ಹಾಸನದಲ್ಲಿ ನವೆಂಬರ್‌ 7 ರಂದು ಸಪ್ನ ಬುಕ್ ಹೌಸ್ ಮಳಿಗೆ ಪ್ರಾರಂಭ: ಸಪ್ನ ಬುಕ್ ಹೌಸ್‌ನ ನಿತಿನ್‌ ಷಾ

| Published : Nov 06 2024, 12:52 AM IST

ಹಾಸನದಲ್ಲಿ ನವೆಂಬರ್‌ 7 ರಂದು ಸಪ್ನ ಬುಕ್ ಹೌಸ್ ಮಳಿಗೆ ಪ್ರಾರಂಭ: ಸಪ್ನ ಬುಕ್ ಹೌಸ್‌ನ ನಿತಿನ್‌ ಷಾ
Share this Article
  • FB
  • TW
  • Linkdin
  • Email

ಸಾರಾಂಶ

ಶಿಲ್ಪಕಲೆಗಳ ತವರೂರು ಹಾಸನ ನಗರದ ಬಿ.ಎಂ. ರಸ್ತೆ ಬಳಿ ಇದೇ ಗುರುವಾರ ಸಪ್ನ ಬುಕ್ ಹೌಸ್ ನ 22 ನೆಯ ಹೊಸ ಪುಸ್ತಕ ಮಳಿಗೆ ಪ್ರಾರಂಭವಾಗಲಿದೆ ಎಂದು ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದನಾಥ ಸ್ವಾಮಿಗಳಿಂದ 22 ನೇ ಮಳಿಗೆಯ ಶುಭಾರಂಭಕನ್ನಡಪ್ರಭ ವಾರ್ತೆ ಹಾಸನ

