷ್ಠೆ, ಹೋರಾಟ, ಧೈರ್ಯ, ನಾಯಕತ್ವ ಸರ್ವರಿಗೂ ಸ್ಫೂರ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಹೊಸ ಸಂತೆ ಬಜಾರದಲ್ಲಿ ಮಾತೋಶ್ರೀ ಬಸಮ್ಮ ಪಾಟೀಲ ವೇದಿಕೆಯಲ್ಲಿ ಗಜೇಂದ್ರಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಪ್ರೇಮ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನಾಡು, ದೇಶದ ಉದ್ದಗಲಕ್ಕೂ ಹಬ್ಬಿಸಿದ ರಾಯಣ್ಣ, ಕಿತ್ತೂರ ಸಂಸ್ಥಾನದ ರಕ್ಷಣೆ ಪಣತೊಟ್ಟು ಪ್ರಾಣಾರ್ಪಣೆಗೈದ ಮಹಾನ್ ವ್ಯಕ್ತಿಯಾಗಿದ್ದಾರೆ. ರಾಯಣ್ಣ ಒಂದು ಜಾತಿಗೆ ಮೀಸಲಾಗದೆ ಎಲ್ಲ ಜನಾಂಗಕ್ಕೂ ಆದರ್ಶನೀಯರಾಗಿದ್ದಾರೆ. ರಾಯಣ್ಣ ಶೌರ್ಯ, ಪರಾಕ್ರಮ, ಹೋರಾಟ ಪ್ರತಿ ಮನೆ ಮನೆಗೆ ತಲುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿನ ಕೆಲವು ರೈಲು ನಿಲ್ದಾಣಕ್ಕೆ, ಬಸ್ ನಿಲ್ದಾಣಕ್ಕೆ, ವಿಶ್ವ ವಿದ್ಯಾಲಯಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಂಗೊಳ್ಳಿ ರಾಯಣ್ಣನ ಹೋರಾಟ ಬದುಕು, ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು. ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮಾತನಾಡುವ ರಾಜಕಾರಣಿಗಳಿದ್ದಾರೆ. ಇಂತಹ ಮಾತುಗಳನ್ನಾಡುವವರಿಗೆ ಬುದ್ಧಿ ಕಲಿಸುವಲ್ಲಿ ಯುವ ಜನತೆ ಜಾಗ್ರತರಾಗಬೇಕು. ಎಂದರು.

ಸಾನ್ನಿಧ್ಯ ವಹಿಸಿದ್ದ ಧಾರವಾಡದ ಬಸವರಾಜ ದೇವರು ಮಾತನಾಡಿ, ದೇಶದ ಪರಂಪರೆ, ಮಹಾನ್ ನಾಯಕರ ಜೀವನ, ಸಾಧನೆ, ಹೋರಾಟ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಿನಿಮಾ, ಧಾರಾವಾಹಿಗಳ ಹೀರೋಗಳನ್ನು ಆದರ್ಶಗಳನ್ನಿಟ್ಟುಕೊಂಡು ಹೋಗಬಾರದು. ಇದರಿಂದ ತೊಂದರೆಯಾಗುವುದು. ಹಾಗಾಗಿ ಮಹನೀಯರ ವ್ಯಕ್ತಿತ್ವ, ಸಂದೇಶ, ಬದುಕು, ಸಾಧನೆಗಳನ್ನು ಅರಿತು ಅವರಂತಾಗಲು ಶ್ರಮಿಸಬೇಕು ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಅಧ್ಯಕ್ಷ ಎಚ್‌.ಎಸ್‌. ಸೊಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ‌ಕೃಷಿ, ಸಾಹಿತ್ಯ, ಜನಪದ, ನಾಟಕ, ರಾಜಕೀಯ, ಸಂಗೀತ, ಪತ್ರಿಕೋದ್ಯಮ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಸಾಧಕರಿಗೆ ರಾಯಣ್ಣ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಗಜೇಂದ್ರಗಡದ ಹಜರತ ಸೈಯದ ನಿಜಾಮುದ್ದೀನ್‌ ಶಾ ಅರ್ಷಪಿ ಸಾನ್ನಿಧ್ಯ ವಹಿಸಿದ್ದರು.

ಜನಪದ ಹಿರಿಯ ಕಲಾವಿದ ಗುರುರಾಜ ಹೊಸಕೋಟಿ, ಸರಿಗಮಪ ಖ್ಯಾತಿಯ ರುಬಿನಾ, ಅಶೋಕ ಬಸ್ತಿ (ಜ್ಯೂ. ರಾಜಕುಮಾರ), ಜ್ಯೂ .ಪುನೀತರಾಜಕುಮಾರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿ.ಆರ್. ಗುಡಿಸಾಗರ, ಐ.ಎಸ್. ಪಾಟೀಲ, ಬಸವರಾಜ ನವಲಗುಂದ, ಬಸವರಾಜ ಜಗ್ಗಲ, ಮಿಥುನ ಪಾಟೀಲ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಅಶೋಕ ಬಾಗಮರ, ವೀರಣ್ಣ ಶೆಟ್ಟರ, ಶರಣಪ್ಪ ಬೇಟಗೇರಿ, ಹನುಮಂತಪ್ಪ ಅಬ್ಬಿಗೇರಿ, ಮುದಕಪ್ಪ ಪ್ರಭಣ್ಣವರ, ದಶರಥ ಗಾಣಿಗೇರ, ವಿ.ಬಿ. ಸೋಮನಕಟ್ಟಿಮಠ, ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಬಾವಾಸಾಬ ಬೆಟಗೇರಿ, ಯೂಶೂಫ ಇಟಗಿ, ಶರಣಪ್ಪ ಕಂಬಳಿ, ತೋಟಪ್ಪ‌ ನವಲಗುಂದ, ಶಫೀಕ ಮೂಗನೂರ, ವಿಶ್ವನಾಥ ಜಿಡ್ಡಿಬಾಗಿಲ, ಮುತ್ತಣ್ಣ ಸಂಗಳದ, ಮರ್ತುಜಿ ಡಲಾಯತ, ಸುಭಾಸ ನೀಲಗಾರ, ಅರ್ಜುನ ರಾಠೋಡ, ರಾಜು ಸಾಂಗ್ಲಿಕರ ಉಪಸ್ಥಿತರಿದ್ದರು. ವರ್ಷಾ ಬಾರಕೇರ ಕಾರ್ಯಕ್ರಮ ನಿರೂಪಿಸಿದರು.