ಸಾರಾಂಶ
ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಶಾಲೆಯ ಮಹರ್ಷಿ ಪಾಣಿನಿ ಸಂಸ್ಕೃತ ಸಂಘದ ಸಹಯೋಗದಲ್ಲಿ ಸಂಸ್ಕೃತೋತ್ಸವ ನಡೆಯಿತು.
ಕುಮಟಾ: ಚೆನ್ನಾಗಿ ಸಂಸ್ಕರಿಸಲ್ಪಟ್ಟು, ಸಂಸ್ಕಾರ ಕಲಿಸುವ ಭಾಷೆಯೇ ಸಂಸ್ಕೃತ. ಸಂಸ್ಕೃತ ಸಾರ್ವಕಾಲಿಕ ಹಿರಿಮೆ- ಗರಿಮೆಯನ್ನು ಸ್ಥಾಪಿಸಿದ ಭಾಷೆಯಾಗಿದ್ದು, ಆನಂದಮಯವಾಗಿದೆ ಎಂದು ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮತ್ತು ಅಂಕಣಕಾರ ಪ್ರೊ. ಗಣೇಶ ಭಟ್ಟ ತಿಳಿಸಿದರು.
ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಶಾಲೆಯ ಮಹರ್ಷಿ ಪಾಣಿನಿ ಸಂಸ್ಕೃತ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ, ಟ್ರಸ್ಟಿನ ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ ಸಂಸ್ಕೃತದಲ್ಲಿ ಮಾತನಾಡಿ, ದೇವಭಾಷೆಯಾದ ಸಂಸ್ಕೃತವನ್ನು ಬಳಸಿ- ಉಳಿಸಿ- ಬೆಳೆಸಬೇಕು. ಸಂಸ್ಕಾರ ಬೆಳೆಸಲು ಸಂಸ್ಕೃತ ಸಾಧನ ಎಂದರು.
ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮಾ ಪ್ರಭು ಅಧ್ಯಕ್ಷತೆ ವಹಿಸಿ, ಸಂಸ್ಕೃತ ಭಾಷೆ ಇನ್ನಿತರ ಭಾಷೆಗಳ ಕಲಿಕೆಗೆ ಆಧಾರವಾಗಿದೆ. ಸಂಸ್ಕೃತ ಶ್ಲೋಕ, ಸುಭಾಷಿತಗಳ ಪಠಣ, ಉತ್ತಮ ಭಾಷಾ ಕೌಶಲ್ಯಗಳ ವೃದ್ಧಿಗೆ ಅನುಕೂಲವಾಗಿದೆ ಎಂದರು.ಸಂಸ್ಕೃತ ಭಾಷೆಯ ಹಿರಿಮೆ, ಮಹತ್ವ ಕುರಿತು ಸಂಸ್ಕೃತ ಭಾಷಣ, ನಾಟಕ ಹಾಗೂ ಗೀತೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿ ಗಮನ ಸೆಳೆದರು.
ಶಾಲೆಯ ಸಂಸ್ಕೃತ ಶಿಕ್ಷಕ ಸುರೇಶ ಹೆಗಡೆ, ಭವ್ಯಾ ಭಟ್ಟ, ಶ್ರೀಧರ ಹೆಗಡೆ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವೇದಘೋಷ, ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ವಿನಾಯಕ ಶಾನಭಾಗ ಸ್ವಾಗತಿಸಿದಳು. ವಿದ್ಯಾರ್ಥಿನಿ ಕೃತಿಕಾ ಮಹೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದಳು. ಯುವರಾಜ ಭಟ್ ವಂದಿಸಿದರು.