ಶಿಲ್ಪಕಲೆಗಳ ತವರೂರು ಹಾಸನ ನಗರದ ಬಿ.ಎಂ. ರಸ್ತೆ ಬಳಿ ಇದೇ ಗುರುವಾರ ಸಪ್ನ ಬುಕ್ ಹೌಸ್ ನ 22 ನೆಯ ಹೊಸ ಪುಸ್ತಕ ಮಳಿಗೆ ಪ್ರಾರಂಭವಾಗಲಿದೆ ಎಂದು ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಾಸನವನ್ನು ಪ್ರಾಚೀನ ಕಾಲದಿಂದಲೂ ಸಿಂಹಾಸನಪುರಿ ಎಂದು ಕರೆಯುತ್ತಿದ್ದರು. ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವಂತೆ ಸಾಂಸ್ಕೃತಿಕವಾಗಿ, ಸಾಹಿತ್ಯವಾಗಿ, ರಾಜಕೀಯವಾಗಿ ಪುರಾತನ ಕಾಲದಿಂದಲೂ ನಾಡಿನ ಮೇಲೆ ತನ್ನದೇ ಪ್ರಭಾವ ಬೀರುತ್ತಾ ಬಂದಿದೆ. ಕನ್ನಡ ಸಾಹಿತ್ಯಕ್ಕೆ ಮೊದಲ ಪಲ್ಲವಿ ಹಾಡಿದ ಹಲ್ಮಡಿ ಶಾಸನ ಬೇಲೂರು ಸಮೀಪ ಇದೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಅ.ನ. ಕೃಷ್ಣರಾಯರು, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್.ವಿ. ರಂಗಣ್ಣ, ಎಲ್. ಗುಂಡಪ್ಪ, ಎಸ್.ಎಲ್. ಭೈರಪ್ಪ, ಜಾನಪದ ತಜ್ಞ ಡಾ.ಎಸ್.ಕೆ. ಕರೀಂಖಾನ್, ಸಾರಸ್ವತ ಲೋಕ ಕಂಡ ಶ್ರೇಷ್ಠ ವಿದ್ವಾಂಸ ಪ್ರೊ.ಎಸ್.ಕೆ. ರಾಮಚಂದ್ರರಾವ್, ಹೆಸರಾಂತ ಸಾಹಿತಿಗಳಾದ ವಿಜಯಾದಬ್ಬೆ, ಬಾನು ಮುಸ್ತಾಕ್, ಎಚ್.ಜೆ. ಲಕ್ಕಪ್ಪಗೌಡ, ಮಂಗಳಾ ಸತ್ಯನ್, ಡಾ. ನಲ್ಲೂರು ಪ್ರಸಾದ್, ರೂಪ ಹಾಸನ, ಬೇಲೂರು ರಘುನಂದನ್ ಎಲ್ಲಕ್ಕಿಂತ ಮಿಗಿಲಾಗಿ ಭಾರತ ಸರ್ಕಾರದ ಪದ್ಮಭೂಷಣ ಗೌರವಕ್ಕೆ ಪಾತ್ರರಾದ ವಿಶ್ವವಿಖ್ಯಾತ ಇಂಗ್ಲಿಷ್ ಲೇಖಕ ಹಾಸನದ ರಾಜಾರಾವ್, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇಂತಹ ಮಹಾನೀಯರನ್ನು ಕೊಟ್ಟ ಈ ಶಿಲ್ಪಕಲೆಗಳ ತವರೂರು ಹಾಸನದಲ್ಲಿ ಓದುವ ಅಭಿರುಚಿಯನ್ನು ಇನ್ನಷ್ಟು ಹೆಚ್ಚಿಸಲು ಈಗ ಕನ್ನಡ ನಾಡಿನ ಸುವಿಖ್ಯಾತ ಪುಸ್ತಕ ಕಾಶಿ ಸಪ್ನ ಬುಕ್ ಹೌಸ್, ಇದೇ ಗುರುವಾರ ಮಧ್ಯಾಹ್ನ 12.30 ಕ್ಕೆ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳರ ಅಮೃತ ಹಸ್ತದಿಂದ ಓದುಗರಿಗೆ ಅರ್ಪಣೆಯಾಗುತ್ತಿದೆ ಎಂದರು.ಪುಸ್ತಕ ಎಂದರೆ ತಕ್ಷಣದಲ್ಲಿ ನೆನಪಾಗುವುದು ಸಪ್ನ ನಾಡಿನಾದ್ಯಂತ ಪುಸ್ತಕ ಪ್ರಿಯರೆಲ್ಲರ ಪ್ರೀತಿಗೆ ಭಾಜನವಾಗಿರುವ ಈ ಸಂಸ್ಥೆಗೆ ಈಗ ೫೭ ವಸಂತಗಳು ತುಂಬಿವೆ. ಇಟ್ಟ ಗುರಿ, ದಿಟ್ಟ ಹೆಜ್ಜೆ ಎಂದೂ ಹಿಂದಕ್ಕೆ ನೋಡದ, ಮುಂದೊಂದು ಹೊಸ ಮಾರ್ಗವಿದೆ ಎಂಬ ಉತ್ಸಾಹ ಭರಿತ ಬೆಳವಣಿಗೆಯೊಂದಿಗೆ ಮುಂದೆ ಮುಂದೆ ಸಾಗುತ್ತಿರುವ ಸಪ್ನ ಪುಸ್ತಕ ಕಾಶಿ ದೇಶದಲ್ಲಿಯೇ ಅತಿದೊಡ್ಡ ಪುಸ್ತಕ ಭಂಡಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಧುನಿಕ ಶೈಲಿಯ ತಂತ್ರಜ್ಞಾನವನ್ನು ಒಳಗೊಂಡಿರುವ ಒಂದು ವಿಶಿಷ್ಟ ಹಾಗೂ ವಿಶೇಷವಾದ ಪುಸ್ತಕ ಕಾಶಿ ಎಂದು