ಹಬ್ಬಗಳ ಸಡಗರ ತಿಳಿಸಲು ಸಂಕ್ರಾಂತಿ ಸಂಭ್ರಮ ಆಚರಣೆ: ಮಧು ಜಿ.ಮಾದೇಗೌಡ

| Published : Jan 15 2024, 01:45 AM IST

ಸಾರಾಂಶ

ಸುಗ್ಗಿ ಹಬ್ಬದ ಸಂಭ್ರಮ ಕಳೆಗುಂದುತ್ತಿದೆ. ಸುಗ್ಗಿಯ ಕಾಲದಲ್ಲಿ ಕಣಗಳನ್ನು ಮಾಡುವುದು, ಧಾನ್ಯಗಳನ್ನು ಒಕ್ಕಣೆ ಮಾಡುವುದು, ರಾಶಿ ಪೂಜೆ ಇತ್ಯಾದಿ ಸಾಮಾನ್ಯವಾಗಿತ್ತು. ತಾಂತ್ರಿಕತೆ, ಆಧುನಿಕತೆಯಿಂದ ಅವುಗಳೆಲ್ಲ ಮಾಯವಾಗಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಜನರಲ್ಲಿ ಸೌಹಾರ್ದತೆ ಮೂಡಿಸುತ್ತವೆ

ಕನ್ನಡಪ್ರಭ ವಾರ್ತೆ ಭಾರತೀನಗರ

ವಿದ್ಯಾರ್ಥಿಗಳಿಗೂ ಹಳ್ಳಿ ಸೊಗಡಿನ ಹಬ್ಬಗಳ ಸಡಗರ ತಿಳಿಸಲು ಸಂಕ್ರಾಂತಿ ಸಂಭ್ರಮ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ಸಂಕ್ರಾಂತಿ ಸಂಭ್ರಮದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಕಜ್ಜಾಯ, ರವೆ ಉಂಡೆ ಎಂದರೇನು ಎಂಬುದೇ ಗೊತ್ತಿಲ್ಲ. ಹಾಗಾಗಿ ಕೆಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಜ್ಜಾಯ, ರವೆ ಉಂಡೆ ಸೇರಿದಂತೆ ಹಲವು ಹಳ್ಳಿ ಸೊಗಡಿನ ಖಾದ್ಯಗಳಿರುವ ಬುಟ್ಟಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಟ್ರಸ್ಟ್ ಸಿಇಒ ಆಶಯ್ ಮಧು ಮಾತನಾಡಿ, ಸಂಕ್ರಾಂತಿ ಹಬ್ಬ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ. ಪೂರ್ವಿಕರು ಆಚರಣೆ ಮಾಡಲಾಗುತ್ತಿದ್ದ ಹಬ್ಬವನ್ನು ಇಂದಿಗೂ ಸಹ ಮಾಡಲಾಗುತ್ತಿದೆ. ಇಂದಿನ ವಿದ್ಯಾರ್ಥಿಗಳು ಹಬ್ಬದ ಬಾಂಧವ್ಯವನ್ನು ಕಲಿಯಬೇಕೆಂಬ ಉದ್ದೇಶದಿಂದ ನಮ್ಮ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ ಆಚರಣೆಯನ್ನು ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಸುಗ್ಗಿ ಹಬ್ಬದ ಸಂಭ್ರಮ ಕಳೆಗುಂದುತ್ತಿದೆ. ಸುಗ್ಗಿಯ ಕಾಲದಲ್ಲಿ ಕಣಗಳನ್ನು ಮಾಡುವುದು, ಧಾನ್ಯಗಳನ್ನು ಒಕ್ಕಣೆ ಮಾಡುವುದು, ರಾಶಿ ಪೂಜೆ ಇತ್ಯಾದಿ ಸಾಮಾನ್ಯವಾಗಿತ್ತು. ತಾಂತ್ರಿಕತೆ, ಆಧುನಿಕತೆಯಿಂದ ಅವುಗಳೆಲ್ಲ ಮಾಯವಾಗಿದೆ ಎಂದು ವಿಷಾದಿಸಿದರು.

ಸುಬ್ರಹ್ಮಣ್ಯ ಮೆಡಿಕಲ್ಸ್ ವತಿಯಿಂದ ನೀಡಲಾದ ಕ್ಯಾಲ್ಸಿಯಂ ಪೌಡರ್‌ನ್ನು ರಾಸುಗಳ ಮಾಲೀಕರಿಗೆ ವಿತರಿಸಿದರು. ಮಳಿಗೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ತಿನಿಸು ಖರೀದಿಸಿ ಹುರಿದುಂಬಿಸಿದರು.

