ಸಾರಾಂಶ
ಅಮೆರಿಕಾದಲ್ಲಿ ನೆಲೆಸಿರುವ ವಸಂತ ಬೆಟ್ ಕೆರೂರ್ ದಂಪತಿ ಸ್ಥಾಪಿಸಿರುವ ದತ್ತಿಯಿಂದ ಅವಶ್ಯವಿರುವ ಸಂಸ್ಥೆಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಡಾ. ವಂಸತ ಬೆಟ್ ಕೆರೂರ್ ದಂಪತಿ ಬಡ ವಿದ್ಯಾರ್ಥಿಗಳಿಗೆ ಉದಾರ ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಿರುವುದು ಆದರ್ಶಪ್ರಾಯವಾದದ್ದು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.ನಗರದ ಸರಸ್ವತಿಪುರಂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಛಯದ ಮಂತ್ರ ಮಹರ್ಷಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ. ವಂಸತ ಬೆಟ್ ಕೆರೂರ್ ಮತ್ತು ಡಾ. ಮಂಗಳಾ ಬೆಟ್ ಕೆರೂರ್ ದತ್ತಿನಿಧಿಯ 2025ನೇ ಸಾಲಿನ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಮೆರಿಕಾದಲ್ಲಿ ನೆಲೆಸಿರುವ ವಸಂತ ಬೆಟ್ ಕೆರೂರ್ ದಂಪತಿ ಸ್ಥಾಪಿಸಿರುವ ದತ್ತಿಯಿಂದ ಅವಶ್ಯವಿರುವ ಸಂಸ್ಥೆಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ವರ್ಷ 24 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ. ಅವರ ವಿದ್ಯಾಭ್ಯಾಸ ಮುಗಿಯುವವರೆಗೂ ಆರ್ಥಿಕವಾಗಿ ಅವರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ದೇಶದಲ್ಲಿ ಬಹಳ ಶ್ರೀಮಂತರಿದ್ದಾರೆ. ಅವರು ಭಾರತದಲ್ಲೆ ಓದಿ ವಿದ್ಯಾವಂತರಾಗಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಆರ್ಥಿಕವಾಗಿ ಸದೃಢರಾಗುತ್ತಾರೆ. ಆದರೆ, ತಾಯ್ನಾಡಿನ ಜನರಿಗೆ ಸಹಾಯ ಮಾಡುವವರ ಸಂಖ್ಯೆ ವಿರಳ. ಅದಕ್ಕೆ ಅಪವಾದ ಎನ್ನುವಂತೆ ವಸಂತ್ ಬೆಟ್ ಕೆರೂರ್ ದಂಪತಿ ತಾಯ್ನಾಡಿನ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಶ್ರಮವಹಿಸಿ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಉತ್ತಮವಾದ ಉದ್ಯೋಗ ಪಡೆಯಬೇಕು. ತಂದೆ-ತಾಯಿಗಳನ್ನು ಮತ್ತು ಕುಟುಂಬವನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೊರಬೇಕು. ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಬೆಳಿಸಿಕೊಳ್ಳಬೇಕು. ಬೇಗ ಹಣವಂತರಾಗಬೇಕು ಎಂಬ ಭ್ರಮೆಯನ್ನು ಬಿಟ್ಟು ಶ್ರಮಪಟ್ಟು ಜೀವನದಲ್ಲಿ ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು.ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಡಾ.ಎ.ಎನ್. ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉದಾಸೀನ ಮಾಡದೆ ಶ್ರಮವಹಿಸಿ ಶೈಕ್ಷಣಿಕವಾಗಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕು. ಆಗ ಮಾತ್ರ ನೀಡಿರುವ ಪ್ರೋತ್ಸಾಹಕ್ಕೆ ಗೌರವ ಬರುತ್ತದೆ ಎಂದರು.ಅಮೆರಿಕದಾ ಓಹಿಯೋದಲ್ಲಿ ನೆಲೆಸಿರುವ ಡಾ. ವಂಸತ ಬೆಟ್ ಕೆರೂರ್ ಮತ್ತು ಡಾ. ಮಂಗಳಾ ಬೆಟ್ ಕೆರೂರ್ ಅವರು ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೆಚ್ಚು ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನ ಸಿಗುತ್ತಿರುವುದು ತುಂಬಾ ಸಂತೋಷದ ವಿಷಯ. ಹೆಣ್ಣುಮಕ್ಕಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ಮಾತನಾಡಲು ಕಲಿಯಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಅವರ ಅನಿಸಿಕೆಗಳನ್ನು ಹಂಚಿಕೊಂಡರು. ನಿವೇದಿತಾ ಬೆಟ್ ಕೆರೂರ್ ಅವರು ಆನ್ ಲೈನ್ ನಲ್ಲಿ ಹಾಗೂ ಡಾ. ಜಯದೇವ್ ಬೆಟ್ ಕೆರೂರ್, ಡಾ. ಅಕ್ಕಮಹಾದೇವಿ ಬೆಟ್ ಕೆರೂರ್, ಡಾ. ಸುನೀತಾ ಬೆಟ್ ಕೆರೂರ್, ನರ್ಸಿಂಗ್ ಶಾಲೆಯ ಪ್ರಾಂಶುಪಾಲೆ ರೇಣುಕಾದೇವಿ ಇದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಸ್ವಾಗತಿಸಿದರು. ಆರ್.ಕೆ. ಮಹಾದೇವಸ್ವಾಮಿ ವಂದಿಸಿದರು. ಎಚ್.ಎಸ್. ಮಾನಸ ನಿರೂಪಿಸಿದರು.