ಹೇಳಿದರು. ಸಪ್ನ ಈ ಹೆಸರು ಪುಸ್ತಕ ಪ್ರಿಯರಿಗೆ ತಮ್ಮ ಪುಸ್ತಕ ದಾಹವನ್ನು ತೀರಿಸುವ ಪ್ರೀತಿಯ ಪುಸ್ತಕ ಭಂಡಾರ. 1967 ರಲ್ಲಿ 40 ಚದರ ಅಡಿಗಳ ವಿಸ್ತೀರ್ಣದಲ್ಲಿ ಪ್ರಾರಂಭವಾಗಿ ಪ್ರಸ್ತುತ 22 ಶಾಖೆಗಳನ್ನು ಒಳಗೊಂಡಂತೆ ಒಟ್ಟು ಸುಮಾರು 5.5 ಲಕ್ಷ ಚದರ ಅಡಿಗಳ ವಿಸ್ತೀರ್ಣದಲ್ಲಿ ಅಲಂಕೃತಗೊಂಡಿದೆ. ಈಗಾಗಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ, ಪುಸ್ತಕ ಸಂಗ್ರಹದ ಜೊತೆ ಸ್ಟೇಷನರಿ, ಗ್ಯಾಡ್ಡೆಟ್ಸ್ ಅಂಡ್ ಅಕ್ಸೆಸರೀಸ್, ಗಿಫ್ಟ್, ಟಾಯ್ಸ್ & ಸ್ಪೋರ್ಟ್ಸ್, ಆರ್ಟ್ & ಕ್ರಾಫ್ಟ್, ಆಫೀಸ್ ಪ್ಲೆಸ್, ಫುಡ್ ಚಾಕೋಲೆಟ್ಸ್ ಹೀಗೆ ಹಲವುಗಳಿವೆ. ಸಪ್ನ ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ಒಂದು ಉದ್ಯಮವನ್ನಾಗಿ ಜಗತ್ತಿಗೆ ತೋರಿಸಿಕೊಟ್ಟಿದೆ. ಈವರೆಗೂ ಕನ್ನಡದಲ್ಲಿ 7000ಕ್ಕೂ ಹೆಚ್ಚು ವಿಷಯ ವೈವಿದ್ಯತೆಯ ದೃಷ್ಟಿಯಿಂದ ವೈವಿದ್ಯಮಯ ಕೃತಿಗಳನ್ನು ಹಾಗೂ 600 ಕ್ಕೂ ಹೆಚ್ಚು ಪಠ್ಯ ಹಾಗೂ ಸ್ಪರ್ಧಾತ್ಮಕ ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯ ವಿಚಾರ. ಅದಷ್ಟೇ ಅಲ್ಲದೆ ಸಪ್ನ ಇಂಕ್ ಎಂಬ ಸ್ವ- ಪ್ರಕಾಶನ ಮೂಲಕ ಉದಯೋನ್ಮುಖ ಲೇಖಕರಿಗೂ ಸ್ವ - ಪ್ರಕಾಶನಕ್ಕೆ ನಾಂದಿಯಾಗಿದೆ ಎಂದರು. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ Sಚಿಠಿಟಿಚಿoಟಿಟiಟಿe.ಛಿom ಮೂಲಕ ತಾವಿದ್ದಲ್ಲಿಗೆ ಪುಸ್ತಕ/ಸಾಮಗ್ರಿ ಪೂರೈಸುವ ಸೌಲಭ್ಯವನ್ನು ಸಹ ಓದುಗರಿಗೆ ಕಲ್ಪಿಸಿಕೊಟ್ಟಿದೆ. ಪುಸ್ತಕ ಪ್ರಿಯರು ತಮ್ಮ ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ, ತಮ್ಮ ಮಕ್ಕಳ ಭವಿಷ್ಯದ ಉಜ್ವಲ ಪ್ರತಿಭೆಗಳ ಏಳಿಗೆಗಾಗಿ ನಮ್ಮ ಅಂದರೆ ಸಪ್ನದ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಈ ಅಕ್ಷರ ಕಾಶಿಯನ್ನು ಅಕ್ಷರ ಪ್ರಿಯರಿಗೆ ಪರಿಚಯಿಸಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸುವರ್ಣ ಮಹೋತ್ಸವದ ರಾಜ್ಯ ಪ್ರಶಸ್ತಿ ಪಡೆದ ಹೆಚ್.ಬಿ. ಮದನ್ ಗೌಡ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಹೆಚ್.ಎಲ್. ಮಲ್ಲೇಶಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪತ್ರಿಕಾಗೋಷ್ಠಿಯಲ್ಲಿ ಸಪ್ನ ಬುಕ್ ಹೌಸ್ ನ ಪ್ರಧಾನ ಕಚೇರಿಯ ವ್ಯವಸ್ಥಾಪಕ ಆರ್‌. ದೊಡ್ಡೇಗೌಡ, ನಿರ್ದೇಶಕರಾದ ನಿದೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಹೆಚ್.ಎಲ್. ಮಲ್ಲೇಶಗೌಡ, ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್ ಗೌಡ ಇತರರು ಉಪಸ್ಥಿತರಿದ್ದರು.