ಮಳವಳ್ಳಿ- ಮದ್ದೂರು ಮುಖ್ಯ ರಸ್ತೆಯಲ್ಲಿ ಹತ್ತಾರು ಎತ್ತಿನಗಾಡಿಗಳ ಮೂಲಕ ಪೂಜಾ ಕುಣಿತ, ವೀರಗಾಸೆ ಸೇರಿದಂತೆ ಜನಪದ ಕಲಾ ಪ್ರಕಾರಗಳ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಬಂಡೂರು ಕುರಿ ಪ್ರದರ್ಶನ ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ಕಾಲೇಜಿನಲ್ಲಿ ಭಾರತೀ ವಿದ್ಯಾ ಸಂಸ್ಥೆಯಿಂದ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ವಿವಿಧ ತಂಡಗಳಿಂದ ಜನಪದ ಕಲಾ ಪ್ರದರ್ಶನ, ಹಳ್ಳಿ ಸೊಗಡಿನಲ್ಲಿ ವಿದ್ಯಾರ್ಥಿಗಳ ವೇಷ ಭೂಷಣ ಗಮನ ಸೆಳೆಯಿತು.

ಬಿಇಟಿ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ರಾಶಿ ಪೂಜೆ ಮಾಡುವ ಮೂಲಕ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿದರು. ಎತ್ತಿನಗಾಡಿಯಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳು ಅಧ್ಯಾಪಕರನ್ನು ಕೂರಿಸಿ ಮೆರವಣಿಗೆ ನಡೆಸಿದರು.

ಮಳವಳ್ಳಿ- ಮದ್ದೂರು ಮುಖ್ಯ ರಸ್ತೆಯಲ್ಲಿ ಹತ್ತಾರು ಎತ್ತಿನಗಾಡಿಗಳ ಮೂಲಕ ಪೂಜಾ ಕುಣಿತ, ವೀರಗಾಸೆ ಸೇರಿದಂತೆ ಜನಪದ ಕಲಾ ಪ್ರಕಾರಗಳ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಬಂಡೂರು ಕುರಿ ಪ್ರದರ್ಶನ ಗಮನ ಸೆಳೆದವು.

ಹಳ್ಳಿ ಸೊಗಡಿನ ವಿವಿಧ ವೇಷಭೂಷಣ ಧರಿಸಿ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಜಾನಪದ ಕಲೆ, ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಗ್ರಾಮೀಣ ಸೊಗಡನ್ನು ಹಚ್ಚ ಹಸಿರಾಗಿಡುವ ಪ್ರಯತ್ನದ ಫಲವಾಗಿ ಕಾಲೇಜು ಆವರಣ ಅಕ್ಷರಶಃ ಹಳ್ಳಿಯ ವಾತಾವರಣವಾಗಿ ಕಂಡು ಬಂತು.

ವಿದ್ಯಾರ್ಥಿಗಳು ಹಸುಗಳನ್ನು ತಂದು ಕಿಚ್ಚು ಹಾಯಿಸಿ ಸಂಭ್ರಮ ಪಟ್ಟರೆ ಭಾರತೀ ವಿದ್ಯಾ ಸಂಸ್ಥೆಯ ವತಿಯಿಂದ ವಿವಿಧ ಅಂಗ ಸಂಸ್ಥೆಗಳಿಗೆ ಮಡೆ ಸ್ಪರ್ಧೆ ನಡೆಯಿತು. ಬಗೆ ಬಗೆಯ ಪೊಂಗಲ್ ತಯಾರಿಸಿದ ವಿವಿಧ ಅಂಗ ಸಂಸ್ಥೆಗಳ ವನಿತೆಯರು ಬಹುಮಾನ ಗಳಿಸಿದರು.

ವಿದ್ಯಾರ್ಥಿಗಳಿಂದ ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ:

ಆಹಾರ ಮಳಿಗೆಯಲ್ಲಿ ವಿದ್ಯಾರ್ಥಿಗಳೇ ತಯಾರು ಮಾಡಿದ ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ ಸೇರಿದಂತೆ ಮನೆಯ ತೋಟದಲ್ಲಿ ಬೆಳೆದ ತರಕಾರಿ, ಸೌತೆಕಾಯಿ, ಹಸಿರುಕಾಳು ಹಾಗೂ ಮಜ್ಜಿಗೆ ಪಾನಕ, ಹೊಳಿಗೆ, ಕಜ್ಜಾಯ, ರಾಗಿ ರೊಟ್ಟಿ ವ್ಯಾಪಾರ ಬಲೂ ಜೋರಾಗಿ ನಡೆಯಿತು. ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಹಾಸ್ಯ, ಗಾದೆ, ಒಗಟು ಸೇರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆಕರ್ಷಕ ದೇಶಿ ಉಡುಗೆ ತೊಟ್ಟ ವಿದ್ಯಾರ್ಥಿಗಳಿಗೆ, ಕಜ್ಜಾಯದ ಬುತ್ತಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.