ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂತಿ ಸಾರು ಅನ್ನಪ್ರಸಾದ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಲಕೆರೆ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳು, ಡಾ.ಅಭಿನವ ಅನ್ನದಾನ ಮಹಾಸ್ವಾಮೀಜಿ ಕಾರ್ಯಗಳನ್ನು ಶ್ರೀಮಠವು ನಿರಂತರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಶ್ರೀಮಠದ ಶ್ರೀ ಮ.ನಿ.ಪ್ರ.ಮುಪ್ಪಿನ ಬಸವಲಿಂಗ ಸ್ವಾಮೀಜಿ ತಿಳಿಸಿದರು.ನಗರದ ದೇವರಾಜ ಅರಸು ಬಡಾವಣೆ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಲಿಂಗೈಕ್ಯ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳ 47ನೇ ಪುಣ್ಯಾರಾಧನೆ, ಕಾಯಕ ಯೋಗಿ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಅಭಿನವ ಅನ್ನದಾನ ಮಹಾಸ್ವಾಮೀಜಿ ತೃತೀಯ ವರ್ಷದ ಪುಣ್ಯಾರಾಧನೆ, ಶಿವಾನುಭವ ಸಂಪದ ಹಾಗೂ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗದಗಿನಲ್ಲಿ ಒಂದೇ ಕಡೆ 6 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್‌ಕೆಜಿಯಿಂದ ಪಿಜಿವರೆಗೆ ಅಷ್ಟೊಂದು ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಸಾಧ್ಯವಾಗಿದ್ದು ಹಿರಿಯ ಶ್ರೀಗಳ ಪರಿಶ್ರಮದಿಂದ. ಇಂದು ದೇಶ, ವಿದೇಶಗಳಲ್ಲಿ ಶ್ರೀಮಠದಲ್ಲಿ ಓದಿ, ಭವಿಷ್ಯ ಕಟ್ಟಿಕೊಂಡ ಸಾಧಕರಿದ್ದಾರೆ. 1913ರಲ್ಲಿ ಸಂಸ್ಕೃತ ಶಾಲೆಯೊಂದಿಗೆ ಆರಂಭವಾದ ಶ್ರೀಮಠದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಶ್ರೀಮಠದ ಸಂಸ್ಥೆಯಲ್ಲಿ ಬೋಧನೆಗೆ ಆಯ್ಕೆಗೆ ಐದಾರು ದಶಕದ ಹಿಂದೆಯೇ ಹಿರಿಯ ಗುರುಗಳು ಕ್ಯಾಂಪಸ್ ಸಂದರ್ಶನ ಮಾಡುತ್ತಿದ್ದರೆಂದರೆ ಶಿಕ್ಷಣದ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಅದೆಷ್ಟು ಕಾಳಜಿ ಹೊಂದಿದ್ದರು ಎಂಬುದು ವೇದ್ಯವಾಗುತ್ತದೆ ಎಂದು ಹೇಳಿದರು.ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆಯಾಗದಿದ್ದರೆ ಹಿರಿಯ ಅಜ್ಜೋರಿಗೆ ಪೂಜೆಗೆಂದು ಗ್ರಾಮಸ್ಥರು ತಮ್ಮ ಊರಿಗೆ ಕರೆಸಿಕೊಳ್ಳುತ್ತಿದ್ದರು. ಗುರುಗಳು ಲಿಂಗಪೂಜೆ ಮಾಡಿದ ಕೆಲ ಹೊತ್ತಿನಲ್ಲಿಯೇ ಮಳೆಯಾಗಿರುವ ಸಾಲು ಸಾಲು ನಿದರ್ಶನ ಇಂದಿಗೂ ಅಲ್ಲಿನ ಹಿರಿಯರು ನೆನಸುತ್ತಾರೆ. ಮಳೆ ಅಜ್ಜೋರು ಅಂತಲೇ ಹಿರಿಯರನ್ನು ಭಕ್ತರು ಸ್ಮರಿಸುತ್ತಾರೆ. ಮಹಿಳೆಯರೇ ತೇರು ಎಳೆಯಲು ಅವಕಾಶ ನೀಡಿದ್ದು, ಶೈಕ್ಷಣಿಕ, ಧಾರ್ಮಿಕ ಸಮಾನತೆಗಾಗಿ ಶ್ರೀಗಳು ಶ್ರಮಿಸಿದ್ದರು. ಒಮ್ಮೆ ಯಾರಾದರೂ ಕೊರಳಿಗೆ ಲಿಂಗ ಕಟ್ಟಿದರೆ ಅಂತಹವರನ್ನು ಭಿನ್ನ ದೃಷ್ಟಿಯಿಂದ ನೋಡಬಾರದು ಎಂಬುದು ಹಿರಿಯ ಗುರುಗಳ ಮಾತಾಗಿತ್ತು ಎಂದು ಮೆಲಕು ಹಾಕಿದರು.
