ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತೊಲಗಲಿ, ತೊಲಗಲಿ ರೈತ ವಿರೋಧಿಗಳಿಗೆ ಧಿಕ್ಕಾರ, ಬೇಕೆ ಬೇಕು ನ್ಯಾಯ ಬೇಕು. ರೈತರ ಭೂಮಿ ಕಬಳಿಸಲು ಸಂಚು ರೂಪಿಸಿರುವ ರಿಯಲ್ ಎಸ್ಟೇಟ್ ಕುಳಗಳನ್ನು ಮಟ್ಟಹಾಕಿ ಎಂದು ಸೂಳೆಕೆರೆ, ಪನ್ನಸಮುದ್ರ ಹಾಗೂ ಲಕ್ಷ್ಮೀ ದೇವರಹಳ್ಳಿ, ಬೆಂಡೆಕೆರೆ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎನ್. ಆರ್. ಸಂತೋಷ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಲಾಗಿದೆ. ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಎನ್ನುವ ಕುರಿತು ತನಿಖೆ ಮಾಡಬೇಕು. ರೈತರ ಜಮೀನು ಕಬಳಿಸಲು ಹೊರಟಿರುವ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ವಜಾಗೊಳಿಸಿ, ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ಮೂರು ಗ್ರಾಮಗಳ ರೈತರ ಭೂಮಿ ವಶಕ್ಕೆ ಪಡೆಯುವುದಿಲ್ಲ ಎಂದು ಡಿಸಿ ಘೋಷಣೆ ಮಾಡಬೇಕು. ಅಲ್ಲಿಯವರೆಗೆ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಗುಡುಗಿದರು.
ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದನ್ನು ಶಾಸಕರೇ ಒಪ್ಪಿಕೊಂಡ ಆಡಿಯೋ ಎಲ್ಲೆಡೆ ಹರಿದಾಡಿದ್ದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ದೂರು ಕೇಳಿಬಂದ ಕೂಡಲೇ ಶಾಸಕ ಮುನಿರತ್ನ ಅವರನ್ನು ಬಂಧಿಸಿದೆ. ಆದರೆ ಕೋಟಿ ಕೋಟಿ ಹಣದ ವರ್ಗಾವಣೆ ನಡೆದಿದ್ದು ಇಡಿ. ಚುನಾವಣಾ ಆಯೋಗ, ಸುಮ್ಮನಿರುವುದು ಸರಿಯಲ್ಲ. ತಕ್ಷಣವೇ ಪ್ರಕರಣ ದಾಖಲಿಸಿ ಸಂಸದ, ಶಾಸಕರನ್ನು ವಜಾ ಮಾಡಿ ಎಂದು ಸಂತೋಷ್ ಆಗ್ರಹಿಸಿದರು.ನಾವು ನಡೆಸುತ್ತಿರುವ ರೈತರ ನ್ಯಾಯಯುತ ಹೋರಾಟದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಸೇರಿದಂತೆ ಎಚ್. ಡಿ.ರೇವಣ್ಣ, ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿ ಇರಿಸಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರ ಬರುತ್ತದೆ, ಹೋಗುತ್ತದೆ, ಅನ್ನದಾತರಿಗೆ ಅನ್ಯಾಯ ಮಾಡಬಾರದು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಗಮನ ಸೆಳೆದರು.
ರೈತ ಮುಖಂಡ ಗೀಜಿಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ಮೈಸೂರು ರಸ್ತೆಯಲ್ಲಿ ಇರುವ ಶಾಸಕರ ತೋಟವನ್ನು ಉಪನಗರ ನಿರ್ಮಿಸಲು ಬಿಟ್ಟುಕೊಡಲಿ. ಅದನ್ನು ಬಿಟ್ಟು ಬಡವರ ಭೂಮಿ ಮೇಲೆ ವಕ್ರದೃಷ್ಟಿ ಬೀರುತ್ತಿರುವುದು ಯಾವ ನ್ಯಾಯ. ರಾಗಿ, ಜಲ್ಲಿ, ಕಳ್ಳ ತೊಲಗಲಿ ಎಂದು ಕಿಡಿಕಾರಿದರು. ತಾಪಂ ಮಾಜಿ ಸದಸ್ಯ ಭೋಜಾನಾಯ್ಕ್, ಜಯದೇವ್, ಮೋಹನ್ ಕುಮಾರ್, ಉಮೇಶ್, ಪುಟ್ಟಸ್ವಾಮಿ ದನಿಗೂಡಿಸಿದರು.ರೈತಸಂಘದ ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ಸಮೃದ್ಧ ಕೃಷಿ ಭೂಮಿ ಕಬಳಿಕೆ ಮಾಡಿ ನಿವೇಶನ ಕೊಡಿ ಎಂದು ಯಾರಾದರೂ ನಿಮ್ಮನ್ನು ಕೇಳಿದ್ದಾರೆಯೇ? ಹಣ ಲೂಟಿ ಹೊಡೆಯಲು ಉಪ ನಗರ ಮಾಡಲು ಸ್ಕೆಚ್ ಹಾಕಿರುವುದು ನಮಗೆ ಗೊತ್ತಿದೆ. ಸಹಮತ, ಬಲವಂತ ಶಬ್ಧಗಳು ನಡೆಯುವುದಿಲ್ಲ. ಜಿಲ್ಲಾಧಿಕಾರಿ ಕೂಡಲೇ ಭೂಮಿ ಪಡೆಯುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಡಾಬಾ ರಘು, ರಂಗನಾಥ್, ಲೋಕೇಶ್, ಶಿವಕುಮಾರ್, ಪ್ರಭಣ್ಣ, ಬೆಳಗುಂಬ ಚಂದ್ರಶೇಖರ್, ಗಗನ್, ಓಂಕಾರ ಮೂರ್ತಿ, ರಾಜಣ್ಣ, ರವಿ, ಇನ್ನಿತರರು ಹಾಜರಿದ್ದರು.