ಸಾರಾಂಶ
ಹೊಸಪೇಟೆ: ಮಕರ ಸಂಕ್ರಾಂತಿ ನಿಮಿತ್ತ ಹಂಪಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಸೇರಿದಂತೆ ಭಕ್ತರು ಸೇರಿದಂತೆ ಅಂದಾಜು 40 ಸಾವಿರ ಜನರು ಸೋಮವಾರ ಆಗಮಿಸಿ ವಿರೂಪಾಕ್ಷೇಶ್ವರ ಹಾಗೂ ಪಂಪಾದೇವಿ ದರ್ಶನ ಪಡೆದರು.
ಸಂಕ್ರಾಂತಿ ಸಂಭ್ರಮದ ನಿಮಿತ್ತ ಭಾನುವಾರವೇ ಹಂಪಿಯ ಕಡೆ ಮುಖ ಮಾಡಿದ್ದ ಭಕ್ತರು ನಸುಕಿನಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಸರದಿ ಸಾಲಿನಲ್ಲಿ ವಿರೂಪಾಕೇಶ್ವರ ದೇವರ ದರ್ಶನ ಪಡೆದರು. ಹೂವು- ಹಣ್ಣು ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಹಬ್ಬದ ಹಿನ್ನೆಲೆ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು.ನದಿ ತೀರದಲ್ಲಿ ಭೋಜನ: ತುಂಗಭದ್ರಾ ನದಿ ತೀರದಲ್ಲಿ ಕುಟುಂಬ ಸಮೇತ ಭಕ್ತರು ಸಹ ಭೋಜನ ಸವಿದರು. ರೊಟ್ಟಿ, ಕಾಳು, ಚಟ್ನಿ ಸೇರಿದಂತೆ ಬಗೆ ಬಗೆಯ ರುಚಿಯನ್ನು ಆಹಾರದ ಬುತ್ತಿ ತಂದಿದ್ದರು. ಸಿಹಿ ಅಡುಗೆಯನ್ನು ಉಂಡ ಭಕ್ತರು, ಬಳಿಕ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರದ ಸ್ನಾನಘಟ್ಟ, ಕೋದಂಡರಾಮ ದೇವಾಲಯ ಹಾಗೂ ಪುರಂದರ ಮಂಟಪದ ಬಳಿ ಯಾತ್ರಾರ್ಥಿಗಳು ಸಹ ಭೋಜನ ಮಾಡುವುದು ಕಂಡುಬಂದಿತು. ಪೊಲೀಸ್ ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿ ಪ್ರವಾಸಿಗರು ನದಿ ನೀರಿನಲ್ಲಿ ಇಳಿಯದಂತೆ ಸೂಚನೆ ನೀಡಿದರು.ಸ್ಮಾರಕಗಳ ವೀಕ್ಷಣೆ: ವಿರೂಪಾಕ್ಷೇಶ್ವರ ಸ್ವಾಮಿ ದರ್ಶನದ ನಂತರ, ಸಾಸಿವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಶ್ರೀಕೃಷ್ಣ ದೇವಾಲಯ, ಬಡವಿಲಿಂಗ, ಉಗ್ರ ನರಸಿಂಹ, ಉದ್ದಾನ ವೀರಭದ್ರೇಶ್ವರ, ನೆಲಸ್ತರದ ಶಿವಾಲಯ, ಹಜಾರರಾಮ ದೇವಾಲಯ, ಕಮಲ ಮಹಲ್, ಗಜಶಾಲೆ, ರಾಣಿ ಸ್ನಾನಗೃಹ, ಮಾಲ್ಯವಂತ ರಘುನಾಥ ದೇವಾಲಯ ಹಾಗೂ ವಿಜಯವಿಠಲ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಹೆಚ್ಚಾಗಿ ಕಂಡುಬಂದರು. ಕಲ್ಲಿನತೇರು ಸ್ಮಾರಕಗಳ ಬಳಿ ಮೊಬೈಲ್ ಕ್ಯಾಮೆರಾಗಳ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ವ್ಯಾಪಾರ, ವಹಿವಾಟು ಜೋರು: ಹಂಪಿಯಲ್ಲಿ ಜಾತ್ರೆ ವಾತಾವರಣ ನಿರ್ಮಾಣಗೊಂಡಿತ್ತು. ವಿಜಯವಿಠಲ ದೇವಾಲಯಕ್ಕೆ ತೆರಳುವ ಬ್ಯಾಟರಿಚಾಲಿತ ವಾಹನಗಳ ಕೊರತೆ ಹಿನ್ನೆಲೆ ಕೆಲ ಪ್ರವಾಸಿಗರು, ಕಾಲ್ನಡಿಗೆಯಲ್ಲಿ ವಿಜಯ ವಿಠಲ ದೇಗುಲಕ್ಕೆ ತೆರಳಿದರು. ಸರಣಿ ರಜೆ ಹಿನ್ನೆಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಹಂಪಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಹೊಸಪೇಟೆ, ಕಮಲಾಪುರ ಸುತ್ತಮುತ್ತಲಿನ ಲಾಡ್ಜ್, ಹೋಟೆಲ್‌ಗಳು ಫುಲ್ ಆಗಿದ್ದವು. ಬಸ್, ಆಟೋ, ಕಾರು ಹಾಗೂ ಇತರೆ ವಾಹನಗಳಲ್ಲಿ ಪ್ರವಾಸಿಗರು ಆಗಮಿಸಿದ್ದರು.