ಸಾರಾಂಶ
ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಸರಸ್ವತಿ ಪಿಯು ಕಾಲೇಜಿನ ಐದು ವರ್ಷದ ಸಾಧನೆಯನ್ನು ಗಮನಿಸಿದ್ದೇನೆ. ನಿರಂತರವಾಗಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿಕೊಂಡು ಬಂದಿರುವ ಸಂಸ್ಥೆಯ ಕಾರ್ಯಕ್ಷಮತೆ ನಿಜಕ್ಕೂ ಮೆಚ್ಚುವಂಥದ್ದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿಯು ಕಾಲೇಜಿಗೆ ಸೋಮವಾರ ಸಂಜೆ ಭೇಟಿ ನೀಡಿದ್ದ ಸಚಿವ ಮಧು ಬಂಗಾರಪ್ಪ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ನಿರಂತರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕರ ಸಂಪೂರ್ಣ ಶ್ರಮವೇ ಮುಖ್ಯ ಕಾರಣ. ಅನುದಾನ ರಹಿತವಾಗಿದ್ದರೂ ಶೇ. ೧೦೦ ಫಲಿತಾಂಶ ಗಳಿಕೆಗೆ ವಿದ್ಯಾರ್ಥಿಗಳ ಸಾಧನೆ ಹಾಗೂ ಸಂಸ್ಥೆಯ ಪ್ರೋತ್ಸಾಹವೂ ಇಲ್ಲಿ ಜತೆಯಾಗಿದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಶಿಕ್ಷಣದಿಂದ ಮಾತ್ರ ದೇಶ ಮುನ್ನಡೆಸಲು ಸಾಧ್ಯ. ಹೀಗಾಗಿ ಶಿಕ್ಷಣದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲೆಗಳಿಗೆ ರ‍್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರ‍್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದೆ ಎಂದರು.ಪಿಯು ಪರೀಕ್ಷೆಯಲ್ಲಿ ಕಡಿಮೆ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ರೀತಿಯಾಗಿ ಒಂದು ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಗುಣಗಳಿರುತ್ತವೆ. ಕೆಲವು ಲೋಪಗಳಿಂದ ಅದು ಕೈತಪ್ಪಿಹೋಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿನೂತನ ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸಿದ್ದೇವೆ. ಇದರಿಂದ ಎಲ್ಲ ಸ್ತರದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ೭೯ ಸಾವಿರ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆ ಬರೆದು ಯಶಸ್ಸು ಕಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ರಾಜ್ಯಮಟ್ಟದಲ್ಲಿ ೫ನೇ ಸ್ಥಾನ ಪಡೆದ ಸಾಗರ ನಾಯ್ಕ ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ೬ನೇ ಸ್ಥಾನ ಪಡೆದ ಅನನ್ಯಾ ಭಾಗ್ವತ್ ಅವರನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿ ಶುಭ ಹಾರೈಸಿದರು.ಕೊಂಕಣ ಎಜುಕೇಶನ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಭೀಮಣ್ಣ ನಾಯ್ಕ, ಟ್ರಸ್ಟಿನ ಅಧ್ಯಕ್ಷ ವಿ.ಆರ್. ನಾಯಕ, ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಇದ್ದರು. ಶಿಕ್ಷಕ ಚಿದಾನಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಕಿರಣ ಭಟ್ಟ ವಂದಿಸಿದರು.