ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯ ಬೀಳಗಿ ತಾಲೂಕಿನ ಐತಿಹಾಸಿಕ ತಾಣವಾಗಿ ಪರಿಣಮಿಸಿರುವ ಚಿಕ್ಕಸಂಗಮ ಸಮಗ್ರ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ 160 ಎಕರೆ ಪರಿಸರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆ ಬೀಳಗಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಶನಿವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಬೀಳಗಿ ತಾಲೂಕಿನ ಐತಿಹಾಸಿಕ ತಾಣವಾಗಿ ಪರಿಣಮಿಸಿರುವ ಚಿಕ್ಕಸಂಗಮ ಸಮಗ್ರ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ 160 ಎಕರೆ ಪರಿಸರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆ ಬೀಳಗಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಶನಿವಾರ ಚಾಲನೆ ನೀಡಿದರು.ಜಿಲ್ಲಾಡಳಿತ, ಅರಣ್ಯ ಹಾಗೂ ಆಹಾರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚಿಕ್ಕಸಂಗಮ ಪ್ರದೇಶವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದದಿಂದ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಭಾಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಪ್ರವಾಸಿಗರಿಗೆ ಆಕರ್ಷಕ ನೆರಳಿನಿಂದ ಕೂಡಿದ ಪರಿಸರ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಚಿಕ್ಕಸಂಗಮ ತಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯನ್ನು ಸಮಾನವಾಗಿ ಗಮನಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ದಿಯೊಂದಿಗೆ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದೆ. ಹೀಗಾಗಿ ಚಿಕ್ಕಸಂಗವನ್ನು ಹಸಿರು ತಾಣವನ್ನಾಗಿ ರೂಪಿಸಲು 160 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೇ ಈ ಭಾಗದಲ್ಲಿ 160 ಪ್ರಭೇದಗಳ ವಲಸೆ ಪಕ್ಷಿಗಳು ಕೂಡಾ ಬರುತ್ತಿದ್ದು, ಅವುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣುಗಳ ಗಿಡಗಳನ್ನು ನೆಡಲು ತಿಳಿಸಿದರು. ಸಾರ್ವಜನಿಕರು ಕೂಡಾ ಸಸಿಗಳ ಸಂರಕ್ಷಣೆಯಲ್ಲಿ ಕೈಜೋಡಿಸಲು ಮನವಿ ಮಾಡಿದರು.ಪರಿಸರ ಸಂರಕ್ಷಣೆಗೆ ಆಹಾರ ಇಲಾಖೆಯಿಂದ 10 ಲಕ್ಷ ರೂ.ಗಳ ಅನುದಾನ ನೀಡಲು ಸ್ಥಳದಲ್ಲಿದ್ದ ಜಂಟಿ ಆಹಾರ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಅವರಿಗೆ ತಿಳಿಸಿದರು. ಬೀಳಗಿ ಮತಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ದಿಗೆ ಮುಂದಾಗಿದ್ದು, 25 ಕೋಟಿ ರೂ.ಗಳ ವೆಚ್ಚದ ಬ್ರಡ್ಜ್ ಕಂ ಬ್ಯಾರೇಜ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ. ಚಿಕ್ಕಸಂಗಮದಿಂದ ಆಲಮಟ್ಟಿವರೆಗೆ ಬೋಟಿಂಗ್ ವ್ಯವಸ್ಥೆ, ಜಲ ಕ್ರೀಡೆಗಳು ಹಾಗೂ ಹೆರಕಲ್ ಭಾಗದಲ್ಲಿ ಪಿಪಿ ಮಾದರಿಯಲ್ಲಿ ಜಂಗಲ್ ರೆಸಾಲ್ಟ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಲ್ ಅಹಿರೇ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಬೀಳಗಿ ತಹಸೀಲ್ದಾರ ವಿನೋದ ಹತ್ತಳ್ಳಿ, ಆರ್.ಎಫ್.ಓಗಳಾದ ಅಮೃತ ಗಂಡೋಶಿ, ರಾಜೇಶ ಪಾಟೀಲ, ಬಿ.ಜಿ.ಕಮತರ, ಅಶೋಕ ರಾಠೋಡ, ಎ.ಸಿ.ಎಫ್ಗಳಾದ ಸೆಲಬರಾಜ ನಾಯ್ಕರ, ಪ್ರದೀಪ ರಾಠೋಡ ಸೇರಿ ಗ್ರಾಮದ ಪ್ರಮುಖರಾದ ಹನಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ, ಜಿ.ಆರ್.ಪಾಟೀಲ, ಚಿದಾನಂದ ನಂದ್ಯಾಳ, ವಿಠಲ ಕಮ್ಮಾರ ಇತರರು ಉಪಸ್ಥಿತರಿದ್ದರು.ಕೂಡಲ ಸಂಗಮ ಅಬಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಂಗಮ ದೇವಸ್ಥಾನಕ್ಕೆ ಪ್ರಾಧಿಕಾರದ ಅನುದಾನದಡಿ 1.50 ಕೋಟಿ ರೂ.ಗಳ ವೆಚ್ಚದಲ್ಲಿ ತೇರು ಹಾಗೂ ಮಂಗಳ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.-ಜೆ.ಟಿ.ಪಾಟೀಲ, ಅಧ್ಯಕ್ಷ, ಹಟ್ಟಿ ಚಿನ್ನದ ಗಣಿ ನಿಯಮಿತ ಹಾಗೂ ಬೀಳಗಿ ಶಾಸಕ