ಭವ್ಯ ಭಾರತ ಕನಸು ಸಾಕಾರಗೊಳಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್

| Published : Nov 03 2025, 02:15 AM IST

ಭವ್ಯ ಭಾರತ ಕನಸು ಸಾಕಾರಗೊಳಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ೫೬೨ ಸಂಸ್ಥಾನಗಳನ್ನು ಭಾರತ ದೇಶದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸಿತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೇಶಪ್ರೇಮ, ಸಂಘಟನೆ, ದೂರದರ್ಶಿತ್ವ, ಸಮರ್ಥ ನಾಯಕತ್ವದ ಫಲವಾಗಿ ಭಾರತ ದೇಶ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿತು ಎಂದು ಸಾಹಿತಿ ಡಾ.ವಿಜಯ್ ರಾಂಪುರ ಬಣ್ಣಿಸಿದರು.

ತಾಲೂಕಿನ ಕೆಂಗಲ್ ಬಳಿಯ ಹೊಂಬೇಗೌಡ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಸಾಧನೆ ಕುರಿತು ಮಾತನಾಡಿದರು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ೫೬೨ ಸಂಸ್ಥಾನಗಳನ್ನು ಭಾರತ ದೇಶದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸಿತು. ತಮ್ಮ ಮುತ್ಸದ್ಧಿತನದಿಂದ ಸ್ವತಂತ್ರ ಭಾರತವನ್ನು ಕಾಡುತ್ತಿದ್ದ ನೂರಾರು ಸಂಸ್ಥಾನಗಳ ರಾಜರ ವಿಲೀನ ವಿರೋಧ, ಪಾಕಿಸ್ತಾನದ ಯುದ್ಧ, ನಿರಾಶ್ರಿತರ ಸಮಸ್ಯೆ, ದೊಂಬಿ, ಆಂತರಿಕ ಕ್ರಾಂತಿ ಇತ್ಯಾದಿಗಳನ್ನು ತಮ್ಮ ಚತುರತನದಿಂದ ಮೆಟ್ಟಿ ನಿಂತು ಕೇವಲ ೧೮ ತಿಂಗಳುಗಳಲ್ಲಿ ಭಾರತವನ್ನು ಏಕೀಕರಣಗೊಳಿಸಿ, ಭವ್ಯ ಭಾರತ ನಿರ್ಮಾಣದ ಕನಸನ್ನು ಸಾಕರಗೊಳಿಸಿದ ಧೀಮಂತ ವ್ಯಕ್ತಿತ್ವ ಪಟೇಲರದು. ಇಂತಹ ಅಪ್ರತಿಮ ರಾಷ್ಟ್ರ ಪ್ರೇಮಿಯನ್ನು ಪಡೆದ ನಾವೇ ಧನ್ಯರು. ಅವರು ಹಾಕಿದ ಭಾರತದ ಏಕತೆಯ ಭದ್ರ ಬುನಾದಿಯನ್ನು ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಹೊಂಬೇಗೌಡ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಆರ್. ಮಹೇಶ್ ಚಂದ್ರ ಮಾತನಾಡಿ, ಸ್ವಾತಂತ್ರ್ಯವೀರರು ಪ್ರೀತಿ ಮತ್ತು ವಿಶ್ವಾಸಗಳಿಂದ ಕಟ್ಟಿದ ದೇಶವಿದು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ತತ್ವಾದರ್ಶಗಳಿಂದ ಇಂದಿಗೂ ಅಜರಾಮರರಾಗಿದ್ದಾರೆ. ಯುವಜನರು ಇಂತಹ ಮಹಾನ್ ರಾಷ್ಟ್ರ ಸೇವಕರ ಆದರ್ಶಗಳನ್ನು ಮೈಗೂಡಿಸಿಕೊಂಡು, ಏಕತೆ ಸಾಧಿಸುವತ್ತ ಗಮನ ಹರಿಸಬೇಕು ಎಂದರು.

ಪ್ರಾಂಶುಪಾಲ ಡಿ.ಪಿ. ಶಂಕರಲಿಂಗೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಡಿ.ಎಸ್. ಶಿಖರೇಶ್, ಎಲ್.ಎಂ. ಮರಿದೇವರು, ಸುಧಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಪೊಟೋ೩ಸಿಪಿಟಿ4:

ಚನ್ನಪಟ್ಟಣ ತಾಲೂಕಿನ ಹೊಂಬೇಗೌಡ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಆಯೋಜಿಸಲಾಗಿತ್ತು.