ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ವಡ್ಡಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವತಿಯಿಂದ ಹಾಗೂ ಅಮೇರಿಕ ಇಂಡಿಯಾ ಫೌಂಡೇಶನ್ ಆವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಂದ ಅನುಭವಾತ್ಮಕ ಕಲಿಕೆಯ ಸಂತೆಮೇಳವನ್ನು ಏರ್ಪಡಿಸಲಾಗಿತ್ತು.ಈ ಮೂಲಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆಯನ್ನು ನೀಡುವ ಪ್ರಯತ್ನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಕೆಂಪರಾಜ್ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮವು ಗ್ರಾಮೀಣ ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆಯಾದ ಉತ್ತಮವಾದ ಕಾರ್ಯಕ್ರಮವೆಂದರು.
ಮುಖ್ಯ ಶಿಕ್ಷಕ ಏಚ್.ಆರ್. ಆನಂದ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ವ್ಯವಹಾರ ಜ್ಞಾನ ಲಾಭ-ನಷ್ಟ, ತೂಕ ಅಳತೆ ಮತ್ತು ಮಾತನಾಡುವ ಈ ಕಾರ್ಯಕ್ರಮದಿಂದ ಕೌಶಲ್ಯ ಮೂಡುತ್ತದೆ. ಇದರಿಂದ ವಿದ್ಯಾರ್ಥಿಗಳು ಮುಂದೆ ತಮ್ಮ ಸ್ವಂತ ದುಡಿಮೆ ಮೇಲೆ ಬದುಕುವ ಒಂದು ಪ್ರಾಯೋಗಿಕ ಕಾರ್ಯ ಎಂದು ತಿಳಿಸಿದರು.ಎ.ಎಫ್.ಐ ಸಂಯೋಜಕ ಧರ್ಮರಾಜ್ ಎ.ಎಚ್. ಮಾತನಾಡಿ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಕೌಶಲ್ಯವನ್ನು ಮತ್ತು ತಮ್ಮ ಸ್ವಂತ ಬುದ್ಧಿಯ ಮೇಲೆ ವ್ಯವಹಾರ ಮಾಡುವ ಕಲಿಕೆಯನ್ನು ಉಂಟುಮಾಡುತ್ತದೆ. ಈ ಕಾರ್ಯಕ್ರಮ ಈ ಶಾಲೆ ಮಾಡುತ್ತಿರುವುದು ಸುದೈವ ವಿದ್ಯಾರ್ಥಿಗಳು ಈ ರೀತಿ ಉತ್ತಮವಾಗಿ ಭಾಗವಹಿಸುತ್ತಿರುವುದು ಮತ್ತು ವ್ಯಾಪಾರ ಮಾಡುತ್ತಿರುವುದು ಖುಷಿ ಕೊಡುವ ಕಾರ್ಯಕ್ರಮವಾಗಿದೆ ಎಂದರು.
ವಿದ್ಯಾರ್ಥಿಗಳು ಮಾರಲು ವಿವಿಧ ತರಕಾರಿ, ಸೊಪ್ಪು, ಹಣ್ಣು, ಕುಟ್ಟು ಹುಣಸೆ, ಪಾನಿಪುರಿ, ಬೇಲ್ ಪುರಿ, ಸಮೋಸ, ಚುರುಮುರಿ, ಹೂ, ಕಡ್ಲೆಕಾಯಿ, ಕಡ್ಲೆಬೀಜ, ಕಲ್ಲಂಗಡಿ, ಪಾನಕ, ಮಸಾಲ ಮಜ್ಜಿಗೆ, ಹೆಸರು ಬೇಳೆ, ಮೆಹಂದಿ, ಎಳನೀರು, ಪಾರಿವಾಳ, ಬಳೆ, ಪೆನ್ನು ಪೆನ್ಸಿಲ್, ನೋಟ್ ಪುಸ್ತಕ, ಫ್ರೂಟ್ ಸಲಾಡ್ ಇತ್ಯಾದಿ ವಸ್ತು ಗಳನ್ನು ತಂದು ಮಾರಿದರು.ಶಿಕ್ಷಕರು, ಗ್ರಾಮಸ್ಥರು ಮತ್ತು ಅಕ್ಕ ಪಕ್ಕದ ಊರಿನವರು ವಿದ್ಯಾರ್ಥಿಗಳು ಮಾರುವ ರೀತಿಯಿಂದ ಬೆಲೆ ನಿರ್ಧಾರದ ಬಗ್ಗೆ ಖುಷಿಪಟ್ಟು ವಸ್ತುಗಳನ್ನು ಖರೀದಿಸಿದರು.
ಪಿಡಿಒ ರಂಗಶಾಮಯ್ಯ, ನೋಡಲ್ ಶಿಕ್ಷಕ ಸುಜಿತ್ ಕುಮಾರ್ ಮಾತನಾಡಿದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಸಂತೆಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಿವಿ ಶೇಷಾದ್ರಿ, ರಂಗರಾಜು, ಕೋಟಿಕಲ್ಲಯ್ಯ, ವಸುಂದರ. ಬಿ.ಎಸ್. ಗಿರೀಶ್, ಸುಜಿತ್ ಕುಮಾರ್ ಸಿ. ರಂಗಸ್ವಾಮಯ್ಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ರೇಣುಕಾರಾಧ್ಯ, ಕೆಂಪಮ್ಮ ಮತ್ತು ಅಡುಗೆಯವರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಎಫ್ಐ ಸಂಯೋಜಕರಾದ ಧರ್ಮರಾಜ್ ಸಂತೆ ಮೇಳ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಲಾಭಗಳಿಸಿದ ಪೂಜಾಶ್ರೀ ತಂಡ ಮತ್ತು ರಂಜನ್ ಮತ್ತು ತಂಡಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಿದರು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಿದರು. ಎ.ಎಫ್.ಐ ಕ್ಲಸ್ಟರ್ ಸಂಯೋಜಕರಾದ ತೇಜಸ್ವಿನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಗೂ ಪೋಷಕರು ಶಾಲೆಯ ವಿದ್ಯಾರ್ಥಿಗಳು ಮಾರಾಟಕ್ಕೆ ತಂದಿದ್ದ ವಸ್ತುಗಳನ್ನು ಖರೀದಿಸಿದರು.