ಸಂಕ್ರಾಂತಿ ಹಬ್ಬ ಯುವಜನರಿಗೆ ಸುಗ್ಗಿ ಸಂಭ್ರಮದ ಇತಿಹಾಸ ತಿಳಿಸಲು ಸಹಕಾರಿ: ಬಿ.ಎಸ್ .ಬೋರೇಗೌಡ

| Published : Jan 15 2024, 01:45 AM IST

ಸಂಕ್ರಾಂತಿ ಹಬ್ಬ ಯುವಜನರಿಗೆ ಸುಗ್ಗಿ ಸಂಭ್ರಮದ ಇತಿಹಾಸ ತಿಳಿಸಲು ಸಹಕಾರಿ: ಬಿ.ಎಸ್ .ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಕರ ಸಂಕ್ರಾಂತಿ ದಿನ ಗಂಗಾಮಾತೆ ಧರೆಗೆ ಇಳಿದ ಪವಿತ್ರ ದಿನ. ರೈತರು ದವಸ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳುವ ಕಾಲ. ದೇವ ಮಾನವರು ಧರೆಗೆ ಇಳಿದು ಬಂದಿದ್ದರಿಂದಲೇ ದೇವ ಪುರುಷರಾದ ಜೋಗಯ್ಯ, ಗುಡ್ಡರು, ನೀಲಗಾರರು ಹಬ್ಬದ ದಿನದಂದು ಮನೆ ಮುಂದಕ್ಕೆ ಬಿಕ್ಷಕ್ಕೆ ಬರುತ್ತಾರೆ. ಎಳ್ಳು ಬೆಲ್ಲ ಒಳ್ಳೇಯ ಅಲೋಚನೆಯ ಸಂಕೇತವಾಗಿದೆ

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಮಕರ ಸಂಕ್ರಾಂತಿ ಹಬ್ಬವು ಯುವಜನರಿಗೆ ಸುಗ್ಗಿಯ ಸಂಭ್ರಮದ ಇತಿಹಾಸ ತಿಳಿಸಲು ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ ಹೇಳಿದರು.

ತಾಲೂಕಿನ ತಳಗವಾದಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರಿಂದ ನಡೆದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗರೀಕತೆ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ಆಚಾರ-ವಿಚಾರ ಪರಂಪರೆ ಮರೆಯುತ್ತಿರುವ ಪ್ರಸ್ತುತ ಶಾಲೆಗಳಲ್ಲಿ ಸುಗ್ಗಿ ಸಂಭ್ರಮ ಆಚರಣೆ ಅರ್ಥಪೂರ್ಣವಾಗಿದೆ ಎಂದರು.

ವ್ಯವಸಾಯದ ಭೂಮಿ ವಾಣಿಜ್ಯಕರಣವಾಗಿ ಮಾರ್ಪಾಡುತ್ತಿರುವ ಜೊತೆಯಲ್ಲಿಯೇ ಸುಗ್ಗಿಯ ಸಂಭ್ರಮವು ಕಡಿಮೆಯಾಗುತ್ತಿವೆ. ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಹಬ್ಬ ಶಾಲಾ ಕಾಲೇಜುಗಳಲ್ಲಿ ನಡೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕರ ಸಂಕ್ರಾಂತಿ ದಿನ ಗಂಗಾಮಾತೆ ಧರೆಗೆ ಇಳಿದ ಪವಿತ್ರ ದಿನ. ರೈತರು ದವಸ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳುವ ಕಾಲ. ದೇವ ಮಾನವರು ಧರೆಗೆ ಇಳಿದು ಬಂದಿದ್ದರಿಂದಲೇ ದೇವ ಪುರುಷರಾದ ಜೋಗಯ್ಯ, ಗುಡ್ಡರು, ನೀಲಗಾರರು ಹಬ್ಬದ ದಿನದಂದು ಮನೆ ಮುಂದಕ್ಕೆ ಬಿಕ್ಷಕ್ಕೆ ಬರುತ್ತಾರೆ. ಎಳ್ಳು ಬೆಲ್ಲ ಒಳ್ಳೇಯ ಅಲೋಚನೆಯ ಸಂಕೇತವಾಗಿದೆ ಎಂದರು.

