ಸಾರಾಂಶ
ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ನಾಗರಿಕರು ತಲೆ ತಗ್ಗಿಸುವಂತಹ ಹಲವು ಪ್ರಕರಣಗಳು ನಡೆಯುತ್ತಿವೆ. ದೇಶದ್ರೋಹಿ ಕೃತ್ಯಗಳು ಹೆಚ್ಚಾಗಿವೆ. ದೇಶಭಕ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ.
ಹಾವೇರಿ: ಕಾಂಗ್ರೆಸ್ ಸರ್ಕಾರ ಬರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ನಾಗರಿಕರು ತಲೆ ತಗ್ಗಿಸುವಂತಹ ಹಲವು ಪ್ರಕರಣಗಳು ನಡೆಯುತ್ತಿವೆ. ದೇಶದ್ರೋಹಿ ಕೃತ್ಯಗಳು ಹೆಚ್ಚಾಗಿವೆ. ದೇಶಭಕ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕೃಷಿ ಯೋಜನೆ ಮತ್ತು ಸೌಲಭ್ಯಗಳನ್ನು ನಿಲ್ಲಿಸುವ ಮೂಲಕ ರೈತ ವಿರೋಧಿ ಸರ್ಕಾರ ಎಂಬ ಅಪಖ್ಯಾತಿ ಗಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮನಮೋಹನ್ ಸಿಂಗ್ ಅವಧಿಯಲ್ಲಿ ರಾಜ್ಯಕ್ಕೆ ರು.₹ 81 ಸಾವಿರ ಕೋಟಿ ಬಂದಿದ್ದರೆ, ಮೋದಿ ಅವಧಿಯಲ್ಲಿ ರು.2 ಲಕ್ಷ ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಮೋದಿಜಿ ಬಂದ ನಂತರ ರಾಜ್ಯಕ್ಕೆ ಕೊಡುವ ಪಾಲನ್ನು ಶೇ 32ರಿಂದ ಶೇ 42ಕ್ಕೆ ಹೆಚ್ಚಿಸಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಸಿದ್ದರಾಮಯ್ಯನವರು ಪದೇ ಪದೇ ಸುಳ್ಳು ಹೇಳುವ ಮೂಲಕ ರಾಜ್ಯದ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಬರಗಾಲದ ಈ ಸಂದರ್ಭದಲ್ಲಿ ಜನರು ಕುಡಿಯುವ ನೀರಿಗೆ ಬವಣೆ ಪಡುವಂತಾಗಿದೆ. ಎಲ್ಲ ಕಡೆ ಖಾಸಗಿ ಟ್ಯಾಂಕರ್‌ಗಳ ಭರಾಟೆ ಜೋರಾಗಿದೆ. ರಾಜ್ಯ ಸರ್ಕಾರ ಜನರಿಗೆ ಕುಡಿಯುವ ನೀರು ಕೊಡುವಲ್ಲಿ ವಿಫಲವಾಗಿದೆ. ಇದು ಬೇಜವಾಬ್ದಾರಿ ಸರ್ಕಾರವಾಗಿದ್ದು, ಜನ ಕಲ್ಯಾಣದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಗೃಹಲಕ್ಷ್ಮಿ ಹಣ ಎರಡು ತಿಂಗಳಿಂದ ಗೃಹಿಣಿಯರ ಖಾತೆಗೆ ಬಂದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳು ಬಡ ಜನರನ್ನು ತಲುಪುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವೊಬ್ಬ ಸಚಿವರೂ ಮೃತ ರೈತರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ನೀಡಿಲ್ಲ. ಸಿದ್ದರಾಮಯ್ಯನವರ ಸುಳ್ಳುಗಳಿಗೆ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮತ್ತೊಮ್ಮೆ ಮೋದಿ ಪ್ರಧಾನಿ: ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಜನರು ಬೆಂಬಲಿಸಲಿದ್ದಾರೆ. ಈ ಬಾರಿ ಬಿಜೆಪಿ 370 ಸ್ಥಾನಗಳನ್ನು ಪಡೆದು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಮೋದಿ ಅವರು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದಾರೆ. ಬಡವರಿಗೆ 3 ಕೋಟಿ ಮನೆಗಳು, ಜಲಜೀವನ್ ಮಿಷನ್ ಯೋಜನೆ ಮೂಲಕ 13 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು, 11 ಕೋಟಿ ಮನೆಗಳಿಗೆ ಉಜ್ವಲ ಸೌಲಭ್ಯ. ಹೀಗೆ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಗಿರೀಶ ತುಪ್ಪದ, ನಿರಂಜನ ಹೇರೂರು, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ, ವರುಣ ಆನವಟ್ಟಿ ಇದ್ದರು.