ಸಂತೆ ಹೊಂಡದ ತರಕಾರಿ ಮಾರುಕಟ್ಟೆ ಶಿಫ್ಟ್

| Published : Jul 01 2025, 01:48 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೋಮವಾರ ಚಿತ್ರದುರ್ಗ ಸಂತೆ ಹೊಂಡ, ಗಾಂಧಿ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂತೆಹೊಂಡದ ಮುಂಭಾಗವಿರುವ ತರಕಾರಿ, ಹಣ್ಣು ಮಾರಾಟ ಅಂಗಡಿಗಳು ಹಾಗೂ ಇತರೆ ಬೀದಿಬದಿ ವ್ಯಾಪಾರಿಗಳನ್ನು ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿರ್ಮಿಸಿರುವ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಸಚಿವ ಡಿ.ಸುಧಾಕರ್ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ನಿರ್ದೇಶನ ನೀಡಿದರು.

ಸೋಮವಾರ ನಗರದ ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸುಮಾರು 10 ವರ್ಷಗಳ ಹಿಂದೇ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮಾರುಕಟ್ಟೆ ನಿರ್ಮಿಸಿ, ವ್ಯಾಪಾರಿಗಳಿಗೆ ಈ ಹಿಂದೆಯೇ ಹಂಚಿಕೆ ಮಾಡಲಾಗಿದೆ. ಆದರೂ ವ್ಯಾಪಾರಿಗಳು ಸ್ಥಳಾಂತರವಾಗಿಲ್ಲ. ಇದರಿಂದ ನಗರಸಭೆಗೆ ಆರ್ಥಿಕ ನಷ್ಟ ಉಂಟಾಗಿದೆ. ಕೂಡಲೇ ಸಂತೆಹೊಂಡದ ಬಳಿಯ ತರಕಾರಿ, ಹಣ್ಣು ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. 10 ವರ್ಷಗಳ ಹಿಂದಿನ ಟೆಂಡರ್ ರದ್ದುಮಾಡಿ ಹೊಸದಾಗಿ ಅರ್ಜಿ ಕರೆದು, ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಬೇಕು. ಇಲ್ಲವಾದರೆ, ನಗರಸಭೆಗೆ ಉಂಟಾದ ಅರ್ಥಿಕ ನಷ್ಟವನ್ನು ಆಯುಕ್ತರೇ ಭರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವ ಡಿ.ಸುಧಾಕರ್ ಎಚ್ಚರಿಸಿದರು.

ನಗರದ ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿ 15ನೇ ಹಣಕಾಸು ಯೋಜನೆಯಡಿ ಸಂಕೀರ್ಣ ನಿರ್ಮಾಣ ಕಾಮಗಾರಿ ಆರಂಭಿಸಿ, ಪ್ರಸ್ತುತ ಸ್ಥಗಿತಗೊಂಡಿರುವ ವಾಣಿಜ್ಯ ಸಂಕೀರ್ಣಗಳ ಕಾಮಗಾರಿಯನ್ನು ಪುನರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಬಹಳ ವರ್ಷಗಳ ಹಿಂದೆ 15ನೇ ಹಣಕಾಸು ಯೋಜನೆಯಡಿ ಇಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅನುದಾನ ಕೊರತೆಯಿಂದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಡಿಎಂಎಫ್ ಹಾಗೂ ನಗರಸಭೆಯ ಅನುದಾನ ನೀಡಿ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಮುಂದುವರಿಸಲು ಆಲೋಚಿಸಲಾಗಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿ ಕಸ ಹಾಗೂ ತ್ಯಾಜಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದನ್ನು ಕಂಡು ಸಚಿವ ಡಿ.ಸುಧಾಕರ್ ತೀವ್ರ ಅಸಮಾಧನ ವ್ಯಕ್ತಪಡಿಸಿದರು. ನಗರಸಭೆ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಸಂತೆಹೊಂಡದ ಬಳಿ ರಾತ್ರಿಯ ವೇಳೆ ಹೋಟೆಲ್‍ಗಳಿಂದ ತಾಜ್ಯಗಳನ್ನು ತಂದು ಸುರಿಯುತ್ತಾರೆ ಎಂದು ಬೀದಿ ಬದಿ ವ್ಯಾಪಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವ ಡಿ.ಸುಧಾಕರ್ ಅವರು, ತ್ಯಾಜ್ಯ ಸುರಿಯುವ ಹೋಟೆಲ್‍ಗಳ ಲೈಸೆನ್ಸ್ ರದ್ದು ಮಾಡಲು ಕೂಡಲೆ ಕ್ರಮ ಜರುಗಿಸುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಜಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.