ಕಡೂರು ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಂಜೀವಿನಿ ಒಕ್ಕೂಟಗಳು ಸಹಕಾರಿಯಾಗಲಿವೆ ಎಂದು ಜಿ.ಪಂ ಯೋಜನಾ ನಿರ್ದೇಶಕಿ ಎಚ್.ಎಲ್. ಸುಜಾತ ತಿಳಿಸಿದರು.
ಜಿ.ಪಂ ಯೋಜನಾ ನಿರ್ದೇಶಕಿ ಎಚ್.ಎಲ್. ಸುಜಾತಾ । ಕಡೂರು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
ಕನ್ನಡಪ್ರಭ ವಾರ್ತೆ ಕಡೂರುಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಂಜೀವಿನಿ ಒಕ್ಕೂಟಗಳು ಸಹಕಾರಿಯಾಗಲಿವೆ ಎಂದು ಜಿ.ಪಂ ಯೋಜನಾ ನಿರ್ದೇಶಕಿ ಎಚ್.ಎಲ್. ಸುಜಾತ ತಿಳಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿ.ಪಂ ಹಾಗೂ ತಾಪಂ ನಿಂದ ಗುರುವಾರ ನಡೆದ ಕಡೂರು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಗ್ರಾಪಂ ಮಟ್ಟದಲ್ಲಿ ಸೇವಾ ಮನೋಭಾವನೆಯಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಮಹಿಳಾ ಸದಸ್ಯರ ಕಾರ್ಯವೈಖರಿ ಶ್ಲಾಘನೀಯ ಎಂದರು.ಆರ್ಥಿಕ ಬಲವರ್ಧನೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಲು ಒಕ್ಕೂಟಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.ಇದಕ್ಕೆ ಮಹಿಳಾ ಸದಸ್ಯರೇ ಹೆಚ್ಚು ಪಾಲುದಾರರು ಆದರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಂಜೀವಿನಿ ಒಕ್ಕೂಟ ಪ್ರಗತಿ ಹೊಂದಲು ಸಾಧ್ಯ ಎಂದರು.
ಕೇವಲ ಸಾಲ ಪಡೆವ ಉದ್ದೇಶಕ್ಕಾಗಿ ಕಾರ್ಯವ್ಯಾಪ್ತಿ ಸೀಮಿತಗೊಳಿಸದೆ ಪಂಚಾಯಿತಿ ವ್ಯವಸ್ಥೆಗೆ ಬಲ ತುಂಬಲು ತಮ್ಮ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು ಎಂದರು.ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ನಿರ್ವಹಣೆ ಜವಬ್ದಾರಿಯುತವಾಗಿ ನಿಭಾಯಿಸಬೇಕು. ಕಸದ ನಿರ್ವಹಣೆ ಕೀಳರಿಮೆ ಎಂದು ಭಾವಿಸ ಬಾರದು. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಕಸವು ಒಂದು ಉದ್ಯಮವಾಗಿ ಪರಿವರ್ತನೆಗೊಳ್ಳಲಾಗಿದೆ. ಜವಾಬ್ದಾರಿಯುತವಾಗಿ ನಿರ್ವಹಣೆ ಹೊಂದಿದರೆ ಸೇವಾ ಕಾಳಜಿ ಪರಿಣಾಮಕಾರಿ ಆಗಲಿದೆ ಎಂದರು.
ಈಗಾಗಲೇ ಒಕ್ಕೂಟದ ಸದಸ್ಯರಿಗೆ ಎಲ್ಲ ರೀತಿ ಬ್ಯಾಂಕ್ ವ್ಯವಸ್ಥೆಗಳು, ವಿಮೆ ಸೌಲಭ್ಯ, ಆರೋಗ್ಯ ರಕ್ಷಾ ಸೌಲಭ್ಯ ಕಲ್ಪಿಸಿಕೊಡುವುದು ಸರ್ಕಾರದ ಆಶಯ. ಇವುಗಳ ಸಮರ್ಪಕ ಸದ್ಬಳಕೆಗೆ ಮುಂದಾಗಿ ತಮ್ಮ ವ್ಯಾಪ್ತಿಯ ಸಂಘಗಳಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.ತಾ.ಪಂ ಇಒ ಸಿ.ಆರ್.ಪ್ರವೀಣ್ ಮಾತನಾಡಿ, ಒಕ್ಕೂಟದ ಯೋಜನೆಯಡಿ ಮಹಿಳೆಯರು ತಮ್ಮ ಜೀವನೋಪಾಯ, ಆರೋಗ್ಯ, ನೈರ್ಮಲ್ಯ, ಸಾಮಾಜಿಕ ಅಭಿವೃದ್ಧಿಯಡಿ ಮೂಲ ಸೌಕರ್ಯಗಳ ಬೇಡಿಕೆ ಸಲ್ಲಿಸಬಹುದು. ಇದರಿಂದ ಸ್ಥಳೀಯ ಮಟ್ಟದಲ್ಲಿ ನಾಯಕತ್ವದ ಗುಣ ಬೆಳೆಸಿಕೊಂಡು ಉತ್ತಮ ತಂಡವನ್ನಾಗಿ ರಚಿಸಿಕೊಳ್ಳಬಹುದು ಎಂದರು.
ಎನ್‌ಆರ್ ಎಲ್ ಎಂ ತಾಲೂಕು ಸಮೂಹ ಮೇಲ್ವಿಚಾರಕ ಎಸ್. ಪ್ರದೀಪ್ ಮಾತನಾಡಿ, ತಾಲೂಕಿನ 60 ಗ್ರಾ.ಪಂ. ಗಳ ಒಕ್ಕೂಟದದಲ್ಲಿ 1800 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸರಕಾರದಿಂದ ಸಮುದಾಯ ಬಂಡವಾಳ ನಿಧಿಯಡಿ ₹14.67ಕೋಟಿ ಅನುದಾನ ದೊರೆತಿದೆ. ಈಗಾಗಲೇ ₹100 ಕೋಟಿ ಹೆಚ್ಚು ವಹಿವಾಟು ನಡೆಸುವ ಮೂಲಕ ಒಕ್ಕೂಟಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.ಎನ್ ಆರ್ ಎಲ್ಎಂ ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ, ತಾಲ್ಲೂಕು ವ್ಯವಸ್ಥಾಪಕ ನಂದನ್, ಒಕ್ಕೂಟದ ಅಧ್ಯಕ್ಷೆ ಮನೋರಂಜನಿ, ಕಾರ್ಯದರ್ಶಿ ಶೋಭಾ ಶ್ರೀನಿವಾಸ್, ಖಜಾಂಚಿ ದೀಶಾ, ಸುವರ್ಣಮ್ಮ, ದೀಪಿಕಾ, ನಿರಂಜನ್, ಕೀರ್ತನಾ, ರೇಖಾ, ಲೋಕೇಶ್ ಹಾಗೂ ಒಕ್ಕೂಟದ ಸದಸ್ಯರು ಇದ್ದರು.
30ಕೆಕೆಡಿಯು2.ಕಡೂರಿನ ತಾ.ಪಂ. ಸಭಾಂಗಣದಲ್ಲಿ ಕಡೂರು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕಿ ಎಚ್.ಎಲ್.ಸುಜಾತಾ ಮಾತನಾಡಿದರು.