ಸಾರಾಂಶ
- ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿ. ವಿಶ್ವನಾಥ್
- ಎಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ರಾಷ್ಟ್ರಪಿತ ಗಾಂಧೀಜಿ 76ನೇ ಹುತಾತ್ಮ ದಿನಾಚರಣೆ----
ಕನ್ನಡಪ್ರಭ ವಾರ್ತೆ ಮೈಸೂರುನಗರದ ಗಂಗೋತ್ರಿ ಬಡಾವಣೆಯಲ್ಲಿರುವ ಎಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ರಾಷ್ಟ್ರಪಿತ ಗಾಂಧೀಜಿ ಅವರ 76ನೇ ಹುತಾತ್ಮ ದಿನ ಆಚರಿಸಿತು.
ಸಂಸ್ಥೆಯ ಕಾರ್ಯದರ್ಶಿ ಸರೋಜ ತುಳಸೀದಾಸ್ ಮಾತನಾಡಿ, ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ದುಡಿದ ಅವಿಸ್ಮರಣೀಯ ತ್ಯಾಗವನ್ನು ಸ್ಮರಿಸಿತು. ಗಾಂಧೀಜಿ ಹತ್ಯೆಯಾದ ಸಂದರ್ಭದಲ್ಲಿ ಅವರ ಒಡನಾಡಿಯಾಗಿದ್ದ ತಮ್ಮ ಮಾವನವರಾದ ಎಚ್.ಸಿ. ದಾಸಪ್ಪ ಅವರು ಜತೆಗಿದ್ದರು. ಹಂತಕನ ಗುಂಡೇಟಿಗೆ ಹೇರಾಮ್ ಅಂತ ಕುಸಿದ ಗಾಂಧೀಜಿ ಅವರ ಬಾಯಿಗೆ ಅಲ್ಲೇ ಇದ್ದ ಚೆಂಬಿನಿಂದ ಮೊದಲಿಗೆ ನೀರು ಬಿಟ್ಟವರು ಎಚ್.ಸಿ. ದಾಸಪ್ಪನವರು. ಅದರ ನೆನಪಿಗಾಗಿ ಎಚ್.ಸಿ. ದಾಸಪ್ಪನವರು ಗಾಂಧೀಜಿ ಚಿತಾಭಸ್ಮವನ್ನು ಕರ್ನಾಟಕಕ್ಕೆ ತರುವಾಗ, ಆ ಚೆಂಬಿನ ಮುಚ್ಚಳವನ್ನೂ ತಂದರು. ಗಾಂಧೀಜಿ ಚಿತಾಭಸ್ಮ ಮತ್ತು ಚೆಂಬಿನ ಮುಚ್ಚಳವನ್ನು ಈಗಲೂ ಅರಸೀಕೆರೆಯಲ್ಲಿರುವ ಕಸ್ತೂರ್ಬಾ ಆಶ್ರಮದಲ್ಲಿ ಇಡಲಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಖಜಾಂಚಿ ಹಾಗೂ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಗಾಂಧೀಜಿ ವಿಚಾರಧಾರೆಗಳು ಸರ್ವಕಾಲಕ್ಕೂ ಸಲ್ಲುವಂಥದ್ದು. ಹಲವು ಭಾಷೆ, ಹಲವು ಧರ್ಮ, ಪಂಗಡ ಹೊಂದಿರುವ ಭಾರತ ಭಿನ್ನತೆಯಲ್ಲಿ ಏಕತೆ ಕಾಣಬೇಕಾದರೆ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆ ಅತಿ ಮುಖ್ಯ ಎಂದು ಭಾವಿಸಿದ್ದರು. ಆದರೆ, ಗಾಂಧೀಜಿ ಅವರ ಭವ್ಯ ಭಾರತದ ದೂರದೃಷ್ಟಿ ಕೋನ ಅರಿಯದ ತಿಳಿಗೇಡಿಗಳಿಗೆ ಅಂದೂ ಅರ್ಥವಾಗಲಿಲ್ಲ. ಇಂದೂ ಸಹ ಗಾಂಧೀಜಿ ಅಂತರ್ಯ ಅರಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ಸರ್ಕಾರದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಡಾ.ಪಿ. ಬೋರೇಗೌಡ ಮಾತನಾಡಿ, ನಮ್ಮ ಸಮಾಜದಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನ ಗೌರವಿಸುವ ಕೆಲಸವಾಗುತ್ತಿಲ್ಲ. ಭ್ರಷ್ಟರನ್ನು ಆದರಿಸುವ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಬೀಳುತ್ತಿದೆ ಎಂದು ವಿಷಾದಿಸಿದರು.ಕಾರ್ಯಕ್ರಮಕ್ಕು ಮುನ್ನ ಗಾಂಧೀಜಿ ಅವರ 76ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಒಂದು ನಿಮಿಷ ಮೌನಾಚರಿಸಿತು. ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ವಿಶ್ರಾಂತ ಐಜಿಪಿ ಅರ್ಕೇಶ್, ಕುಂಬಾರಕೊಪ್ಪಲಿನ ಹಿರಿಯರಾದ ಕೆ.ಎಂ. ಬಸವೇಗೌಡ, ನಿವೃತ್ತ ಅಧಿಕಾರಿಗಳಾದ ಶ್ರೀಕಂಠಸ್ವಾಮಿ ಹಾಗೂ ಎಚ್.ಸಿ. ದಾಸಪ್ಪ ಸಾರ್ವಜನಿಕ ವಿಚಾರಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು. ಪತ್ರಿಕಾ ಕಾರ್ಯದರ್ಶಿ ಎಸ್. ಪ್ರಕಾಶ್ ಬಾಬು ಸ್ವಾಗತಿಸಿ, ವಂದಿಸಿದರು.