ಕೇವಲ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೇ, ಸಾವಯವ ಕೃಷಿ ಜಾಗೃತಿ, ಅಂತರ್ಜಲದ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಬಾಟಲಿ ನೀರಿನ ಮೊರೆ ಹೋಗಿರುವ ಇಂದಿನ ಜನರು ನಿರಂತರ 15-20 ವರ್ಷ ಅದನ್ನೇ ಬಳಸಿದರೆ ಮೂಳೆಗಳಲ್ಲಿ ಯಾವುದೇ ಶಕ್ತಿಯೂ ಇರುವುದಿಲ್ಲ. ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಪದ್ಧತಿ ಮರೆಯಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆದರ್ಶ ಗುಣ ಮುಂದಿನ ಪೀಳಿಗೆಗೂ ಕಲಿಸುವ ಕೆಲಸವಾಗಬೇಕು. ದಾವಣಗೆರೆ ಶಾಖಾ ಮಠದಿಂದ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ದಾನಿಗಳು, ಶಿಕ್ಷಣ ಪ್ರೇಮಿಗಳ ಸಹಕಾರ ಸಿಕ್ಕರೆ ಹಾಲಕೆರೆ ಮಠದಿಂದ ವಿದ್ಯಾನಗರಿ ದಾವಣಗೆರೆಯಲ್ಲೂ ಶಿಕ್ಷಣ ಸಂಸ್ಥೆಯನ್ನು ಶ್ರೀಮಠ ಸ್ಥಾಪಿಸಲಿದೆ ಎಂದು ಹಾಲಕೆರೆ ಶ್ರೀಗಳು ಭರವಸೆ ನೀಡಿದರು.ಸನ್ಮಾನಿತರಾಗಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಜ್ಞಾನ, ಅನ್ನ ದಾಸೋಹದ ಪರಂಪರೆಯನ್ನು ಹಾಲಕೆರೆ ಶ್ರೀಮಠ ಮುಂದುವರಿಸಿಕೊಂಡು ಬರುತ್ತಿದೆ. ಇಂತಹ ಮಠಗಳಲ್ಲಿ ಆಶ್ರಯ ಪಡೆದು, ಬದುಕನ್ನು ಕಟ್ಟಿಕೊಂಡವರು ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ನಮ್ಮ ಪರಂಪರೆ, ಧಾರ್ಮಿಕ ಕಾರ್ಯಗಳನ್ನು ಹೆಚ್ಚಾಗಿ ಮಾಡಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚಾರ, ವಿಚಾರಗಳು, ಆಚರಣೆಗಳ ಮಹತ್ವ, ಸಂಸ್ಕಾರ, ಸದ್ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕು. ಶ್ರೀಮಠದ ಸಮುದಾಯ ಭವನದ ಸೇರಿದಂತೆ ಯಾವುದೇ ಬೇಡಿಕೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನಿಮ್ಮ ಜೊತೆಗಿರುತ್ತಾರೆ ಎಂದು ತಿಳಿಸಿದರು.
ಹಾಲಕೆರೆ ಶ್ರೀಗಳು, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದಾವಿವಿ ನಿಕಟ ಪೂರ್ವ ಕಲ ಸಚಿವ ಡಾ.ಕೆ.ಶಿವಶಂಕರ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಲೆಕ್ಕ ಪರಿಶೋಧಕ ಮುಂಡಾಸದ ವೀರೇಂದ್ರ, ಎಸ್‌ಬಿಸಿ ಕಾಲೇಜು ಪ್ರಾಚಾರ್ಯ ಡಾ.ಕೆ.ಷಣ್ಮುಖಪ್ಪ, ವರದಿಗಾರರ ಕೂಟದ ನಾಗರಾಜ ಎಸ್.ಬಡದಾಳ್, ಎಚ್.ಎಂ.ಪಿ.ಕುಮಾರ, ರವಿಕುಮಾರ ಭುವನೇಶ್ವರಿ, ಆರ್.ಎಸ್.ತಿಪ್ಪೇಸ್ವಾಮಿ, ಸಿಪಿಐ ಗುರುಬಸವರಾಜ, ಟ್ರಸ್ಟ್ ಅಧ್ಯಕ್ಷ ಎನ್.ಅಡಿವೆಪ್ಪ, ಖಜಾಂಚಿ ಎನ್.ಎ.ಗಿರೀಶ, ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಭಾವಿ, ಎಸ್.ಓಂಕಾರಪ್ಪ, ಜಾಲಿಮರದ ಕರಿಬಸಪ್ಪ, ಮುತ್ತುರಾಜ ವಿ.ಭಾವಿ, ಸುಜಾತ, ವಿ.ಬಿ.ತನುಜ ಇತರರು ಇದ್ದರು. ಟಿ.ಎಚ್.ಎಂ.ಶಿವಕುಮಾರಸ್ವಾಮಿ ಸಂಗೀತ, ಕೃಷ್ಣಮೂರ್ತಿ ತಬಲಾ ಸಾಥ್ ನೀಡಿದರು. ಶ್ರೀ ಸಿದ್ಧಗಂಗಾ ಶಾಲೆ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು.