ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗದೆ ಜ್ಞಾನವಂತರಾಗಬೇಕು ಎಂದು ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ. ಮೈಸೂರು ಉಮೇಶ ತಿಳಿಸಿದರು.ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರ ಬದುಕಿನ ಅನುಭವವೇ ನಿಜವಾದ ಶಿಕ್ಷಣ ಎಂದರು.ಯುದ್ಧ ಮನುಷ್ಯನ ಬದುಕಿಗೆ ಪೂರಕವಲ್ಲ, ಮಾರಕವಾಗಿದೆ. ಅರಮನೆಯವರ ಕಾಳಜಿ ಮತ್ತು ಗುರುಮನೆಯ ದರ್ಶನ ಮೈಸೂರಿನ ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ಹೆಚ್ಚಿಸಿದೆ. ಕಲೆ ಮತ್ತು ಸಂಸ್ಕೃತಿಯಿಂದ ಮಾತ್ರ ಜಗತ್ತನ್ನು ಪ್ರೀತಿಯಿಂದ ಕಾಣಲು ಸಾಧ್ಯ. ವಿದ್ಯಾರ್ಥಿಗಳು ವರ್ತಮಾನದಿಂದ ವಿಮುಖರಾಗಬಾರದು ಎಂದು ಅವರು ಹೇಳಿದರು. ಪುಸ್ತಕ ಜೀವನದ ಸಂಗಾತಿಸಿಂಧೂರ- ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ. ರಾಮಮೂರ್ತಿರಾವ್ ಮಾತನಾಡಿ, ಪುಸ್ತಕ ಜೀವನದ ಸಂಗಾತಿ. ಉತ್ತಮ ಓದು ಮತ್ತು ಬರವಣಿಗೆ ನಿಮ್ಮನ್ನು ಕ್ರಿಯಾಶೀಲಗೊಳಿಸುತ್ತದೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಾಯಕ. ವಿದ್ಯಾರ್ಥಿಗಳು ಧೈರ್ಯ, ಶೀಘ್ರತೆ ಮತ್ತು ನೈಪುಣ್ಯತೆಯಿಂದ ಸವಾಲುಗಳನ್ನು ಎದುರಿಸಬೇಕು. ವಿದ್ಯಾರ್ಥಿಗಳು ಸ್ವಯಂ ಅವಲೋಕನ ಮಾಡಿಕೊಂಡು ತಮ್ಮ ಗುರಿ ಸಾಧಿಸಿ ಎಂದರು.ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಿಸಿದ ಟೆಕ್ ಮಹೇಂದ್ರ ಬಿಸಿನೆಸ್ ಎಚ್ಆರ್ ಬಿ.ಎಚ್. ಹರ್ಷಿತಾ ರಾವ್ ಮಾತನಾಡಿ, ನನ್ನ ಸಾಧನೆಗೆ ಈ ಕಾಲೇಜಿನ ಕೊಡುಗೆ ಅಪಾರ. ನಿಮಗೆ ಇಷ್ಟವಾಗುವ ಕ್ಷೇತ್ರಗಳನ್ನು ಆಯ್ದುಕೊಂಡು, ಪ್ರಸ್ತುತ ಜಗತ್ತಿಗೆ ತಕ್ಕಂತೆ ಬದುಕಿ. ಎಐ ಅನ್ನು ಮಿತವಾಗಿ ಬಳಸಿ ಎಂದು ಸಲಹೆ ನೀಡಿದರು.ಸಾಂಸ್ಕೃತಿಕ ಮತ್ತು ಸಾಹಿತ್ಯಕ ವರದಿಯನ್ನು ಬಿ.ಎಸ್. ವಿನುತಾ, ಕ್ರೀಡಾ ವರದಿಯನ್ನು ಎಸ್. ಗೌತಮಿ ಮಂಡಿಸಿದರು. ವಿದ್ಯಾರ್ಥಿಗಳಿಗೆ ಗಣ್ಯರಿಂದ ದತ್ತಿ ಪುರಸ್ಕಾರ ಬಹುಮಾನ ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಸಾಂಸಾ ವೇದಿಕೆಯ ಸಂಚಾಲಕ ಹೊನ್ನಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್, ದೈಹಿಕ ವಿಭಾಗದ ನಿರ್ದೇಶಕಿ ಎ. ರಶ್ಮಿ ಇದ್ದರು. ಧಾತ್ರಿ ವೃಂದದವರು ಪ್ರಾರ್ಥಿಸಿದರು. ಅಪರಂಜಿ ಸ್ವಾಗತಿಸಿದರು. ಚಂದನ ವಂದಿಸಿದರು. ಡಿ.ವೈ. ತೃಪ್ತಿ ನಿರೂಪಿಸಿದರು.----ಬಾಕ್ಸ್...ಪೊಲೀಸರಿಂದ ಕ್ಯೂಆರ್ ಕೋಡ್ ಅನಾವರಣಇದೇ ವೇಳೆ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆ ವತಿಯಿಂದ ಯುವಜನರಲ್ಲಿ ಮಾದಕ ವಸ್ತು ಸೇವನೆ ತಡೆಗಟ್ಟುವ ಉದ್ದೇಶದಿಂದ ಕಾಲೇಜಿನಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಸರಸ್ವತಿಪುರಂ ಠಾಣೆಯ ಇನ್ಸ್ ಪೆಕ್ಟರ್ ಜಿ. ಪುರುಷೋತ್ತಮ್, ಎಸ್ಐ ರಮ್ಯಾ ಅವರು ಕ್ಯೂಆರ್ ಕೋಡ್ ಅನಾವರಣಗೊಳಿಸಿದರು.ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಅನ್ನು ಬಳಸುವ ಮುಖಾಂತರ ಮಾದಕ ವಸ್ತು ಸೇವನೆ ಮತ್ತು ಮಾರಾಟ ಜಾಲದ ಕುರಿತು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವ ಮುಖಾಂತರ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಯುವ ಜನರಲ್ಲಿ ಹೆಚ್ಚುತ್ತಿರುವ ಮಾದಕ ಸೇವನೆಯನ್ನು ತಡೆಗಟ್ಟಲು ಸಹಕರಿಸಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸರು ಅಭಯ ನೀಡಿದರು.