ವಿಪ್‌ ಉಲ್ಲಂಘಿಸಿದ್ದ ಸರಸ್ವತಿ ದೋಂಗಡಿ ಸದಸ್ಯತ್ವ ರದ್ದು

| Published : Feb 11 2024, 01:48 AM IST / Updated: Feb 11 2024, 03:31 PM IST

Sarswati Dongadi

ಸಾರಾಂಶ

ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದ ಬಿಜೆಪಿಯ ಸದಸ್ಯೆ ಸರಸ್ವತಿ ವಿನಾಯಕ ದೋಂಗಡಿ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ರದ್ದುಗೊಳಿಸಿ ಆದೇಶಿಸಿದ್ದಾರೆ.

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದ ಬಿಜೆಪಿಯ ಸದಸ್ಯೆ ಸರಸ್ವತಿ ವಿನಾಯಕ ದೋಂಗಡಿ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ರದ್ದುಗೊಳಿಸಿ ಆದೇಶಿಸಿದ್ದಾರೆ.

ಕಳೆದ ವರ್ಷ ಅಂದರೆ 2023ರ ಜೂನ್ 20ರಂದು ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆಯಿತ್ತು. ಬಿಜೆಪಿ ಪಕ್ಷದಿಂದ ವಿಪ್ ಕೂಡ ಜಾರಿಯಾಗಿತ್ತು. ಆಗ ವಾರ್ಡ್ ನಂ- 54ರ ಸದಸ್ಯೆ ಸರಸ್ವತಿ ವಿನಾಯಕ ದೋಂಗಡಿ ಚುನಾವಣೆಗೆ ಗೈರಾಗಿದ್ದರು. 

ಇದರಿಂದ ವಿಪ್ ಉಲ್ಲಂಘನೆಯಾಗಿದೆ‌. ಪಕ್ಷಾಂತರ ಕಾಯ್ದೆಯಡಿ ದೋಂಗಡಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅವರು, 2023ರ ಜುಲೈ 13 ಹಾಗೂ 2023ರ ಸೆಪ್ಟೆಂಬರ್ 1ರಂದು ಪ್ರಾದೇಶಿಕ ಆಯುಕ್ತರಿಗೆ ದೂರು ದಾಖಲಿಸಿದ್ದರು.

ಈ ದೂರಿನನ್ವಯ ವಿಚಾರಣೆ‌ ನಡೆಸಿದ ಪ್ರಾದೇಶಿಕ ಆಯುಕ್ತರು, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ( ಪಕ್ಷಾಂತರ ನಿಷೇಧ ಕಾಯ್ದೆ 1987ರ ಕಲಂ 3(1)(b)) ಅಡಿಯಲ್ಲಿ ಉಲ್ಲಂಘನೆಯಾಗಿದ್ದರಿಂದ ಕಲಂ 4 (2) (||) ಇದರಡಿ ತಮಗಿರುವ ಅಧಿಕಾರ ಚಲಾಯಿಸಿ ಸರಸ್ವತಿ ದೋಂಗಡಿ ಅವರ ಸದಸ್ಯತ್ವವನ್ನು ರದ್ದು ಪಡಿಸಿ ಆದೇಶಿಸಿಸಿದ್ದಾರೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟನ್ನವರ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ: ಆಗ ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಬಿಜೆಪಿ ತೊರೆದು ಕಾಂಗ್ರೆಸಗೆ ತೆರಳಿದ್ದರು. ಆಗಲೇ ಮೇಯರ್- ಉಪಮೇಯರ್ ಚುನಾವಣೆ ಎದುರಾಗಿತ್ತು. 

ಆಗ ಎಲ್ಲ ಪಾಲಿಕೆಯಲ್ಲೂ ಆಪರೇಷನ್ ಹಸ್ತ ಆಗುತ್ತದೆ. ಬಿಜೆಪಿಯಿಂದ ಅಧಿಕಾರ ಕಾಂಗ್ರೆಸ್ ವಶಕ್ಕೆ‌ ಹೋಗುತ್ತದೆ ಎಂಬ ಗುಲ್ಲು ಹಬ್ಬಿತ್ತು. ಹೀಗಾಗಿ, ಬಿಜೆಪಿ ಎಲ್ಲರಿಗೂ ವಿಪ್ ಜಾರಿ ಮಾಡಿತ್ತು. 

ಜತೆಗೆ ಎಲ್ಲ ಸದಸ್ಯರನ್ನು ದಾಂಡೇಲಿ ಸಮೀಪದ ರೆಸಾರ್ಟ್ ಗೆ ಎರಡು ದಿನ ಕರೆದುಕೊಂಡು ಹೋಗಿತ್ತು. ಆದರೆ ಸರಸ್ವತಿ ದೋಂಗಡಿ ಮಾತ್ರ ರೆಸಾರ್ಟಗೂ ಹೋಗಿರಲಿಲ್ಲ. ಜತೆಗೆ ಚುನಾವಣೆಗೂ ಹಾಜರಾಗಿರಲಿಲ್ಲ. 

ಹೀಗಾಗಿ, ಅವರ ಸದಸ್ಯತ್ವ ರದ್ದು ಪಡಿಸಬೇಕೆಂದು ಪಕ್ಷದ ಆಗಿನ ಜಿಲ್ಲಾಧ್ಯಕ್ಷ ಕಪಟಕರ ಕೋರಿ ದೂರು ಸಲ್ಲಿಸಿದ್ದರು.