ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸಂತ ಅನ್ನಮ್ಮ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಶಾಲಾ ಸಭಾಂಗಣದಲ್ಲಿ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಧನೆಯನ್ನು ಅತಿಥಿಗಳು ಮುಕ್ತ ಕಂಠದಿಂದ ಶ್ಲಾಘಿಸಿ ಶುಭಾಶಯ ಕೋರಿದರು.ಮುಖ್ಯ ಅತಿಥಿಗಳಾದ ವಿರಾಜಪೇಟೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಕೆ.ಆರ್. ಮಾತನಾಡಿ, ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಅನುದಾನಿತ ಶಾಲೆಗಳಲ್ಲೂ ಸರ್ಕಾರದ ಸೌಲಭ್ಯಗಳು ಲಭ್ಯವಿದ್ದು, ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ದಾಖಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ವಿಷಯದ ಗ್ರಹಿಕೆ ಹೆಚ್ಚಾಗಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಹಳೆಯ ವಿದ್ಯಾರ್ಥಿ ಹಾಗೂ ಇಂಜಿನಿಯರ್ ಆಂಟೋನಿ ಜೋಸೆಫ್ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗುತ್ತದೆ ಎಂದು ತಿಳಿಸಿ, ಆಟೋಟದ ಜೊತೆಗೆ ಕಲಿಕೆಯ ಮೇಲೂ ಆಸಕ್ತಿ ವಹಿಸಿ ಮುಖ್ಯ ವಾಹಿನಿಗೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಶಾಲಾ ಶಿಕ್ಷಕಿ ಸುಜಾತಾ ಮಾಹಿತಿ ನೀಡಿ, ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಹಾಗೂ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಗಮನಾರ್ಹ ಸಾಧನೆ ಮಾಡಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಮಾರ್ಜರಿ, ಸಿಬಿಎಸ್ಸಿ ವಿಭಾಗದ ಮುಖ್ಯ ಶಿಕ್ಷಕಿ ಲಿನೆಟ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅರ್ಪಿತಾ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮೇರಿ ರೆಜಿನಾ ಥೋಮಸ್ ಉಪಸ್ಥಿತರಿದ್ದರು.