ತಳಗವಾದಿ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಸಂಕ್ರಾಂತಿ ಹಬ್ಬದ ಇತಿಹಾಸವನ್ನು ಪ್ರತಿಬಿಂಬಿಸುವಂತೆ ಆಚರಣೆ ಮಾಡುತ್ತಿರುವುದು ಪ್ರಶಂಸನೀಯ. ಜೊತೆಗೆ ಹಿಂದೆ ಬಳಸುತ್ತಿದ್ದ ಕೃಷಿ ಉಪಕರಣವನ್ನು ಇಂದಿನ ತಲೆಮಾರಿನ ಯುವ ಜನತೆಗೆ ತಿಳಿಸುವ ಪ್ರಯತ್ನ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ತಳಗವಾದಿ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನದಿಂದ ಜಾನಪದ ಕಲಾ ಮೇಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಎತ್ತಿನ ಗಾಡಿ ಸಿಂಗರಿಸಿ ಎತ್ತಿನ ಗಾಡಿಯಲ್ಲಿ ಹಳ್ಳಿಯ ಸೋಗಡಿನಲ್ಲಿ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದರು. ವಿದ್ಯಾರ್ಥಿಗಳು ಜಾನಪದ ಕಲಾಮೇಳದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಪೂಜಾ ಕುಣಿತ, ಪಟ್ಟದ ಕುಣಿತ, ಚಿಲಿಪಿಲಿ ಗೊಂಬೆ ಪ್ರದರ್ಶೀಸಿ ಗಮನ ಸೆಳೆದರು.

ಶಾಲಾ ಆವರಣದಲ್ಲಿ ಸುಗ್ಗಿ ಪೂಜೆ ಭತ್ತ-ರಾಗಿ ರಾಶಿಯನ್ನು ಹಾಕಿ ಹೂವಿನಿಂದ ವಿಶೇಷವಾಗಿ ಆಲಂಕರಿಸಲಾಗಿತ್ತು. ಹಳ್ಳಿ ಸೊಗಡಿನಂತೆ ರಾಶಿ ಬಳಿ ಕರಿಯಣ್ಣ, ಕೆಂಚಣ್ಣ ಪೋಟೊ ಇಟ್ಟು ದಾಸಯ್ಯ, ಜೋಗಯ್ಯರಿಂದ ಅರಿಗೆ ಸಂಪ್ರದಾಯ ಬದ್ದವಾಗಿ ಪೂಜೆ ಮಾಡಲಾಯಿತು. ವಿದ್ಯಾರ್ಥಿಗಳು ಅಡಿಗೆ ಮಾಡುವುದು, ಬಳೆ ಮಾರಾಟ, ಭತ್ತ ಹೊನೆಯುವುದು ಸೇರಿದಂತೆ ಇತರ ವೇಷಭೂಷಣ ಮೆಚ್ಚುಗೆಗೆ ಪಾತ್ರವಾಯಿತು.

ಕೃಷಿಗೆ ಬಳಸುವ ನೇಗಿಲು, ಮಣ್ಣಿನ ಒಲೆ, ಸೇರು, ಒಣಕ್ಕೆಅಕ್ಕಿ ಹೊಂದ್ರಿ, ತೆಕ್ಕೆ, ತಕ್ಕಡಿ, ಹಳೆ ಕಾಲದ ಮಗು ತೂಗುವ ತೊಟ್ಟಿಲು, ಹಳೆ ರೇಡಿಯೋ, ಫೋನ್, ಕ್ಯಾಮರಾ, ಎತ್ತಿಗಳಿಗೆ ಕಟ್ಟುವ ವಸ್ತುಗಳ, ಸೇರು, ಓನಕೆ, ಸೇರಿದಂತೆ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾಯಂದಿರಿಗೆ ಪಾದಪೂಜೆ ಮಾಡಿ ಅರ್ಶಿವಾದ ಪಡೆದರು. ಶಾಲೆಯ ವತಿಯಿಂದ ನಿವೃತ್ತ ಪ್ರಾಧ್ಯಪಕ ಪ್ರೋ.ಬೋರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಸಾಲುಮರದ ನಾಗರಾಜು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಚೌಡಯ್ಯ, ಪಟೇಲ್‌ ರಾಮಣ್ಣ, ಕಾಳಯ್ಯ, ದಿಲೀಪ್, ಸಿದ್ದರಾಜು, ಚನ್ನಯ್ಯ, ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.