ವೇದಿಕೆಯಲ್ಲಿ ಬಿಇಟಿ ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಎಸ್.ಜಯರಾಮು, ಎಸ್.ಬಸವೇಗೌಡ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಎಸ್.ನಾಗರಾಜು, ಗ್ರಾಪಂ ಅಧ್ಯಕ್ಷೆ ಕೌಶಲ್ಯ, ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಸಂಚಾಲಕರಾದ ಪ್ರೊ.ಎಸ್ ರೇವಣ್ಣ, ಡಾ.ಎಂ.ಎಸ್.ಮಹದೇವಸ್ವಾಮಿ, ಬಿ.ಕೆ.ಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ವಹಿಸಿದ್ದರು.

ಹಬ್ಬಗಳು ಸಂಸ್ಕೃತಿಯ ಪ್ರತೀಕ, ಜನರಲ್ಲಿ ಸೌಹಾರ್ದತೆ ಮೂಡಿಸುತ್ತವೆ:ಎ.ಸಿ.ಮಾನಸ

ಭಾರತೀನಗರ:

ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಜನರಲ್ಲಿ ಸೌಹಾರ್ದತೆ ಮೂಡಿಸುತ್ತವೆ ಎಂದು ಭಾರತೀಕಾಲೇಜಿನ ಪನ್ಯಾಸಕಿ ಎ.ಸಿ.ಮಾನಸ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಹಾಗೂ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದರು.

ಹಬ್ಬಗಳ ಆಚರಣೆ ನಮ್ಮ ಪೂರ್ವಿಕರು ಮೊದಲಿನಿಂದಲೂ ಆಚರಿಸುತ್ತಾ ಬಂದಿದ್ದಾರೆ. ಸ್ನೇಹ ವಿಶ್ವಾಸದಿಂದ, ಸೌಹಾರ್ದತೆಯಿಂದ ಕೂಡಿ ಬಾಳಲು ಮಾನವೀಯ ಸಂಬಂಧಗಳನ್ನು ಬೆಸೆಯಲು ಹಾಗೂ ಸಾಂಘೀಕವಾಗಿ ನೆಮ್ಮದಿ ಜೀವನ ನಡೆಸಲು ಬದುಕಿನ ಬೇಸರ ಕಳೆದು ಮನಸ್ಸಿಗೆ ಹೊಸ ಚೈತನ್ಯ ತುಂಬಿಕೊಳ್ಳಲು ಹಬ್ಬ ಆಚರಣೆ ಅವಶ್ಯಕವಾಗಿದೆ ಎಂದರು.

ಹನುಮಂತನಗರದ ಭಾರತೀ ವಸತಿ ಕಾಲೇಜಿನ ಉಪನ್ಯಾಸಕ ಶಿವಲಿಂಗೇಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶವನ್ನು ನಾವು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಚಂಚಲತೆಯನ್ನು ಬದಿಗಿಟ್ಟು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಂಡರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳು ಎತ್ತುಗಳನ್ನು ಕಾಲೇಜು ಆವರಣದಲ್ಲಿ ಕಿಚ್ಚು ಹಾಯಿಸಿದರು. ಇದಕ್ಕೂ ಮೊದಲು ಶ್ರೀಕಾಲಭೈರವೇಶ್ವರ ದೇವರ ಬಸವದೊಂದಿಗೆ ಪೂಜಾ ಕುಣಿತ, ವೀರಗಾಸೆ, ಪೂರ್ಣಕುಂಭ ಕಳಸ, ತಮಟೆ, ನಗಾರಿ ಹಾಗೂ ಎತ್ತುಗಳನ್ನು ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಆಯೋಜಕ ನಿರಜಾಕ್ಷ ಅವರನ್ನು ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು.

ವೇದಿಕೆಯಲ್ಲಿ ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮಾದೇಶ್, ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಉಪನ್ಯಾಸಕರಾದ ಗೋಪಾಲ್, ದಿಲೀಪ್, ಮಾದವ್, ಪಾಟೀಲ್, ಸಿಂಧೂರಿ, ಮಧುಲತಾ ಸೇರಿದಂತೆ ಹಲವರಿದ್ದರು.