ಸಂಸ್ಕೃತ ದೈನಂದಿನ ವ್ಯಾವಹಾರಿಕ ಭಾಷೆಯಾಗಲಿ

| Published : Jan 05 2024, 01:45 AM IST

ಸಂಸ್ಕೃತ ದೈನಂದಿನ ವ್ಯಾವಹಾರಿಕ ಭಾಷೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತ ಸೇರಿದಂತೆ ಯಾವ ಭಾಷೆಗೂ ಮಡಿವಂತಿಕೆ ಇಲ್ಲ, ಸಂಸ್ಕೃತ ಭಾಷೆಗೆ ಮಡಿವಂತಿಕೆ ಇದೆ ಎನ್ನುವುದು ಸರಿಯಲ್ಲ, ಭಾರತೀಯ ಭಾಷೆಯಾಗಿರುವ ಸಂಸ್ಕೃತವನ್ನು ಗ್ರಾಂಥಿಕ ಭಾಷೆಯಾಗಿ ಸೀಮಿತಗೊಳಿಸದೆ ದೈನಂದಿನ ಆಡುಭಾಷೆಯಾಗಲಿ

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಸೇರಿದಂತೆ ಅನೇಕ ಭಾಷೆ, ಪಶುಗಳ ಭಾಷೆಯಲ್ಲಿಯೂ ಸಂಸ್ಕೃತದ ದೊಡ್ಡ ಛಾಯೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಸಂಸ್ಕೃತ ಮಂಚ, ಶ್ರೀ ವ್ಯಾಸ ಮಧ್ವ ಸಂಸ್ಕೃತ ವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಸಂಸ್ಕೃತೋತ್ಸವ ಸಾನ್ನಿಧ್ಯ ವಹಿಸಿ ಸಂಸ್ಕೃತದಲ್ಲಿಯೇ ಮಾತನಾಡಿದ ಅವರು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಂಸ್ಕೃತದ ಛಾಯೆ ಇದೆ. ಅನೇಕ ಶಬ್ಧಗಳು ಸಂಸ್ಕೃತ ಮೂಲದಿಂದಲೇ ಬಂದಿವೆ ಎಂದು ಹೇಳಿದರು.

ಹಸು ಕರೆಯುವ ಅಂಬಾ.. ಎಂಬ ಶಬ್ಧವೂ ಸಂಸ್ಕೃತದ್ದೇ. ನಮ್ಮ ಮಾತೃ ಭಾಷೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿಯೂ ಸಂಸ್ಕೃತದ ಪ್ರಭಾವ ಹಾಗೂ ಛಾಯೆಯನ್ನು ನಾವು ಕಾಣುತ್ತೇವೆ. ಸಂಸ್ಕೃತ ಭಾಷೆಯನ್ನು ದೈನಂದಿನ ಜೀವನದಲ್ಲಿ ಮಾತನಾಡುವ ಭಾಷೆಯಾಗಿಸಿಕೊಳ್ಳಬೇಕು. ಸಂಸ್ಕೃತ ಭಾಷೆಗೆ ಪ್ರೋತ್ಸಾಹ ದೊರಕಬೇಕು ಎಂದು ಶ್ರೀಗಳು ಹೇಳಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಸಂಸ್ಕೃತ ಕಲಿತರೆ ಋಷಿಮುನಿಗಳು, ಸಂಸ್ಕೃತಿಯ ಭಾಗವಾಗಿರುವ ಭಾರತೀಯ ಸಂಸ್ಕೃತಿಯನ್ನು ಗೌರವಿಸಿದಂತೆ. ಸಂಸ್ಕೃತ ದೇವ ಭಾಷೆ, ಋಷಿ ಭಾಷೆ, ಸಂಸ್ಕೃತ ಭಾಷೆ ಉಳಿದರೆ ನಮ್ಮ ಭವ್ಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ನಮ್ಮ ಸಂಸ್ಕೃತಿ ನಾಶ ಮಾಡಲು ಪರಕೀಯರು ಪ್ರಯತ್ನಿಸಿದರು. ನಮ್ಮ ದೇವಾಲಯಗಳನ್ನು ಒಡೆದರು, ಆದರೆ ಭಾರತೀಯರ ರಕ್ತಗತವಾಗಿರುವ ಸಂಸ್ಕೃತಿ, ಧರ್ಮ ಒಡೆಯಲು ಸಾಧ್ಯವಾಗಲಿಲ್ಲ. ಇದು ನಮ್ಮ ಸಂಸ್ಕೃತಿಯ ದಿವ್ಯ ಶಕ್ತಿ. ತ್ಯಾಗ, ಯೋಗದಿಂದ ಕೂಡಿದ ದೇಶವಿದು. ಎದೆಯಲ್ಲಿ ರಾಮನ ನೆನಹು, ಅನನ್ಯ ತ್ಯಾಗ, ಭಗವದ್ಗೀತೆ ಪಾಲನೆ ಈ ಸೂತ್ರಗಳನ್ನು ಅನುಸರಿಸಿ ಮಹಾತ್ಮ ಗಾಂಧೀಜಿ ಅವಿರತ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ‍್ಯ ದೊರಕುವಂತೆ ಮಾಡಿದರು ಎಂದರು.

ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಅಶೀವರ್ಚನ ನೀಡಿ, ಸಂಸ್ಕೃತ ಭಾಷೆಯ ಮಹತ್ವವನ್ನು ನಾವು ಅರಿತುಕೊಳ್ಳಬೇಕು, ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ, ಜೀವನ ತತ್ವ ಸಾರುವ ಸಂಸ್ಕೃತ ಅತ್ಯಂತ ಸರಳ ಭಾಷೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಸಂಸ್ಕೃತ ಮೊದಲ ಸಾಹಿತ್ಯಿಕ ಭಾಷೆ, ಭಾಷೆಯಲ್ಲಿ ಮೇಲು ಕೀಳಿಲ್ಲ, ಆಯಾ ಭಾಷೆಗೆ ತನ್ನದೆ ಆದ ಮಹತ್ವ, ಗೌರವವಿದೆ. ಸಂಸ್ಕೃತ ಸೇರಿದಂತೆ ಯಾವ ಭಾಷೆಗೂ ಮಡಿವಂತಿಕೆ ಇಲ್ಲ, ಸಂಸ್ಕೃತ ಭಾಷೆಗೆ ಮಡಿವಂತಿಕೆ ಇದೆ ಎನ್ನುವುದು ಸರಿಯಲ್ಲ, ಭಾರತೀಯ ಭಾಷೆಯಾಗಿರುವ ಸಂಸ್ಕೃತವನ್ನು ಗ್ರಾಂಥಿಕ ಭಾಷೆಯಾಗಿ ಸೀಮಿತಗೊಳಿಸದೆ ದೈನಂದಿನ ಆಡುಭಾಷೆಯಾಗಲಿ ಎಂದರು.

ಪ.ವೇದನಿಧಿ ಆಚಾರ್ಯ, ಡಿಡಿಪಿಯು ಸಿ.ಕೆ. ಹೊಸಮನಿ, ಡಿಡಿಪಿಐ ಎನ್.ಎಚ್. ನಾಗೂರ, ಎ.ಎಸ್. ಪಾಟೀಲ ಗಣಿಹಾರ, ಕೋಟ್ನಾಳ, ಗ್ರಾಮ ಪುರೋಹಿತ, ಡಾ.ಗಿರೀಶ ಅಕ್ಮಂಚಿ ಪಾಲ್ಗೊಂಡಿದ್ದರು.