ಪರಂಪರೆ ಕೇವಲ ಆಚರಣೆಯ ರೂಪದಲ್ಲಿ ಇಲ್ಲ. ಅದರ ಹಿಂದಿರುವ ಜೀವನ ದರ್ಶನ ಅರ್ಥ ಮಾಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮೈಸೂರುಸನಾತನ ಧರ್ಮ ಎಂಬುದು ಕೇವಲ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಶಾಶ್ವತವಾದ ಮೌಲ್ಯ ಸೂಚಿಸುತ್ತದೆ ಎಂದು ಶಾರದಾ ವಿಶ್ವ ಭಾವೈಕ್ಯ ಆಶ್ರಮದ ಅಧ್ಯಕ್ಷೆ ಮಾತಾ ಅಮೋಘಮಯಿ ಅಭಿಪ್ರಾಯಪಟ್ಟರು.ನಗರದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಉಡುಪಿಯ ಶ್ರೀಕಾಣಿಯೂರು ಮಠ, ಶ್ರೀಕೃಷ್ಣಧಾಮ ಹಾಗೂ ವಿಶ್ವ ಹಿಂದೂ ಪರಿಷದ್ ವತಿಯಿಂದ ಶನಿವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ‘ಸನಾತನ ಹಿಂದು ಧರ್ಮದ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮಾತನಾಡಿದರು.ಪರಂಪರೆ ಕೇವಲ ಆಚರಣೆಯ ರೂಪದಲ್ಲಿ ಇಲ್ಲ. ಅದರ ಹಿಂದಿರುವ ಜೀವನ ದರ್ಶನ ಅರ್ಥ ಮಾಡಿಕೊಳ್ಳಬೇಕು. ಸಂಸ್ಕೃತಿ ಉಳಿಯಬೇಕಾದರೆ ಸಂಸ್ಕಾರ ಉಳಿಯಬೇಕು. ಸಂಸ್ಕಾರ ಉಳಿಯಬೇಕಾದರೆ ಕುಟುಂಬದಲ್ಲಿ ಮೌಲ್ಯಗಳ ಬದುಕು ಇರಬೇಕು. ಆ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಮಾತಾ ಅಮೃತಾನಂದಮಯಿ ಮಠದ ಅಧ್ಯಕ್ಷ ಆತ್ಮನಿರತಾಮೃತ ಚೈತನ್ಯರು ನಶಾಮುಕ್ತತೆಯ ಬಗ್ಗೆ ಯುವಜನರಿಗೆ ಜಾಗೃತಿ’ ಕುರಿತು ಮಾತನಾಡಿ, ಯುವಜನರ ಶಕ್ತಿಯನ್ನು ನಾಶದ ಕಡೆಗೆ ಹೋಗಲು ಬಿಡದೆ, ರಾಷ್ಟ್ರ ನಿರ್ಮಾಣದ ಕಡೆಗೆ ಕೊಂಡೊಯ್ಯಬೇಕು. ಇದಕ್ಕಾಗಿ ಸರ್ಕಾರ, ಧಾರ್ಮಿಕ ಸಂಸ್ಥೆಗಳು, ಸಮಾಜ, ಕುಟುಂಬಗಳು ಹಾಗೂ ವಿದ್ಯಾಸಂಸ್ಥೆಗಳೂ ಕೈ ಜೋಡಿಸಬೇಕು ಎಂದರು.ನಶೆ, ಮಾದಕ ವಸ್ತುಗಳ ಬಳಕೆ ಹಾಗೂ ಮದ್ಯಪಾನದಂತಹ ವ್ಯಸನಗಳ ಪರಿಣಾಮ ಇವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ; ಕುಟುಂಬ, ಸಮಾಜ ಮತ್ತು ರಾಷ್ಟ್ರದ ಮೇಲೆಯೂ ಪರಿಣಾಮ ಬೀರುವಂತಹ ವಿಚಾರಗಳಾಗಿವೆ ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಧರ್ಮಸಭೆ ಉದ್ಘಾಟಿಸಿದರು. ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥರು, ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದ, ಮುಡುಕನಪುರ ಹಲವಾರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಹರೀಶಗೋಪಾಲ ಪೂಜಾರ್ ಗುರೂಜಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.