ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹಿಂದಿನ ಕಾಲದಲ್ಲಿ ಸರಸ್ವತಿ ಪುತ್ರರು ಕೇವಲ ಸರಸ್ವತಿ ಪುತ್ರರಾಗಿಯೇ ಇರುತ್ತಿದ್ದರು. ಆದರೆ ಈಗ ತಂತ್ರಜ್ಞಾನದ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸರಸ್ವತಿ ಪುತ್ರರು ಲಕ್ಷ್ಮೀ ಪುತ್ರರಾಗುತ್ತಿದ್ದಾರೆ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಹೇಳಿದರು.
ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೃತಕ ಬುದ್ದಿವಂತಿಕೆ: ಒಂದು ಪಕ್ಷಿನೋಟ ಕುರಿತು ಅವರು ಉಪನ್ಯಾಸ ನೀಡಿದರು.ತಂತ್ರಜ್ಞಾನದ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸರಸ್ವತಿ ಪುತ್ರರು ಲಕ್ಷ್ಮೀ ಪುತ್ರರಾಗುತ್ತಿದ್ದಾರೆ. ಜಗತ್ತಿನ ಉತ್ತಮ ಪುಸ್ತಕಗಳನ್ನು ಒಂದೇ ವೇದಿಕೆಯಲ್ಲಿ ದೊರೆಯುವ ಸಾಫ್ಟ್ ವೇರ್ ಕಂಡುಹಿಡಿದ ಎಂಜಿನಿಯರ್ ಈಗ 180 ಮಿಲಿಯನ್ ಒಡೆಯ. ಅಂತೆಯೇ ಕೆಲವು ಸಮುದಾಯದವರು ಸಣ್ಣ-ಸಣ್ಣ ಗಾಜಿನ ಚೂರನ್ನು ತಮ್ಮ ಬಟ್ಟೆಗಳಿಗೆ ಹೊಲೆದುಕೊಂಡು ಧರಿಸಿಕೊಳ್ಳುತ್ತಾರೆ. ಇದನ್ನೇ ಒಬ್ಬಾತ ಗಾಜಿನ ಚೂರು ಲೇಪಿತ ಟೈಗಳನ್ನು ಇ-ಮಾರುಕಟ್ಟೆಗೆ ಪರಿಚಯಗೊಳಿಸಿದ, ಆತನು ಲಾಭಗಳಿಸಿದ, ಅದನ್ನು ತಯಾರು ಮಾಡಿಕೊಟ್ಟ ಮಹಿಳೆಯು ಹಣಗಳಿಸಿಕೊಂಡರು ಎಂದು ಉದಾಹರಣೆ ಸಹಿತ ತಿಳಿಸಿದರು.
ಮಾಹಿತಿ- ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯು ಪ್ರಮುಖ ವೇದಿಕೆ. ಇದನ್ನು ಬಳಸಿಕೊಳ್ಳುವವರು ತಮಗೆ ಬೇಕಾದ ಜ್ಞಾನದ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ನಾವೀಗ ಜ್ಞಾನಯುಗದಲ್ಲಿ ಇದ್ದೇವೆ. ಈ ಜಗತ್ತು ವೆಬ್, ಕ್ಲೌಡ್, ಐಒಟಿ ಮುಂತಾದ ಯಾಂತ್ರಿಕ ಕಲಿಕೆಯ ಸಹಭಾಗಿತ್ವದಲ್ಲಿ ನಡೆಯುತ್ತಿದೆ.ಒಂದು ರೀತಿ ಜ್ಞಾನವೇ ವ್ಯವಹಾರಿಕ ಸರಕಾಗಿ ಮಾರ್ಪಟ್ಟಿದ್ದೂ, ಜಗತ್ತಿನಾದ್ಯಂತ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತಿದೆ ಎಂದು ಅವರು ವೈಜ್ಞಾನಿಕವಾಗಿ ವಿಶ್ಲೇಷಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ವಿ.ಆರ್. ಶೈಲಜಾ ಇದ್ದರು.