ಕಾಂಗ್ರೆಸ್ ತೆಕ್ಕೆಗೆ ಪಪಂ ಗದ್ದುಗೆ ಖಚಿತ!

| Published : Aug 19 2024, 12:52 AM IST

ಸಾರಾಂಶ

ಕುಕನೂರು ಪಪಂಗೆ ಸಾಮಾನ್ಯ ಮಹಿಳೆ ಅಧ್ಯಕ್ಷೆ, ಎಸ್ಸಿ ಉಪಾಧ್ಯಕ್ಷ ಮೀಸಲು ಪ್ರಕಟವಾದ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಜರುಗುತ್ತಿದ್ದು, ಆ. 19ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಪೈಪೋಟಿ ಆರಂಭ, ತೆರೆಮೆರೆಯಲ್ಲಿ ಬಿಜೆಪಿ ಕಸರತ್ತು । ಸಮಬಲದ ಹೋರಾಟ ನಿರೀಕ್ಷೆ

ಕನ್ನಡಪ್ರಭ ವಾರ್ತೆ ಕುಕನೂರು

ಕುಕನೂರು ಪಪಂಗೆ ಸಾಮಾನ್ಯ ಮಹಿಳೆ ಅಧ್ಯಕ್ಷೆ, ಎಸ್ಸಿ ಉಪಾಧ್ಯಕ್ಷ ಮೀಸಲು ಪ್ರಕಟವಾದ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಜರುಗುತ್ತಿದ್ದು, ಆ. 19ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಳಯದಲ್ಲಿ ಬಹುತೇಕ ಬಹುಮತವಿದ್ದರೂ ಸಹ ಬಿಜೆಪಿ ಬೆಂಬಲಿತ ಸದಸ್ಯರ ತೆರೆಮರೆ ಕಸರತ್ತಿಗೆ ಕೈ ಸದಸ್ಯರು ಕೈ ಜಾರಿದ್ದಾರೆ ಎನ್ನಲಾಗಿದೆ. ಇದರಿಂದ ಸಮಬಲ ಹೋರಾಟ ನಿರೀಕ್ಷಿಸಲಾಗುತ್ತಿದೆ.

ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ೨ ವರ್ಷ ಪೂರ್ಣಗೊಂಡು ೩ನೇ ವರ್ಷ ಆರಂಭವಾಗಿದ್ದು, ಈಗ ಪಪಂಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭಗೊಂಡಿದೆ.ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ೧೯ ವಾರ್ಡ್‌ ಇದ್ದು, ೧೯ ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿತ ೧೦, ಬಿಜೆಪಿ ಬೆಂಬಲಿತರಾಗಿ ೯ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅದರಲ್ಲಿ 2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಬಿಜೆಪಿ ಪಾಳಯಕ್ಕೆ ತೆರಳಿದ್ದರು. ಇದರಿಂದ ಕಾಂಗ್ರೆಸ್, ಬಿಜೆಪಿಯಲ್ಲಿ 9 ಜನ ಸದಸ್ಯರ ಬಲಾಬಲ ಕಾಣುತ್ತಿತ್ತು. ಆದರೆ ರಾಜಕೀಯ ಕಸರತ್ತಿನಿಂದ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರು ಬಿಜೆಪಿಯತ್ತ ವಾಲಿದ್ದರೂ ಎಂಬ ರಾಜಕೀಯ ಸುದ್ದಿ ಪಟ್ಟಣದ ತುಂಬಾ ಹರಡಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣಾ ಹೊತ್ತಲ್ಲಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ ಸದಸ್ಯರ ಕೈಗೆ ಸಿಗದೆ ಕೈಗೆ ಬಲ ನೀಡಿದ್ದಾರೆ. ತೆರೆಮರೆಯಲ್ಲಿ ಬಿಜೆಪಿ ಬೆಂಬಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಕೈ ಬೆಂಬಲಿತ ಮೂವರ ಸದಸ್ಯರ ಪೈಕಿ ಒಬ್ಬರು ಬಿಜೆಪಿಯಿಂದ ಕಾಲ್ಕಿತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಮೂವರು ಕೈ ಸದಸ್ಯರ ಬೆಂಬಲ ಬಿಜೆಪಿ ಸಿಕ್ಕಿದ್ದರೆ ಕುಕನೂರು ಪಪಂ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಬಿಜೆಪಿ ಪಾಲಾಗುತ್ತಿತ್ತು. ಆದರೆ ಈಗ ಲೆಕ್ಕಾಚಾರ ಬದಲಾಗಿವೆ. ಬಹುತೇಕವಾಗಿ ಕುಕನೂರು ಪಪಂ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಕಾಂಗ್ರೆಸ್ ತೆಕ್ಕೆಗೆ ಬೀಳಲಿವೆ. ಈ ಮಧ್ಯೆಯೂ ಸಹ ಶಾಸಕ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ ಮತಗಳು ಸಹ ಇರುವುದರಿಂದ ಕಾಂಗ್ರೆಸ್ ಹೆಚ್ಚಿನ ಬಲ ಸಿಗಲಿದೆ.

ಕಾಂಗ್ರೆಸ್:

ಪಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಬಂದಿರುವುದರಿಂದ ಕಾಂಗ್ರೆಸ್‌ನಿಂದ 8ನೇ ವಾರ್ಡ್‌ ಸದಸ್ಯೆ ಲಲಿತಮ್ಮ ಯಡಿಯಾಪೂರ, ೧೮ನೇ ವಾರ್ಡ್ ಲೀಲಾವತಿ ಮುಧೋಳ ನಡುವೆ ಪೈಪೋಟಿ ನಡೆದಿದೆ. ಉಪಾಧ್ಯಕ್ಷ ಸ್ಥಾನ ಎಸ್ಸಿ ಆಗಿರುವುದರಿಂದ ೩ನೇ ವಾರ್ಡ್‌ ಪ್ರಶಾಂತ್ ಆರ್‌ಬೆರಳ್ಳಿನ್, ೧೧ನೇ ವಾರ್ಡ್‌ ಮಂಜುಳಾ ಕಲ್ಮನಿ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ್ದ 12ನೇ ವಾರ್ಡ್‌ ಸದಸ್ಯ ರಾಮಣ್ಣ ಬಂಕದಮನಿ ಕಾಂಗ್ರೆಸ್ ಕೈ ಬಲ ಪಡಿಸಿದರೆ ಉಪಾಧ್ಯಕ್ಷ ಸ್ಥಾನ ಅವರಿಗೆ ಖಚಿತವೆನ್ನಲಾಗುತ್ತಿದೆ.

ಬಿಜೆಪಿ:

ಬಿಜೆಪಿಯಿಂದ ೫ನೇ ವಾರ್ಡ್‌ ಕವಿತಾ ಹೂಗಾರ, ೧೩ನೇ ವಾರ್ಡ್ನ ಲಕ್ಷ್ಮೀ ಸಬರದ್, ೧೫ನೇ ವಾರ್ಡ್ ಫಿರದೋಶಬೇಗಂ ಖಾಜಿ ಸಾಮಾನ್ಯ ವರ್ಗದಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಎಸ್ಸಿ ಉಪಾಧ್ಯಕ್ಷ ಸ್ಥಾನಕ್ಕಾಗಿ ೨ನೇ ವಾರ್ಡ್ ನೇತ್ರಾವತಿ ಮಾಲಗಿತ್ತಿ, ೧೯ನೇ ವಾರ್ಡ್ ಜಗನ್ನಾಥ ಭೂವಿ ಪೈಪೋಟಿ ನಡೆಸಲಿದ್ದಾರೆ.