ಎಲ್ಲ ಭಾಷೆಗಳ ಮೂಲ ಸಂಸ್ಕೃತ: ಗಂಗಾಧರ ಬೋಡೆ

| Published : Aug 12 2025, 12:30 AM IST

ಸಾರಾಂಶ

ನಮ್ಮ ಪರಂಪರೆಯನ್ನು ಉಳಿಸಿದೆ

ಯಲ್ಲಾಪುರ: ಎಲ್ಲ ಭಾಷೆಗಳ ಮೂಲ ಸಂಸ್ಕೃತ. ಹಾಗಾಗಿಯೇ ಎಲ್ಲ ಭಾಷೆಗಳಿಗೂ ಸಂಸ್ಕೃತ ಮಾತೃಭಾಷೆ ಎಂದು ಹೇಳಲ್ಪಟ್ಟಿದೆ. ಇದು ಬಹಳ ಪ್ರಾಚೀನ ಕಾಲದಿಂದ ಬಂದಿದ್ದು, ನಮ್ಮ ಪರಂಪರೆಯನ್ನು ಉಳಿಸಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಸಂಸ್ಕೃತ ಶಿಕ್ಷಕ ಗಂಗಾಧರ ಬೋಡೆ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನದ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ವಿಶ್ವದರ್ಶನ ಕೇಂದ್ರೀಯ ವಿದ್ಯಾಲಯ ಸೋಮವಾರ ಹಮ್ಮಿಕೊಂಡ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೬೦ರಿಂದ ಸಂಸ್ಕೃತ ದಿವಸ ಪ್ರಾರಂಭವಾಯಿತು. ಶ್ರಾವಣ ಮಾಸದ ಹುಣ್ಣಿಮೆಯ ದಿನ ಸಂಸ್ಕೃತೋತ್ಸವ ಆಚರಿಸುತ್ತೇವೆ. ಸಂಸ್ಕೃತ ಬಹಳ ಪ್ರಾಚೀನಕಾಲದ್ದು. ಇದು ಎಷ್ಟು ಹಿಂದಿನಿಂದ ಬಂತು ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ಬಂದ ಜ್ಞಾನ ರಾಶಿಯಿಂದ ಭಾರತದ ಪರಂಪರೆ ಉಳಿಯಿತು. ಸಂಸ್ಕೃತ ಮೊದಲು ವೇದದಿಂದ ನಂತರ ಕಾವ್ಯಗಳ ಮೂಲಕ ವಿಸ್ತಾರವಾಯಿತು. ಅಂತೆಯೇ, ನಾಟಕ ಪ್ರಪಂಚದಿಂಲೂ ಭಾಷೆ ಪ್ರಬುದ್ಧವಾಯಿತು. ಕಾಳಿದಾಸನ "ಅಭಿಜ್ಞಾನ ಶಾಕುಂತಲ " ಮುನ್ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದವಾಗಿದೆ. ಇದು ಸಂಸ್ಕೃತದ ಹೆಗ್ಗಳಿಕೆಯನ್ನು ತೋರಿಸುತ್ತದೆ. ಸಂಸ್ಕೃತವನ್ನು ಋಷಿಗಳು ಮತ್ತು ನಮ್ಮ ಪ್ರಾಚೀನ ವಿಜ್ಞಾನಿಗಳು ಪೋಷಿಸಿದ್ದಾರೆ. ನಮ್ಮ ಪೂರ್ವಜನ್ಮದ ಸುಕೃತದಿಂದ ನಾವು ಭಾರತದಲ್ಲಿ ಹುಟ್ಟಿದ್ದೇವೆ. ಸಂಸ್ಕೃತವನ್ನು ಏಕಾಗಿ ಓದಬೇಕೆಂದು ಪ್ರಶ್ನೆ ಮಾಡುವುದಲ್ಲ ಬದಲಾಗಿ ಏಕೆ ಸಂಸ್ಕೃತವನ್ನು ಓದಲಾಗಲಿಲ್ಲ ಎನ್ನುವ ಪ್ರಶ್ನೆ ನಮ್ಮಲ್ಲಿ ನಾವು ಮಾಡಿಕೊಳ್ಳಬೇಕು. ಪ್ರಪಂಚದ ಎಲ್ಲ ಭಾಷೆಗಳಲ್ಲೂ ಸಂಸ್ಕೃತದ ಪ್ರಭಾವವಿದೆ. ಸಂಸ್ಕೃತವಿಲ್ಲದೇ ಬೇರೆ ಏನೂ ಇಲ್ಲ. ಸಂಸ್ಕೃತ ಎಲ್ಲ ಭಾಷೆಗಳ ಮೂಲ. ಅನೇಕ ದೇಶದವರು ಸಂಸ್ಕೃತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಸಂಸ್ಕೃತವನ್ನು ಓದಿ, ನಮ್ಮ ಭಾರತೀಯ ಮೂಲ ಭಾಷೆ ಅದನ್ನು ಉಳಿಸಿ, ಬೆಳೆಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪ್ರಾಂಶುಪಾಲೆ ಮಹಾದೇವಿ ಭಟ್ಟ, ಉಪ ಪ್ರಾಂಶುಪಾಲೆ ಆಸ್ಮಾ ಶೇಖ್, ಕೇಂದ್ರೀಯ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ನಡೆದ ಮನರಂಜನಾ ಕಾರ್ಯಕ್ರಮ ಗಮನ ಸೆಳೆಯಿತು.

ವಿದ್ಯಾರ್ಥಿಗಳಾದ ವಿಭಾ ಸ್ವಾಗತಿಸಿದರು. ನಮನ್ ಮತ್ತು ಅಮಿತ್ ನಿರ್ವಹಿಸಿದರು. ಅಭಯ್ ವಂದಿಸಿದರು.

ವಿಶ್ವದರ್ಶನದಲ್ಲಿ ಸಂಸ್ಕೃತ ದಿನಾಚರಣೆ ನಡೆಯಿತು.