ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಸಂತೋಷ್ ಕುಮಾರ್ ಅಧಿಕಾರ ಸ್ವೀಕರಿಸಿದರು.11 ವರ್ಷ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಹತ್ತು ವರ್ಷ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದ ಅವರು ಕಾಪು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಸಿಎ, ಸಿಎಸ್, ಸಿಎಂಎ ಕೋರ್ಸ್‌ಗಳಿಗೆ ಸಂಯೋಜಕರಾಗಿ ತರಬೇತಿ ನೀಡಿ ನೂರಾರು ವಿದ್ಯಾರ್ಥಿಗಳು ಇವರಿಂದ ಯಶಸ್ಸನ್ನು ಪಡೆದಿರುತ್ತಾರೆ.ಬೆಂಗಳೂರಿನ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ.ಎ.ಪಿ. ಭಟ್ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಪಿ.ಎಸ್. ಐತಾಳ್, ಪ್ರಾಂಶುಪಾಲರಾಗಿ ನೇಮಕ ಆದೇಶ ಪತ್ರ ನೀಡಿ ಅಭಿನಂದಿಸಿದರು. ನಿರ್ಗಮನ ಪ್ರಾಂಶುಪಾಲೆ ಪ್ರತಿಮಾ ಬಾಳಿಗ ಅಧಿಕಾರ ಹಸ್ತಾಂತರಿಸಿದರು.ಗೌರವ ಕೋಶಾಧಿಕಾರಿ ಸಿಎ ಟಿ. ಪ್ರಶಾಂತ್ ಹೊಳ್ಳ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಮಾನಂದ ರಾವ್ ಸ್ವಾಗತಿಸಿದರು. ಉಡುಪಿ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಉಪ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಧೀರಜ್ ವಂದಿಸಿದರು.