ಭಾರತೀಯ ಪರಂಪರೆಯಲ್ಲಿ ಸಂಕ್ರಾತಿ ವೈಶಿಷ್ಟ್ಯಪೂರ್ಣ ಹಬ್ಬ

| Published : Jan 16 2024, 01:48 AM IST

ಸಾರಾಂಶ

ಸಂಕ್ರಾಂತಿ ಹಬ್ಬ ತನ್ನದೆ ಆದ ವಿಶಿಷ್ಟ ರೀತಿಯ ಆಚಾರ ವಿಚಾರಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಭಾರತೀಯನು ಈ ದಿನದಂದು ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರುಶನ ಮಾಡುವುದರೊಂದಿಗೆ ಪುಣ್ಯ ನದಿಗಳಲ್ಲಿ ಎಳ್ಳು, ಅರಿಶಿಣ ಲೇಪನ ಮಾಡಿಕೊಂಡು ಮಾಡಿದ ಕರ್ಮ ತೊಳೆದುಕೊಳ್ಳುವ ವಿಶಿಷ್ಟ ಆಚರಣೆ ಈ ಹಬ್ಬದಲ್ಲಿದೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಆಧ್ಯಾತ್ಮ ವೈಜ್ಞಾನಿಕತೆಯನ್ನು ತುಂಬಿಕೊಂಡು ಬರುವ ಭಾರತೀಯ ಸಂಸ್ಕೃತಿಯಲ್ಲಿ ಒಂದು ಪರಂಪರೆಯಾದರೆ ಮಳೆಗಾಲ, ಚಳಿಗಾಲ ಕಳೆದು ಬೇಸಿಗೆಯ ಪ್ರಾರಂಭ ನೀಡುವ ವೈಶಿಷ್ಟ್ಯಪೂರ್ಣ ಹಬ್ಬವೇ ಮಕರ ಸಂಕ್ರಾಂತಿ ಹಬ್ಬವಾಗಿದೆ ಎಂದು ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು.

ನಗರದ ವೀರೇಶ್ವರ ದಾಸಬಾಳದೀಶ್ವರ ಮಠದಲ್ಲಿ ಸೋಮವಾರ ಸಂಕ್ರಾಂತಿ ನಿಮಿತ್ತ ದೇವರಿಗೆ ಪೂಜೆ ಸಲ್ಲಿಸಿ, ನಂತರ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸಂಕ್ರಾಂತಿ ಹಬ್ಬ ತನ್ನದೆ ಆದ ವಿಶಿಷ್ಟ ರೀತಿಯ ಆಚಾರ ವಿಚಾರಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ಭಾರತೀಯನು ಈ ದಿನದಂದು ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರುಶನ ಮಾಡುವುದರೊಂದಿಗೆ ಪುಣ್ಯ ನದಿಗಳಲ್ಲಿ ಎಳ್ಳು, ಅರಿಶಿಣ ಲೇಪನ ಮಾಡಿಕೊಂಡು ಮಾಡಿದ ಕರ್ಮ ತೊಳೆದುಕೊಳ್ಳುವ ವಿಶಿಷ್ಟ ಆಚರಣೆ ಈ ಹಬ್ಬದಲ್ಲಿದೆ ಎಂದರು.

ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದ್ದು, ಅಂತವರಿಗೆ ವೈಭವೀಕರಣ ಭಾರತೀಯ ಸಂಸ್ಕೃತಿಯ ಮಾರ್ಗದರ್ಶನವಾಗಬೇಕಾಗಿದೆ ಈ ನಿಟ್ಟಿನಲ್ಲಿ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ನಮ್ಮ ಪರಂಪರೆಯ ಎಲ್ಲ ಹಬ್ಬಗಳ ಬಗ್ಗೆ ಧಾರ್ಮಿಕ ಮನೋಭಾವನೆಯನ್ನು ತಿಳಿಸುವುದರೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಡಿಸಿ, ಆಧ್ಯಾತ್ಮದತ್ತ ಕೊಂಡೊಯ್ಯಬೇಕು ಎಂದು ಭಕ್ತರಲ್ಲಿ ಮನವರಿಕೆ ಮಾಡಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಮಠದ ವಕ್ತಾರ ಸೋಮನಗೌಡ ಬೆಳಗೇರಾ ಸೇರಿದಂತೆ ಅಸಂಖ್ಯಾತ ಭಕ್ತರು ಇದ್ದರು. ಎಲ್ಲ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.