ಸಾರಾಂಶ
ಚಿತ್ರದುರ್ಗ : ಬಸವಕೇಂದ್ರ ಮುರುಘಾಮಠದಿಂದ ಪ್ರತಿವರ್ಷ ಆಚರಣೆಗೆ ಒಳಪಡುವ ಮಧ್ಯ ಕರ್ನಾಟಕದ ದಸರಾ ಉತ್ಸವವೆಂದೇ ಬಿಂಬಿತವಾಗಿರುವ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಅಕ್ಟೊಬರ್ 5 ರಿಂದ13 ರವರೆಗೆ ನಡೆಯಲಿದೆ.
ಮರುಘಾಮಠದ ಅನುಭವ ಮಂಟಪದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಗೋವಿಂದ ಎಂ.ಕಾರಜೋಳ, ಶ್ರೀ ಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಜಾತಿ, ಮತ, ಲಿಂಗ ಭೇದವಿಲ್ಲದೆ ಬಸವಾದಿ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಶೂದ್ರರಿಗೆ ಶಿಕ್ಷಣ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠ ಅಂತಹ ಅವಕಾಶ ಮಾಡಿಕೊಟ್ಟಿದೆ. ಶರಣ ಸಂಸ್ಕೃತಿ ಉತ್ಸವದಲ್ಲಿ ಗತವೈಭವದ ಚಿಂತನೆಗಳು ನಡೆಯಲಿ ಪ್ರತಿದಿನವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.
ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಮಾತನಾಡಿ, ಈ ಬಾರಿಯ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಗೌರವ ಉಪಾಧ್ಯಕ್ಷರಾಗಿ ರಾವಂದೂರು ಮುರುಘಾಮಠದ ಮೋಕ್ಷಪತಿ ಮಹಾಸ್ವಾಮಿಗಳು, ಕಾರ್ಯಾಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ.ಕಾರಜೋಳ, ಉತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಇವರನ್ನು ಆಯ್ಕೆ ಮಾಡಲಾಗಿದೆ. ಉತ್ಸವವು ಅರ್ಥಪೂರ್ಣವಾಗಿ ಸರಳವಾಗಿ ಆಯೋಜಿಸಲಾಗುವುದು. ಶ್ರೀಮಠದ ಪರಂಪರೆಯಂತೆ ಎಲ್ಲಾ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಈ ವರ್ಷಕ್ಕೆ ಪೀಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಜಯಂತಿ 150 ವರ್ಷಗಳಾಗಲಿದೆ. 53 ವರ್ಷಗಳ ಕಾಲ ಶ್ರೀ ಮಠದ ಪೀಠವನ್ನು ಅಲಂಕಸಿರುತ್ತಾರೆ. ಶ್ರೀಗಳ 100ನೇ ಜಯಂತಿಯನ್ನು ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಚರಿಸುತ್ತಾರೆ. ವರ್ಷಪೂರ್ತಿ ಜಯದೇವ ಶ್ರೀಗಳ ಕುರಿತು ಅರ್ಥಪೂರ್ಣವಾಗಿ 150 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಧ್ಯ ಕರ್ನಾಟಕದ ನಾಡ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಬಾರಿ ಪುರುಷ ಮತ್ತು ಮಹಿಳಾ ಕ್ರೀಡಾಕೂಟವನ್ನು 150ನೇ ವರ್ಷದ ಜಯಂತಿ ಅಂಗವಾಗಿ ಶ್ರೀ ಜಯದೇವ ಶ್ರೀಗಳ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ನಾಡಿನಾದ್ಯಂತ ಶಾಖಾಮಠಗಳು, ಹಾಸ್ಟೆಲ್‍ಗಳಿವೆ. ಇದು ವರ್ಷದ ಕಾರ್ಯಕ್ರಮವಾಗಬೇಕು. ಜಯದೇವ ಶ್ರೀ ಗಳ ಹೆಸರಿನ ಅಂಚೆಚೀಟಿ, ನಾಣ್ಯಗಳ ಬಿಡುಗಡೆಯಾಗಲು ಕ್ರಮವಹಿಸಬೇಕು ಎಂದು ಹೇಳಿದರು.
ಶಾಸಕ ವೀರೇಂದ್ರ ಪಪ್ಪಿ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯಲ್ಲಿ ಡಾ.ಬಸವಕುಮಾರ ಸ್ವಾಮಿಗಳು ₹5 ಲಕ್ಷ, ಡಾ.ಬಸವಜಯಚಂದ್ರ ಸ್ವಾಮಿಗಳು₹51000, ಕೆ.ಎಂ ವೀರೇಶ್ ₹50 ಸಾವಿರ, ಸಿಂಧನೂರು ಬಸವಕೇಂದ್ರ ₹25 ಸಾವಿರ, ಸಿರಾಜ್ ಭೀಮಸಮುದ್ರ ₹50 ಸಾವಿರ, ಬಸವೇಶ್ವರ ವಿದ್ಯಾಸಂಸ್ಥೆ ₹25 ಸಾವಿರ, ಶಂಕರಮೂರ್ತಿ ಭೀಮಸಮುದ್ರ ₹1 ಲಕ್ಷ, ಮೆದೇಹಳ್ಳಿ ವಿಜಯಕುಮಾರ್ ₹25 ಸಾವಿರ, ಕಂಪ್ಯೂಟರ್ ಶ್ರೀನಿವಾಸ್ ₹50 ಸಾವಿರ ಉತ್ಸವಕ್ಕೆ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು.
ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ಕೆಇಬಿ ಷಣ್ಮುಖಪ್ಪ, ಅನೀಸ್, ಮಂಜುನಾಥ ದಾಳಿಂಬೆ, ವೀರೇಂದ್ರಕುಮಾರ್ ಪಿ, ವೀರಶೈವ ಸಮಾಜ, ಅಖಿಲಭಾರತ ವೀರಶೈವ ಮಹಾಸಭೆ, ಹಾಗೂ ಇತರೆ ಸಮಾಜಗಳ ಮುಖಂಡರು, ಶಾಲಾಕಾಲೇಜುಗಳ ಮುಖ್ಯಸ್ಥರು ಇದ್ದರು.