ಸ್ವ ಉದ್ಯೋಗದಿಂದ ಮಹಿಳೆಯರ ಬದುಕು ಹಸನು

| Published : Sep 10 2024, 01:30 AM IST / Updated: Sep 10 2024, 01:31 AM IST

ಸಾರಾಂಶ

ಮಹಿಳೆಯರು ತಮಗಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿದರೆ ಮಹಿಳೆಯರ ಜೀವನ ಹಸನಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಯಂ ಉದ್ಯೋಗದಿಂದ ಮಹಿಳೆಯರ ಬದುಕು ಹಸನಾಗಲಿದೆ ಎಂದು ಮೈಸೂರಿನ ರುಡ್‌ ಸೆಟ್ ಸಂಸ್ಥೆ ನಿರ್ದೇಶಕಿ ಸರಿತಾ ಅಭಿಪ್ರಾಯಪಟ್ಟರು.

ನಗರದಲ್ಲಿ ಆಯೋಜಿಸಿದ್ದ ಉಂಚಿ ಉಡಾನ್ ತರಬೇತಿ ಕಾರ್ಯಕ್ರಮದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರು ತಮಗಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿದರೆ ಮಹಿಳೆಯರ ಜೀವನ ಹಸನಾಗುತ್ತದೆ ವಾಸ್ತು ಹೌಸಿಂಗ್ ಫೈನಾನ್ಸ್, ಭಾರತ್ ಕೇರ್ಸ್ ಹಾಗೂ ಸಾಯ್ಲ್ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಕುಟುಂಬದ ಆರ್ಥಿಕ ನಿರ್ವಹಣೆ ಈಗ ಕೇವಲ ಪುರುಷರಿಗೆ ಸೀಮಿತವಾಗಿಲ್ಲ, ಮಹಿಳೆಯರೂ ಕೂಡ ಸಮಾನ ಜವಾಬ್ದಾರಿ ಹೊರಬೇಕಾಗುತ್ತದೆ, ಅದಕ್ಕೆ ಮಹಿಳೆಯರು ಅವಶ್ಯವಿರುವ ಕೌಶಲ್ಯಗಳನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಪ್ರಾರಂಭ ಮಾಡಿದರೆ ಸಂಪಾದನೆಯೂ ಆಗುತ್ತದೆ ಜೊತೆಗೆ ಕುಟುಂಬವನ್ನು ಕೂಡ ಸುಲಭವಾಗಿ ನಿರ್ವಹಣೆ ಮಾಡಬಹುದು ಎಂದರು. ಸಾಯ್ಲ್ ಫೌಂಡೇಶನ್ ನ ನಾರಾಯಣ ಹೆಗಡೆ ಮಾತನಾಡಿ, ಉಂಚಿ ಉಡಾನ್ ಯೋಜನೆಯಡಿ ಎಂಭತ್ತು ಜನ ಸ್ವಯಂ ಉದ್ಯೋಗಿ ಮಹಿಳೆಯರಿಗೆ ಒಂಭತ್ತು ದಿನಗಳ ಕಾಲ ಉದ್ಯಮಶೀಲತಾ ತರಬೇತಿ ಆರ್ಥಿಕ ಸಾಕ್ಷರತೆ ಹಾಗೂ ತಾಂತ್ರಿಕ ಸಾಕ್ಷರತೆ ತರಬೇತಿಗಳನ್ನು ನೀಡಲಾಗಿದೆ ನಂತರ ಅವರಲ್ಲಿ ಅರವತ್ಮೂರು ಜನರನ್ನು ಎರಡನೇ ಹಂತಕ್ಕೆ ಆಯ್ಕೆಮಾಡಿಕೊಂಡು ಮೂರು ದಿನಗಳ ಕಾಲ ವ್ಯವಹಾರ ಯೋಜನೆಯ ಬಗ್ಗೆ ತರಬೇತಿ ನೀಡಲಾಗಿದ್ದು, ಮುಂದಿನ ಹಂತದಲ್ಲಿ ನಲವತ್ತೆರಡು ಜನರನ್ನು ಆಯ್ಕೆ ಮಾಡಿ ಅವರ ಉದ್ಯಮಕ್ಕೆ ಅವಶ್ಯವಿರುವ ಯಂತ್ರಗಳು ಹಾಗೂ ಇತರೆ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ಭಾರತ್ ಕೇರ್ಸ್ ಸಂಸ್ಥೆಯ ಅಧಿಕಾರಿಗಳಾದ ಪೂಜಾ, ಭಾರತಿ, ಆಶಿಶ್ ತ್ರಿಪಾಠಿ ಮಾತನಾಡಿದರು, ತರಬೇತಿ ಪಡೆದ ಎಲ್ಲ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಪಜ್ವಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿವಮೂರ್ತಿ, ಪವಿತ್ರ, ಪ್ರಶಾಂತ್ ಇದ್ದರು.